ಮಂಗಳೂರು: ಗರೋಡಿ ಬಳಿ 2022ರ ನ. 19ರಂದು ನಡೆದ ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿ ಅವರ ಉಜ್ಜೋಡಿಯ ಮನೆಯನ್ನು ‘ಗುರು ಬೆಳದಿಂಗಳು ಟ್ರಸ್ಟ್’ ದುರಸ್ತಿಪಡಿಸಿದೆ. ಪುರುಷೋತ್ತಮ ಅವರ ಕುಟುಂಬವು ನವೀಕೃತ ಮನೆಗೆ ಸ್ಥಳಾಂತರಗೊಂಡಿದೆ.
‘ಮೊನ್ನೆಯಷ್ಟೇ ಮನೆಯಲ್ಲಿ ಹೋಮ ಮಾಡಿಸಿ, ಬಾಡಿಗೆ ಮನೆಯಲ್ಲಿದ್ದ ಪರಿಕರಗಳನ್ನು ಇಲ್ಲಿಗೆ ಸ್ಥಳಾಂತರಿಸಿದ್ದೇವೆ. ಇದೇ 22ರಂದು ಬೆಳಿಗ್ಗೆ 10ಕ್ಕೆ ಮನೆ ಹಸ್ತಾಂತರದ ಕಾರ್ಯಕ್ರಮ ನಡೆಯಲಿದೆ’ ಎಂದು ಪುರುಷೋತ್ತಮ ಪೂಜಾರಿ ಅವರು ‘ಪ್ರಜಾವಾಣಿ'ಗೆ ತಿಳಿಸಿದರು.
ಪುರುಷೋತ್ತಮ ಪೂಜಾರಿ ಅವರ ಮಗಳ ಮದುವೆ ಮೇ 3ರಂದು ನಡೆಯಲಿದೆ. ಅಷ್ಟರ ಒಳಗೆ ಮನೆಯನ್ನು ದುರಸ್ತಿಪಡಿಸಿಕೊಡುವುದಾಗಿ ಗುರುಬೆಳದಿಂಗಳು ಟ್ರಸ್ಟ್‌ನ ಅಧ್ಯಕ್ಷ ಪದ್ಮರಾಜ್ ಆರ್. ಅವರು ಪುರುಷೋತ್ತಮ ಪೂಜಾರಿ ಅವರ ಕುಟುಂಬಕ್ಕೆ ಭರವಸೆ ನೀಡಿದ್ದರು. ಅದರಂತೆ ಎರಡೂವರೆ ತಿಂಗಳಲ್ಲಿ ಮನೆ ದುರಸ್ತಿ ಕಾರ್ಯವನ್ನು ಟ್ರಸ್ಟ್ ಪೂರ್ಣಗೊಳಿಸಿದೆ.
‘ಪುರುಷೋತ್ತಮ ಪೂಜಾರಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಭೇಟಿ ನೀಡಿ ಕುಟುಂಬವನ್ನು ಸಂತೈಸಿದ್ದೆ. ಆಗ ಕುಟುಂಬದವರು ಕಷ್ಟವನ್ನು ತೋಡಿಕೊಂಡಿದ್ದರು. ಪುರುಷೋತ್ತಮ ಪೂಜಾರಿ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ಬಳಿಕ ಅವರನ್ನು ಖುದ್ದಾಗಿ ಮಾತನಾಡಿಸಿದ್ದೆ. ಮನೆ ಹದಗೆಟ್ಟಿರುವ ಬಗ್ಗೆ ಹಾಗೂ ಮಗಳಿಗೆ ಮದುವೆ ನಿಗದಿಯಾಗಿರುವ ಬಗ್ಗೆ ತಿಳಿಸಿದ್ದ ಅವರು ತಮಗೊದಗಿದ ಸಹಾಯಕ ಸ್ಥಿತಿಯ ಬಗ್ಗೆ ಕಣ್ಣೀರಿಟ್ಟಿದ್ದರು. ‘ಈ ಬಗ್ಗೆ ಚಿಂತಿಸಬೇಡಿ. ನಾವೆಲ್ಲ ಇದ್ದೇವೆ’ ಎಂದು ಎಂದು ಸ್ಥೈರ್ಯ ತುಂಬಿದ್ದೆ. ಕೊಟ್ಟ ಮಾತಿನಂತೆ ಮನೆಯನ್ನು ದುರಸ್ತಿ ಪಡಿಸಿದ್ದೇವೆ. ಮನೆ ದುರಸ್ತಿಯ ಚಿಂತೆ ದೂರವಾದ ಬಳಿಕ, ಅವರ ಆರೋಗ್ಯವೂ ಚೇತರಿಕೆಯಾಗಿದೆ. ಇದು ನಮಗೂ ಧನ್ಯತಾ ಭಾವವನ್ನು ಮೂಡಿಸಿದೆ’ ಎಂದು ಆರ್.ಪದ್ಮರಾಜ್ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಹೊಸ ಮನೆಯನ್ನೇ ನಿರ್ಮಿಸಿಕೊಡುವ ಇರಾದೆ ನಮಗಿತ್ತು. ಆದರೆ, ಉಜ್ಜೋಡಿಯಲ್ಲಿರುವ 10 ಸೆಂಟ್ಸ್ ಜಾಗದಲ್ಲಿ ಪುರುಷೋತ್ತಮ ಪೂಜಾರಿ ಸಹೋದರರ ನಾಲ್ಕೈದು ಕುಟುಂಬಗಳು ನೆಲೆಸಿವೆ. ಹೊಸ ಮನೆ ನಿರ್ಮಾಣಕ್ಕೆ ಅವಕಾಶ ಇಲ್ಲದ ಕಾರಣ ಹಳೆ ಮನೆಯನ್ನೇ ದುರಸ್ತಿಗೊಳಿಸಿ ಸುಸಜ್ಜಿತಗೊಳಿಸಿದ್ದೇವೆ. ಇದಕ್ಕೆ ಸುಮಾರು ₹ 6.20 ಲಕ್ಷ ವೆಚ್ಚವಾಗಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.