ಭಾನುವಾರ, ಸೆಪ್ಟೆಂಬರ್ 25, 2022
29 °C
ಹರಿಕೃಷ್ಣ ಬಂಟ್ವಾಳ ತಿರುಗೇಟು

ನಾರಾಯಣ ಗುರುಗೆ ಅವಮಾನ ಆರೋಪ: ಚುನಾವಣೆ ಮೇಲೆ ಕಣ್ಣಿಟ್ಟು ರೈ ಹೇಳಿಕೆ- ಹರಿಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಬಿಲ್ಲವ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ 2023ರಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಬಯಸುತ್ತಿರುವ ಕಾಂಗ್ರೆಸ್‌ ಮುಖಂಡ ಬಿ.ರಮಾನಾಥ ರೈ  ನಾರಾಯಣ ಗುರು ಜಯಂತಿ ವಿಚಾರದಲ್ಲಿ ವಿನಾಕಾರಣ ‌ಟೀಕೆ ಮಾಡುತ್ತಿದ್ದಾರೆ’ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆರೋಪಿಸಿದರು.

‘ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಗುರುಗಳಿಗೆ ಅವಮಾನ ಮಾಡಿದೆ’ ಎಂಬ ಬಿ.ರಮಾನಾಥ ರೈ ಅವರ ಆರೋಪಕ್ಕೆ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿರುಗೇಟು ನೀಡಿದರು.

‘ಜನರ ನಡುವೆ ದಾರ್ಶನಿಕರ ಜಯಂತಿ ಆಚರಣೆ ಆಗಬೇಕು ಎಂಬ ಉದ್ದೇಶದಿಂದ ಮಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಮೂರು ವರ್ಷ ಸರ್ಕಾರ ವತಿಯಿಂದ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಗಿತ್ತು. ಆದರೆ, ಈ ವರ್ಷದಷ್ಟು ಅದ್ಧೂರಿಯಾಗಿ ಯಾವತ್ತೂ ಆಚರಿಸಿಲ್ಲ. ಈ ಹಿಂದೆ ಕಾಟಾಚಾರಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಅದಕ್ಕೆ 100 ಜನರೂ ಸೇರುತ್ತಿರಲಿಲ್ಲ’ ಎಂದರು.

‘ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತು ಎಂಬ ಟೀಕೆಗೆ ಅರ್ಥವಿಲ್ಲ. ಟಿಎಂಎ ಪೈ ಸಭಾಂಗಣದಲ್ಲಿ ನಾರಾಯಣ ಗುರುಗಳ ಚಿಂತನೆ ಪಸರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದಕ್ಕೂ ಮುನ್ನ ಕುದ್ರೋಳಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು’ ಎಂದು ಸಮರ್ಥಿಸಿಕೊಂಡರು. 

‘ಲೇಡಿಹಿಲ್‌ನ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ಹೆಸರಿಡುವಾಗ ಕಾಂಗ್ರೆಸ್‌ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದರು. ಆಗ ರೈ ಅವರ ನಾರಾಯಣ ಗುರು ಪ್ರೇಮ ಎಲ್ಲಿ ಹೋಗಿತ್ತು. ನಾರಾಯಣ ಗುರುಗಳ ವಿಚಾರದಲ್ಲಿಮಾತನಾಡಲು ಅವರಿಗೆ ನೈತಿಕತೆಯೇ ಇಲ್ಲ’ ಎಂದರು.

‘ರೈ ಅವರು ಕಾಂಗ್ರೆಸ್‌ನಲ್ಲಿ 35 ವರ್ಷಗಳಿಂದ ರಾಜಕೀಯ ಲಾಭ ಪಡೆದಿದ್ದಾರೆ. ಅವರಿಗೆ ಈಗ ಬೇರೆಯವರ ಸಹಾಯವಿಲ್ಲದೇ ನಡೆಯುವುದಕ್ಕೂ ಆಗುವುದಿಲ್ಲ. ಮೆಟ್ಟಿಲು ಹತ್ತುವುದಕ್ಕೂ ಆಗುವುದಿಲ್ಲ. 2023ರ ಚುನಾವಣೆಯಲ್ಲಾದರೂ ಬಂಟ್ವಾಳ ಕ್ಷೇತ್ರದಿಂದ ಸ್ಪರ್ಧಿಸಲು ಹೊಸಬರಿಗೆ ಅವಕಾಶ ನೀಡಲಿ’ ಎಂದರು. 

‘ಬಂಟ್ವಾಳ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ರಮಾನಾಥ ರೈ ಇನ್ನು ಮುಂದೆ ಯಾವತ್ತೂ ಗೆಲ್ಲುವುದಿಲ್ಲ. ಮುಂದಿನ ಸಲವೂ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜೇಶ್‌ ನಾಯ್ಕ್‌ ಉಳಿಪಾಡಿ ಅವರೇ ಸ್ಪರ್ಧಿಸಲಿದ್ದು, ಅವರೇ ಗೆಲ್ಲುತ್ತಾರೆ. ಒಂದು ವೇಳೆ ರಾಜೇಶ್‌ ನಾಯ್ಕ್‌ ಸೋತರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ’ ಎಂದು ಸವಾಲು ಹಾಕಿದರು. 

ನಾರಾಯಣ ಗುರು ಜಯಂತಿ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ಒಬ್ಬ ಮುಖ್ಯಮಂತ್ರಿಯೂ ಭಾಗವಹಿಸಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

‘ಜೀಸಸ್‌ ಮಾತ್ರ ದೇವರು ಎಂದು ಹೇಳಿಕೆ ನೀಡಿರುವ ಪಾದ್ರಿ ಜೊತೆ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆಯಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಇದು ಹಿಂದೂಗಳಿಗೆ ಮಾಡುವ ಅವಮಾನ ಅಲ್ಲವೇ’ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಭಾಸ್ಕರ ಚಂದ್ರ ಶೆಟ್ಟಿ ಹಾಗೂ ಜಿಲ್ಲಾ ಮಾಧ್ಯಮ ಪ್ರಮುಖ್‌ ಸಂದೇಶ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು