ಶನಿವಾರ, ಸೆಪ್ಟೆಂಬರ್ 25, 2021
24 °C
ಮುಖ್ಯಮಂತ್ರಿ, ಸಂಸದರಿಗೆ ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಮನವಿ

ಎಟಿಎಫ್‌ ಮೇಲಿನ ತೆರಿಗೆ ಕಡಿತಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವಿಮಾನಯಾನ ಸಂಸ್ಥೆಗಳಿಗೆ ಬೇಕಾಗುವ ಏವಿಯೇಷನ್ ಟರ್ಬೈನ್ ಪ್ಯೂಯೆಲ್ (ಎಟಿಎಫ್‌) ಮೇಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೇರಲಾಗುತ್ತಿರುವ ಶೇ 28 ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ಶೇ 1ಕ್ಕೆ ಇಳಿಕೆ ಮಾಡಬೇಕು ಎಂದು ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ, ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕೇರಳದಲ್ಲಿ ಎಟಿಎಫ್ ಮೇಲೆ ಶೇ 1 ರಷ್ಟು ವ್ಯಾಟ್ ವಿಧಿಸಿದರೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಶೇ 28ರಷ್ಟು ವ್ಯಾಟ್ ಇದೆ. ಹೀಗಾಗಿ ನೆರೆಯ ರಾಜ್ಯದ ವಿಮಾನ ನಿಲ್ದಾಣಗಳಿಗೆ ಹೆಚ್ಚು ಪ್ರಯೋಜನವಾಗಲಿದ್ದು, ಮಂಗಳೂರಿಗೆ ನಷ್ಟವಾಗುತ್ತಿದೆ. ಇದರಿಂದ ಹೊಸ ವಿಮಾನಯಾನ ಸಂಸ್ಥೆಗಳು ಮಂಗಳೂರಿಗೆ ಬರುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಕೆಪಿಸಿಸಿ ಅಧ್ಯಕ್ಷ ಐಸಾಕ್‌ ವಾಸ್‌ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕರಾವಳಿ, ಮಲೆನಾಡು ಹಾಗೂ ಕಾಞಿಂಗಾಡಿನವರೆಗೆ ಕೇರಳದ ಜನರು ಮಂಗಳೂರು ವಿಮಾನ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಇಲ್ಲಿನ ವಿಮಾನ ನಿಲ್ದಾಣದಿಂದ ಪ್ರಯಾಣಿಕರ ಓಡಾಟವೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನ ನಿಲ್ದಾಣದಲ್ಲಿ ಮತ್ತಷ್ಟು ಪ್ರಯಾಣಿಕ ಹಾಗೂ ಸರಕು ಸಾಗಣೆ ವಿಮಾನ ಸಂಚಾರಕ್ಕೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಪಕ್ಕದ ರಾಜ್ಯದಲ್ಲಿ ಹೊಸ ವಿಮಾನ ನಿಲ್ದಾಣ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಲವು ರಿಯಾಯಿತಿ ನೀಡುವ ಮೂಲಕ ವಿಮಾನಯಾನ ಹೆಚ್ಚಿಸಲು ರಾಜ್ಯ ಸರ್ಕಾರ ಉತ್ತೇಜನ ನೀಡಬೇಕು. ಇನ್ನೂ ಹಲವು ವಿಮಾನಯಾನ ಸಂಸ್ಥೆಗಳು ಇಲ್ಲಿಂದ ವಿಮಾನ ಸಂಚಾರ ಆರಂಭಿಸಲು ಪ್ರೋತ್ಸಾಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಈಗಾಗಲೇ ಕೇಂದ್ರದ ನಾಗರಿಕ ವಿಮಾನಯಾನ ಸಚಿವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ನೆರೆಯ ರಾಜ್ಯದ ವಿಧಿಸಿರುವ ವ್ಯಾಟ್‌ ಅಥವಾ ಮಾರಾಟ ತೆರಿಗೆಗೆ ಅನುಗುಣವಾಗಿ ವಿಧಿಸುವಂತೆ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.

ಸದ್ಯಕ್ಕೆ ಎಟಿಎಫ್‌ ಮೇಲೆ ವಿಧಿಸುತ್ತಿರುವ ಮೌಲ್ಯವರ್ಧಿತ ತೆರಿಗೆ ಏಕರೂಪದಲ್ಲಿ ಇಲ್ಲ. ರಾಜ್ಯದಿಂದ ರಾಜ್ಯಕ್ಕೆ ಹಾಗೂ ರಾಜ್ಯದ ಒಳಗೆ ತೆರಿಗೆ ದರ ವಿಭಿನ್ನವಾಗಿದೆ. ಇದರಿಂದ ಕೋವಿಡ್–19 ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಎಟಿಎಫ್‌ ಮೇಲಿನ ವ್ಯಾಟ್‌ ಅನ್ನು ಶೇ 1 ರಿಂದ ಶೇ 4 ರವರೆಗೆ ಮಿತಿಗೊಳಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ನಾಗರಿಕ ವಿಮಾನಯಾನ ಸಚಿವರೂ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ಸಂಗ್ರಹಿಸುತ್ತಿರುವ ಮೌಲ್ಯವರ್ಧಿತ ತೆರಿಗೆಯು ಸಮರ್ಪಕವಾಗಿಲ್ಲ ಎಂದು ಹೇಳಿದ್ದಾರೆ.

ಭೂಸ್ವಾಧೀನ ನನೆಗುದಿಗೆ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಅಗತ್ಯವಾಗಿರುವ 36 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ರಾಜ್ಯ ಸರ್ಕಾರದಲ್ಲಿ ಬಾಕಿ ಉಳಿದಿದೆ ಎಂದು ಐಸಾಕ್‌ ವಾಸ್‌ ಗಮನ ಸೆಳೆದಿದ್ದಾರೆ.

ಕೂಡಲೇ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಮೂಲಕ ಮಂಗಳೂರು ವಿಮಾನ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.