ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಮಹಾಯೋಜನೆಗೆ ವೇಗ: ರವಿಶಂಕರ ಮಿಜಾರು

ನೀರಿನ ಕೊರತೆ ನೀಗಿಸಲು ಕೆರೆಗಳ ಅಭಿವೃದ್ಧಿಗೆ ಆದ್ಯತೆ
Last Updated 5 ಡಿಸೆಂಬರ್ 2022, 16:33 IST
ಅಕ್ಷರ ಗಾತ್ರ

ಮಂಗಳೂರು: ಮಹತ್ವಾಕಾಂಕ್ಷೆಯ ಮಂಗಳೂರಿನ ಮೂರನೇ ಮಹಾಯೋಜನೆ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಂಡಿದ್ದು, ಇದಕ್ಕೆ ಇನ್ನಷ್ಟು ವೇಗ ನೀಡಲಾಗುವುದು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ರವಿಶಂಕರ ಮಿಜಾರು ಸೋಮವಾರ ಇಲ್ಲಿ ಹೇಳಿದರು.

ಎರಡನೇ ಬಾರಿಗೆ ಮುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೂರನೇ ಮಹಾಯೋಜನೆ ಕೈಗೆತ್ತಿಕೊಳ್ಳುವ ವೇಳೆ ಕೋವಿಡ್‌ ಸಾಂಕ್ರಾಮಿಕ ರೋಗ ವ್ಯಾಪಿಸಿದ ಕಾರಣ ವಿಳಂಬವಾಯಿತು. ಈಗ ಅದಕ್ಕೆ ಮತ್ತೆ ವೇಗ ನೀಡಲಾಗುತ್ತದೆ’ ಎಂದರು.

ಹಿಂದಿನ ಅವಧಿಯಲ್ಲಿ ಮಂಗಳೂರು ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿ, ಹಸಿರೀಕರಣ, ವೃತ್ತ ನಿರ್ಮಾಣ ಕಾಮಗಾರಿಗೆ ಆದ್ಯತೆ ನೀಡಲಾಗಿತ್ತು. ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಡಾಕ್ಟರ್ಸ್ ಕಾಲೊನಿ ಕೆರೆ, ಕದ್ರಿ ದೇವಸ್ಥಾನದ ಬಳಿ ಕೆರೆ, ಬಜಾಲ್ ಕೆರೆ, ಕದ್ರಿ ಕಂಬಳ ಕೆರೆ ಮೊದಲಾದವುಗಳ ಕೆಲಸ ಪೂರ್ಣಗೊಂಡಿದೆ. ಕೆಲವು ಕೆರೆಗಳ ಶೇ 5ರಿಂದ 10ರಷ್ಟು ಕೆಲಸ ಬಾಕಿ ಇದ್ದು, ಆದಷ್ಟು ಶೀಘ್ರ ಪೂರ್ಣಗೊಳಿಸಿ, ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡಲಾಗುವುದು. ನೀರಿನ ಕೊರತೆ ನೀಗಿಸುವ ದೃಷ್ಟಿಯಿಂದ ಮತ್ತೆ 40ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಹಂಚಿಕೆ ಮಾಡುವ ಜವಾ‌ಬ್ದಾರಿ: ಮುಡಾದಿಂದ ನಿರ್ಮಾಣವಾಗುತ್ತಿರುವ ಮೂರು ಲೇಔಟ್‌ಗಳ ಕೆಲಸ ಕುಂಠಿತವಾಗಿದೆ. ಕೊಣಾಜೆ ಲೇಔಟ್‌ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಕುಂಜತ್ತಬೈಲ್‌ನಲ್ಲಿ ಕೆಲಸಕ್ಕೆ ವೇಗ ನೀಡಬೇಕಾಗಿದೆ. ಚೇಳೈರಿನಲ್ಲಿ ಲೇಔಟ್‌ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಎಲ್ಲವನ್ನೂ ಬೇಗ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡಬೇಕಾದ ಜವಾಬ್ದಾರಿ ಮುಡಾದ ಮೇಲಿದೆ ಎಂದು ತಿಳಿಸಿದರು.

ಸಹಾಯವಾಣಿ: ‘ಹಿಂದಿನ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿರುವ ಸಹಾಯವಾಣಿಯಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲಗಳಾಗಿವೆ. ಕಚೇರಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ, ತ್ವರಿತ ಸೇವೆ ನೀಡುವ ಜತೆಗೆ, ಮೂಡದ ಬಗ್ಗೆ ಕೇಳಿಬರುತ್ತಿರುವ ಅಪಾರ್ಥವಾಗುವ ಮಾತುಗಳನ್ನು ಸರಿಪಡಿಸುವ ಹೊಣೆಗಾರಿಕೆಯೂ ಇದೆ’ ಎಂದು ರವಿಶಂಕರ ಮಿಜಾರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT