ಮಂಗಳವಾರ, ಸೆಪ್ಟೆಂಬರ್ 21, 2021
22 °C
ಶಾಸಕ ವೇದವ್ಯಾಸ್‌ ಕಾಮತ್‌ರಿಂದ ಮಂಗಳಾದೇವಿಗೆ ವಿಶೇಷ ಪ್ರಾರ್ಥನೆ

ಮಳೆಗಾಗಿ ನಮಾಝ್‌, ವಿಶೇಷ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಆಶ್ರಯದಲ್ಲಿ ಮುಸ್ಲಿಂ ಸಮುದಾಯದಿಂದ ಮಳೆಗಾಗಿ ಸಾಮೂಹಿಕ ವಿಶೇಷ ನಮಾಝ್‌ ಮತ್ತು ಪ್ರಾರ್ಥನೆ ನಗರದ ನೆಹರೂ ಮೈದಾನದಲ್ಲಿ ಬುಧವಾರ ನಡೆಯಿತು. 

ಧರ್ಮಗುರು ಶೇಖ್ ಸಾಕಿಬ್ ಸಲೀಂ ಉಮ್ರಿ ಅವರು ನಮಾಝ್‌ ಮತ್ತು ಪ್ರವಚನ ನೆರವೇರಿಸಿ ಮಾತನಾಡಿ, ‘ಆಕಾಶದಿಂದ ಮಳೆ, ಬೆಳೆ, ಗಾಳಿ, ಬೆಳಕು, ಅನ್ನಾಹಾರ ಸೇರಿದಂತೆ ಎಲ್ಲವನ್ನೂ ಸೃಷ್ಟಿಕರ್ತ ಅಲ್ಲಾಹನೇ ನೀಡುತ್ತಾನೆ. ಇದನ್ನೆಲ್ಲ ಪಡೆಯುವ ಜನರು ಅಲ್ಲಾಹನಿಗೆ ಕೃತಘ್ನರಾದಾಗ ಅತಿವೃಷ್ಟಿ, ಅನಾವೃಷ್ಟಿ ಆಗುತ್ತವೆ. ದೇವರಲ್ಲಿ ಪಾಪ ವಿಮೋಚನೆಗಾಗಿ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದಾಗ ದೇವರು ನಮ್ಮ ಮೇಲೆ ಕರುಣೆ ತೋರುತ್ತಾನೆ’ ಎಂದು ಹೇಳಿದರು.

‘ಜಗತ್ತಿನಲ್ಲಿ ದಾನ ಧರ್ಮಗಳನ್ನು ಮಾಡದೆ, ತೂಕ ಅಳತೆಯಲ್ಲಿ ಮೋಸ, ಅನ್ಯಾಯ, ಅಕ್ರಮ ಮಾಡಿ, ಮಾನವೀಯತೆ ಮರೆತಾಗಲೆಲ್ಲ ಮಳೆ ಕೊರತೆಯಾದ, ಹೆಚ್ಚಿನ ಮಳೆಯಿಂದ ಜಲಪ್ರಳಯವಾದ ಉದಾಹರಣೆಗಳಿವೆ. ಮಳೆ ಇಲ್ಲದೆ ನೀರಿನ ಕೊರತೆಯಿಂದ ಮನುಷ್ಯ ಮಾತ್ರವಲ್ಲ, ಪ್ರಾಣಿ, ಪಕ್ಷಿ, ಜೀವ ಜಂತು, ಮರ ಗಿಡ ಸಹಿತ ಇಡೀ ಜೀವ ಸಂಕುಲವೇ ಸಂಕಷ್ಟದಲ್ಲಿದೆ. ದೇವರು ನೀಡುವ ನೀರನ್ನು ಪೋಲು ಮಾಡದೆ, ಜಾಗ್ರತೆ ವಹಿಸಬೇಕು ಎಂದು ಇಸ್ಲಾಂ ಕಲಿಸುತ್ತದೆ. ಇದನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ’ ಎಂದು ಹೇಳಿದರು.

ಎಸ್‌ಕೆಎಸ್‌ಎಂನ ಎಂ.ಜಿ.ಮೊಹಮ್ಮದ್ ಮಾತನಾಡಿ, ‘ಮಳೆ ಇಲ್ಲದ ಬರಗಾಲದ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಅವರು ವಿಶೇಷ ನಮಾಝ್, ಪ್ರವಚನ, ಪ್ರಾರ್ಥನೆ ಮಾಡಿದ್ದರು. ಜನರು ಅಕ್ರಮ, ಅನ್ಯಾಯದಲ್ಲಿ ತೊಡಗಿದಾಗ ಇಂಥ ಪ್ರಕೃತಿ ವೈಪರೀತ್ಯ ಬರುತ್ತಿದ್ದು, ಅದರ ನಿವಾರಣೆಗಾಗಿ ಪ್ರಾರ್ಥನೆ ಮಾಡಬೇಕೆಂದು ಪ್ರವಾದಿ ಹೇಳಿದ ಮಾದರಿಯಲ್ಲಿ ನಾವು ಪ್ರಾರ್ಥನೆ ಮಾಡಿದ್ದೇವೆ’ ಎಂದು ಅವರು ಹೇಳಿದರು.

ಶಾಸಕ ವೇದವ್ಯಾಸ ಡಿ.ಕಾಮತ್ ವಿಶೇಷ ನಮಾಝ್‌ ನಡೆಯುವ ವೇಳೆ ಉಪಸ್ಥಿತರಿದ್ದರು. ರಂಜಾನ್‌ ಉಪವಾಸ ಸಂದರ್ಭದಲ್ಲಿ ಬೆಳಿಗ್ಗೆಯೇ ನಡೆದ ಪ್ರಾರ್ಥನೆಯಲ್ಲಿ ಹಿರಿಯರು, ಕಿರಿಯರು ಪಾಲ್ಗೊಂಡಿದ್ದರು. ಅಲ್ಲದೇ ನಮಾಝ್‌ ಹಾಗೂ ವಿಶೇಷ ಪ್ರಾರ್ಥನೆಯಲ್ಲಿ ಮಹಿಳೆಯರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಶಾಸಕ ಕಾಮತ್ ವಿಶೇಷ ಪ್ರಾರ್ಥನೆ ಸಲ್ಲಿಕೆ

ಮಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವಿಸಿದ್ದು, ಶೀಘ್ರದಲ್ಲಿ ಮಳೆ ಬಂದು ನಗರದ ಜನತೆಯ ಸಂಕಷ್ಟ ಬಗೆಹರಿಯಲು ದೇವರು ಅನುಗ್ರಹಿಸಬೇಕು ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಅವರು ಮಂಗಳಾದೇವಿ, ಕುದ್ರೋಳಿ ದೇವಸ್ಥಾನ ಹಾಗೂ ಕಂಕನಾಡಿ ಗರೋಡಿಯಲ್ಲಿ ಬುಧವಾರ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಂಗಳಾದೇವಿಯಲ್ಲಿ ಮಧ್ಯಾಹ್ನದ ಮಹಾಪೂಜೆಯಲ್ಲಿ ಭಾಗವಹಿಸಿದ ಶಾಸಕ ಕಾಮತ್ ಸೇರಿದಂತೆ ಬಿಜೆಪಿಯ ಹಲವರು ದೇವರಲ್ಲಿ ಶೀಘ್ರ ಮಳೆಗಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದವ್ಯಾಸ್‌ ಕಾಮತ್‌ ಅವರು, ಸಂಕ್ರಮಣದ ಈ ಪರ್ವ ದಿನದಂದು ನಗರದ ಎಲ್ಲ ದೇವಸ್ಥಾನಗಳಲ್ಲಿ ಭಕ್ತರು, ಆಡಳಿತ ಮಂಡಳಿ ಸದಸ್ಯರು, ಪಕ್ಷದ ಕಾರ್ಯಕರ್ತರು ಮಳೆಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ಮಂಗಳೂರಿಗೆ ಹೆಸರು ಬರಲು ಕಾರಣವಾಗಿರುವ ಮಂಗಳಾಂಬೆ ಸನ್ನಿಧಿಯಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ಹಿಂದೆ ಈ ರೀತಿ ನೀರಿನ ಕೊರತೆ ಉಂಟಾದಾಗ ನಮ್ಮ ಹಿರಿಯರು ದೇವರನ್ನು ಪ್ರಾರ್ಥಿಸಿದಾಗ ಮಳೆ ಬಂದು ತೊಂದರೆ ದೂರವಾಗಿದ್ದವು ಎನ್ನುವುದು ಎಲ್ಲರಿಗೂ ತಿಳಿದಿದೆ. ಈಗ ಮಳೆಯಿಲ್ಲದೆ ನಾವು ಪಡುತ್ತಿರುವ ಸಂಕಟವನ್ನು ದೇವಿಯ ಮುಂದೆ ಹೇಳಿಕೊಂಡಿದ್ದೇವೆ. ದೇವಿ ಕಾಪಾಡುತ್ತಾಳೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು. 

ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಪ್ರಭಾ ಮಾಲಿನಿ, ರಮೇಶ್ ಕಂಡೆಟ್ಟು, ಭಾಸ್ಕರ್‌ಚಂದ್ರ ಶೆಟ್ಟಿ ಸೇರಿದಂತೆ ಹಲವರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು