ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ನಿವೇಶನ ಸಮಸ್ಯೆ: ಘಟಕ ವಿಳಂಬ

ಸ್ವ ಸಹಾಯ ಸಂಘಗಳ ಒಕ್ಕೂಟದ ಮಹಿಳೆಯರಿಂದ ಘಟಕ ನಿರ್ವಹಣೆ
Last Updated 12 ಮಾರ್ಚ್ 2022, 6:47 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳು ನಿರ್ಮಾಣ ವಾಗಿದ್ದರೆ, ಇನ್ನೂ ಕೆಲ ವೆಡೆ ಪ್ರಗತಿಯಲ್ಲಿವೆ. ನಿವೇಶನದ ಸಮಸ್ಯೆಯಿಂದ ಒಂದೆರಡು ಪಂಚಾಯಿತಿಗಳಲ್ಲಿ ಘಟಕ ನಿರ್ಮಾಣ ವಿಳಂಬವಾಗಿದೆ.

ಉಪ್ಪಿನಂಗಡಿ, ನೆಕ್ಕಿಲಾಡಿ, ಬಜತ್ತೂರು, ಮುಂಡೂರು, ಕಬಕ, ಅರಿಯಡ್ಕ, ಬಡಗನ್ನೂರು ಪಂಚಾಯಿತಿಗಳಲ್ಲಿ ಘಟಕ ನಿರ್ಮಾಣ ಪೂರ್ಣಗೊಂಡು, ಕಾರ್ಯಾರಂಭ ಮಾಡುತ್ತಿವೆ. ಒಳಮೊಗರು, ನೆಟ್ಟಣಿಗೆಮುದ್ನೂರು, ಆರ್ಯಾಪು, ಬಳ್ನಾಡು, ನರಿಮೊಗರಿನಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿದೆ. ಬನ್ನೂರು, ಕೋಡಿಂಬಾಡಿ, ಕೆದಂಬಾಡಿ, ಕೆಯ್ಯೂರು ವ್ಯಾಪ್ತಿಯಲ್ಲಿ ಘಟಕ ನಿರ್ಮಾಣ ಇನ್ನಷ್ಟೇ ಆಗಬೇಕಾಗಿದೆ. ನಿವೇಶನದ ಸಮಸ್ಯೆ ಇದ್ದ ಬನ್ನೂರು, ಕೋಡಿಂಬಾಡಿಯಲ್ಲಿ ಈ ಸಮಸ್ಯೆ ಬಗೆಹರಿದಿದ್ದು, ಜಾಗದ ಅಳತೆ ಕಾರ್ಯ ಪೂರ್ಣಗೊಂಡಿದೆ. ಸದ್ಯದಲ್ಲಿ ಘಟಕದ ಕಾಮಗಾರಿ ಆರಂಭಿಸಲು ಪಂಚಾಯಿತಿ ಸಿದ್ಧತೆ ನಡೆಸಿದೆ.

ಎಲ್ಲ ಗ್ರಾಮ ಪಂಚಾಯಿತಿಗಳಿಗೆ ವಾಹನ ಒದಗಿಸಲಾಗವುದು. ಈಗಾಗಲೇ ಬಂದಿರುವ ವಾಹನಗಳನ್ನು ನಿಗದಿತ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಇನ್ನು ಒಂದು ತಿಂಗಳ ಒಳಗಾಗಿ ಎಲ್ಲ ಘಟಕಗಳು ಕಾರ್ಯಾರಂಭ ಮಾಡುತ್ತವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ ತಿಳಿಸಿದರು.

ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಘಟಕ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಮಾದರಿಯಾಗಿದೆ. ಪುತ್ತೂರು ನಗರಕ್ಕೆ ಸಮೀಪ ಇರುವ ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಅಕ್ರಮವಾಗಿ ತಂದು ಸುರಿಯುತ್ತಿರುವುದು ದೊಡ್ಡ ತಲೆನೋವಾಗಿದೆ. ಪಂಚಾಯಿತಿ ಸ್ವಚ್ಛತಾ ಕಾರ್ಯ ನಡೆಸಿದರೂ, ರಾತ್ರಿ ಬೆಳಗಾಗುವಷ್ಟರಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳ ರಾಶಿ ಮೇಲೇಳುತ್ತದೆ. ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುವ ಕೆಲವು ಕಡೆಗಳಿಂದ ಈ ತ್ಯಾಜ್ಯ ತಂದು ಸುರಿಯಲಾಗುತ್ತದೆ ಎಂಬುದು ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳ ಆರೋಪ.

ಸದ್ಯ ಆರ್ಯಾಪು ಪಂಚಾಯಿತಿಯಲ್ಲಿ ತ್ಯಾಜ್ಯ ಸಂಗ್ರಹ ಘಟಕ ನಿರ್ಮಾಣವಾದರೂ ಕಾರ್ಯ ಪ್ರಾರಂಭವಾಗಿಲ್ಲ. ಈ ಪಂಚಾಯಿತಿ ಯಲ್ಲಿ ಸಂಗ್ರಹವಾಗುವ ಕಸವನ್ನು ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ಸುರಿಯಲಾಗುತ್ತದೆ. ಪಂಚಾಯಿತಿ ಘಟಕ ಆರಂಭವಾದರೆ, ಅಲ್ಲಿಯೇ ವ್ಯವಸ್ಥೆ ಮಾಡಬಹುದು ಎನ್ನುತ್ತಾರೆಪಂಚಾಯಿತಿ ಪ್ರಮುಖರು.

‘15 ದಿನ ಅಥವಾ ತಿಂಗಳಿಗೊಮ್ಮೆ ಮನೆಯಿಂದ ಘನತ್ಯಾಜ್ಯ ಸಂಗ್ರಹಿಸಿ ತಂದು, ಸ್ವಚ್ಛ ಸಂಕೀರ್ಣದಲ್ಲಿ ಬೇರ್ಪಡಿಸುತ್ತೇವೆ. ಪ್ರಸ್ತುತ ತಾತ್ಕಾಲಿಕ ಘಟಕದಲ್ಲಿ ಸಂಗ್ರಹಿಸುತ್ತಿದ್ದು, ಇನ್ನು ಒಂದು ವಾರದಲ್ಲಿ ಪಂಚಾಯಿತಿ ಘಟಕ ಕಾರ್ಯ ಆರಂಭಿಸಲಿದೆ. ಕಸ ಸಂಗ್ರಹಿಸುವ ವಾಹನ ನಿರ್ವಹಣೆಯನ್ನು ಮಹಿಳೆಯರೇ ಮಾಡಲಿದ್ದು, ಚಾಲನೆ ಗೊತ್ತಿರುವ ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ’ ಎಂದು ನೆಟ್ಟಣಿಗೆ ಮುದ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ರೈ ತಿಳಿಸಿದರು.

‘ಗ್ರಾಮಸ್ಥರು ಹಸಿ ಕಸವನ್ನು ಮನೆಯಲ್ಲೇ ಗೊಬ್ಬರ ಮಾಡಿ ಕೃಷಿಗೆ ಬಳಸುತ್ತಾರೆ. ಒಣ ಕಸವನ್ನು ಮಾತ್ರ ನಮ್ಮ ವಾಹನಕ್ಕೆ ಕೊಡುತ್ತಾರೆ’ ಎಂದು ಬಡಗನ್ನೂರು ಪಂಚಾಯಿತಿ ಸದಸ್ಯ ರವಿರಾಜ ರೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT