ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಕಾರ್ಯಾಚರಣೆಯಲ್ಲಿ ಜಿಪುಣತನ ಬೇಡ: ಕಂದಾಯ ಸಚಿವ ಆರ್‌. ಅಶೋಕ ನಿರ್ದೇಶನ

Last Updated 8 ಆಗಸ್ಟ್ 2020, 16:21 IST
ಅಕ್ಷರ ಗಾತ್ರ

ಮಂಗಳೂರು: ಮಳೆ ಹಾನಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ಮತ್ತು ನೆರವು ಒದಗಿಸುವ ಕೆಲಸದಲ್ಲಿ ಜಿಪುಣತನ ತೋರಬಾರದು. ತ್ವರಿತವಾಗಿ ಪರಿಹಾರ ಒದಗಿಸಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಕುರಿತು ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದ ಸಮಸ್ಯೆಗೆ ಸಿಲುಕುವವರಿಗೆ ತ್ವರಿತವಾಗಿ ನೆರವು ಒದಗಿಸಬೇಕು. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಬೇಕು’ ಎಂದು ಸೂಚಿಸಿದರು.

ಅತಿವೃಷ್ಟಿ, ಪ್ರವಾಹ, ವಿದ್ಯುತ್‌ ಕಂಬ ಅಥವಾ ಮರ ಬಿದ್ದು, ಬಿರುಗಾಳಿಯಿಂದ ಚಾವಣಿ ಹಾರಿಹೋಗಿ ಮನೆಗಳಿಗೆ ಹಾನಿಯಾದ ಎಲ್ಲ ಪ್ರಕರಣಗಳಲ್ಲಿ ₹ 10,000 ತುರ್ತು ಪರಿಹಾರ ವಿತರಿಸಬೇಕು. ಪ್ರವಾಹದಿಂದ ಮನೆಯೊಳಗೆ ಒಂದು ಇಂಚು ನೀರು ಬಂದಿದ್ದರೂ ಅದೇ ಮೊತ್ತದ ಪರಿಹಾರ ಪಾವತಿಸಬೇಕು ಎಂದು ತಾಕೀತು ಮಾಡಿದರು.

ಗುಣಮಟ್ಟದ ಆಹಾರ ಪೂರೈಸಿ: ಮನೆಗಳಿಗೆ ಹಾನಿಯಾದ ಕಾರಣದಿಂದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಹೊಂದಿರುವ ಜನರಿಗೆ ಗುಣಮಟ್ಟದಿಂದ ಕೂಡಿದ ಹಾಗೂ ಆರೋಗ್ಯಕರವಾದ ಆಹಾರ ಪೂರೈಸಬೇಕು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಒಂದೇ ರೀತಿಯ ಆಹಾರ ಪೂರೈಸಬಾರದು. ಬೇರೆ ಬೇರೆ ರೀತಿಯ ಆಹಾರ ಒದಗಿಸಬೇಕು. ಪೌಷ್ಟಿಕಾಂಶದ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪರಿಹಾರ ಕಾರ್ಯಗಳಿಗೆ ಪ್ರತಿ ಜಿಲ್ಲೆಗೆ ಈಗಾಗಲೇ ₹ 5 ಕೋಟಿ ಬಿಡುಗಡೆ ಮಾಡಲಾಗಿದೆ. ಜನರು ಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಜೊತೆಗೆ ನಿಲ್ಲಲಿದೆ. ಅಗತ್ಯವಿರುವ ಎಲ್ಲ ಬಗೆಯ ನೆರವನ್ನೂ ಒದಗಿಸಲಿದೆ. ಅಧಿಕಾರಿಗಳು ಎಚ್ಚರಿಕೆ ವಹಿಸಿ, ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದರು.

ನೆರವಿನ ಭರವಸೆ:ಗುರುಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಹಲವು ಕುಟುಂಬಗಳಿಗೆ ತೊಂದರೆಯಾಗಿದೆ. ಅಲ್ಲಿ ಮತ್ತೆ ದುರಂತ ಸಂಭವಿಸದಂತೆ ತಡೆಗೋಡೆ ನಿರ್ಮಿಸಲು ₹ 5 ಕೋಟಿ ಅನುದಾನ ಒದಗಿಸಬೇಕು ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಮನವಿ ಮಾಡಿದರು. ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು

ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಮಾತನಾಡಿ, ‘ನೇತ್ರಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಬಂಟ್ವಾಳದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ನೂರಾರು ಎಕರೆ ಕೃಷಿ ಜಮೀನು ಮುಳುಗಿದೆ. ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕರಾದ ಸಂಜೀವ ಮಠಂದೂರು, ಡಾ.ವೈ. ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್ ತಮ್ಮ ಕ್ಷೇತ್ರಗಳಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಸಚಿವರಿಗೆ ಮಾಹಿತಿ ನೀಡಿ, ಪರಿಹಾರಕ್ಕೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಡಿಸಿಪಿ ಅರುಣಾಂಗ್ಷು ಗಿರಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT