ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು | ಠಾಣೆಗೆ ಕೋವಿ ವಾಪಸ್‌ ವಿರುದ್ಧ ಫೋನ್ ಅಭಿಯಾನ

ರೈತ ಸಂಘ, ಹಸಿರುಸೇನೆ ನಿರ್ಧಾರ
Published 11 ಏಪ್ರಿಲ್ 2024, 6:15 IST
Last Updated 11 ಏಪ್ರಿಲ್ 2024, 6:15 IST
ಅಕ್ಷರ ಗಾತ್ರ

ಪುತ್ತೂರು (ದಕ್ಷಿಣ ಕನ್ನಡ): ಕೃಷಿ ರಕ್ಷಣೆಗಾಗಿ ನೀಡಿದ್ದ ಕೋವಿಗಳನ್ನು ಚುನಾವಣೆ ಬಂದಾಗ ಪೊಲೀಸ್ ಠಾಣೆಯಲ್ಲಿ ಇಡುವ ಕ್ರಮ ಅರ್ಥಹೀನವಾಗಿದ್ದು ತೋಟಗಳಿಗೆ ಪ್ರಾಣಿಗಳಿಂದ ತೊಂದರೆಯಾದರೆ ತುರ್ತು ಸೇವೆ (112) ಸಂಖ್ಯೆಗೆ ಕರೆ ಮಾಡುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ರೈತಸಂಘ, ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿ ಠೇವಣಿ ಇಡುತ್ತೇವೆ, ತೋಟ ರಕ್ಷಣೆಗೆ ಪೊಲೀಸರನ್ನು ನೇಮಕ ಮಾಡಿ’ ಎಂಬ ಘೋಷಣೆಯೊಂದಿಗೆ ಈ ಕರೆ ಅಭಿಯಾನ ನಡೆಸಲಾಗುವುದು ಎಂದರು.

‘ಪ್ರತಿ ಚುನಾವಣೆಯ ಸಂದರ್ಭದಲ್ಲಿ ರೈತರ ಕೋವಿಗಳನ್ನು ಠಾಣೆಗಳಿಗೆ ಒಪ್ಪಿಸಬೇಕು. ಮೂರು ತಿಂಗಳ ಬಳಿಕ ಅವು ವಾಪಸ್ ಸಿಗುತ್ತವೆ. ಅನೇಕ ಸಂದರ್ಭದಲ್ಲಿ ಕೋವಿಗಳಿಗೆ ಹಾನಿಯಾಗುತ್ತದೆ. ಜಿಲ್ಲೆಯ ಇತಿಹಾಸ ಕೆದಕಿದರೆ ಚುನಾವಣೆ ಸಂದರ್ಭ ರೈತರ ಕೋವಿಯಿಂದ ಅನಾಹುತ ನಡೆದ ಉದಾಹರಣೆ ಇಲ್ಲ. ಆದರೂ ಜಿಲ್ಲಾಡಳಿತ ರೈತರನ್ನು ಕ್ರಿಮಿನಲ್‌ಗಳಂತೆ ನೋಡುವುದು ಸರಿಯಲ್ಲ’ ಎಂದು ಅವರು ಹೇಳಿದರು.

ಜಿಲ್ಲಾ ರೈತ ಸಂಘ ಮತ್ತು ಪರವಾನಗಿ ಹೊಂದಿರುವ ಕೋವಿ ಬಳಕೆದಾರರ ಸಂಘ, ರೈತರ ಕೋವಿಗಳಿಗೆ ವಿನಾಯಿತಿ ನೀಡುವುದಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಲು ತೀರ್ಮಾನಿಸಿವೆ ಎಂದರು.

ಕೋವಿ ಇಲ್ಲದ ಕಾರಣ ಸವಣೂರು ಗ್ರಾಮದ ಅಗರಿ ನಿವಾಸಿ ರತ್ನಾಕರ ಸುವರ್ಣ ಕಾಡುಹಂದಿ ದಾಳಿಗೆ ಒಳಗಾಗಿದ್ದಾರೆ. ಈ ಘಟನೆಯ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕು, ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಅವರು ಆಗ್ರಹಿಸಿದರು.

ಮುಖಂಡರಾದ ಶಿವಣ್ಣಗೌಡ ಇಡ್ಯಾಡಿ, ಹೊನ್ನಪ್ಪ ಗೌಡ, ಪ್ರವೀಣ್ ಕುಮಾರ್ ಕಡೆಂಜಿ ಹಾಗೂ ಶಿವಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT