ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಅರಿಯದವರು ಧಾರ್ಮಿಕ ಮುಖಂಡರಾದರೆ ಸಮಸ್ಯೆ: ರಮೇಶ್‌ ಕುಮಾರ್

‘ಅರಿಯಿರಿ ಮನುಕುಲದ ಪ್ರವಾದಿ’ಯನ್ನು ಅಭಿಯಾನ ಸಮಾರೋಪದಲ್ಲಿ ರಮೇಶ್‌ ಕುಮಾರ್‌
Last Updated 7 ಜನವರಿ 2023, 10:59 IST
ಅಕ್ಷರ ಗಾತ್ರ

ಮಂಗಳೂರು: ‘ಧರ್ಮವನ್ನೇ ಅರ್ಥ ಮಾಡಿಕೊಳ್ಳದವರೇ ಧರ್ಮದ ಮುಖಂಡರಾದಾಗ ಅನಾಹುತಗಳು ಸಂಭವಿಸುತ್ತವೆ. ಮೊದಲು ಧರ್ಮ ಕಲಿಸಿ ಕೊಡಬೇಕಾಗಿರುವುದೇ ಅವರಿಗೆ. ಅಂಥವರಿಂದಾಗಿಯೇ ಎಲ್ಲ ಧರ್ಮಗಳೂ ಕಷ್ಟವನ್ನು ಎದುರಿಸುತ್ತಿವೆ. ಧರ್ಮ
ವನ್ನು ಅಭ್ಯಾಸ ಮಾಡದ ಮೂಲಭೂತ ವಾದಿಗಳಿಂದಾಗಿಯೇ ಸಮಸ್ಯೆ ಸೃಷ್ಟಿಯಾಗುತ್ತಿದೆ’ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಅಭಿಪ್ರಾಯಪಟ್ಟರು. ‌

ಯುನಿವೆಫ್‌ ಕರ್ನಾಟಕದ ವತಿಯಿಂದ ಹಮ್ಮಿಕೊಂಡ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಮಾರೋಪದ ಸಲುವಾಗಿ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೇ ಧರ್ಮದವರಾಗಲೀ, ಧರ್ಮ ಪ್ರಚಾರಕರಾಗಲೀ, ಸಂತರಾಗಲೀ ಹಿಂಸೆಯನ್ನು ಪ್ರಚೋದಿಸಬಾರದು. ಹಿಂಸೆಯಲ್ಲಿ ತೊಡಗಿಸಿಕೊಳ್ಳ ಬಾರದು’ ಎಂದರು.

‘ಯಾರೋ ಹಿಂಸೆಗೆ ಪ್ರಚೋದನೆ ಕೊಟ್ಟಾಗ, ಮನುಷ್ಯ ಮನುಷ್ಯರನ್ನು ಬೇರ್ಪಡಿಸಲು ಪ್ರಯತ್ನ ಮಾಡಿದಾಗ ಅದಕ್ಕೆ ಮಹಮ್ಮದ್‌ ಪೈಗಂಬರ್‌ ಅವರನ್ನು ದೂಷಿಸಲು ಬರುವುದಿಲ್ಲ. ಪಾಕಿಸ್ತಾನದಲ್ಲಿ ಶಾಲೆಯಲ್ಲಿ ಮುಗ್ಧ ಹಸುಳೆಗಳನ್ನು ಕೊಂದವರು ಇಸ್ಲಾಂ ಧರ್ಮೀಯರಲ್ಲ. ಅವರು ಆ ಧರ್ಮದಲ್ಲಿ ಜನ್ಮ ಪಡೆದಿರಬಹುದು. ಅದೇ ರೀತಿ, ಅಂಬೇಡ್ಕರ್ ಅವರನ್ನು ಹೀಯಾಳಿಸಿದವರು, ಗಾಂಧಿಜಿಯನ್ನು ಕೊಂದವರೂ ಹಿಂದೂಗಳಲ್ಲ’ ಎಂದರು.

‘ಮುನ್ಸಿಪಾಲಿಟಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನೂ ಬಿಡಲೊಲ್ಲದವರು, ಅಯೋಧ್ಯೆಯ ರಾಜನಾಗುವುದನ್ನು ಬಿಟ್ಟು ತಂದೆಯ ಮಾತು ಪಾಲಿಸಲು ಕಾಡಿಗೆ ಹೊರಟ ರಾಮನ ಬಗ್ಗೆ ಮಾತನಾಡುತ್ತಾರೆ. ರಾಮನ ಹೆಸರಿನಲ್ಲಿ ದೇಶದಲ್ಲಿ ದೊಂಬಿ ಎಬ್ಬಿಸುತ್ತಾರೆ. ರಾಜಕಾರಣ ಮಾಡಲಿ. ಆದರೆ ಅದಕ್ಕಾಗಿ ರಾಮನನ್ನು ಉಪಯೋಗಿಸದಿರಿ. ಇಂದು ಸಮಾಜದಲ್ಲಿ ಇಂತಹವರಿಂದಲೇ ಸಮಸ್ಯೆ ಎದುರಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ನೀವು ಸಂಸ್ಕೃತಿ ಬಗ್ಗೆ ಮಾತನಾಡಲು ಹೇಳಿದ್ದೀರಿ. ಆದರೆ, ನಾವು ವೋಟಿನ ವ್ಯವಸ್ಥೆಯಲ್ಲಿದ್ದೇವೆ. ಚುನಾವಣೆ ಸಮೀಪಿಸಿದಂತೆ ಕರಾವಳಿ ಪ್ರದೇಶದಲ್ಲಿ ಏನೇನು ಕಾದಿದೆಯೋ ಗೊತ್ತಿಲ್ಲ. ಮುಸಲ್ಮಾನರ ವೋಟು ಬರಬಹುದು ಎಂದು ನಾವು (ಕಾಂಗ್ರೆಸ್‌) ಕಾದಿದ್ದೇವೆ. ಮುಸ್ಲೀಮರ ವಿರುದ್ಧ ಮಾತನಾಡಿದರೆ ವೋಟು ಬರುತ್ತದೆ ಎಂದು ಅವರು ಕಾದಿದ್ದಾರೆ. ಕರಾವಳಿಯನ್ನು ಭಗವಂತನೇ ಕಾಪಾಡಬೇಕು’ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರವಾದಿಯವರ ಕುರಿತ ಅಪಪ್ರಚಾರ ಸೂರ್ಯ ಚಂದ್ರ ಇರುವವರೆಗೂ ನಡೆಯುತ್ತಿರುತ್ತದೆ. ಆದರೆ ಅವರ ಅನುಯಾಯಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಮುಖ್ಯ. ಪೈಗಂಬರರು ಸರಳತೆಯನ್ನು ಪ್ರತಿಪಾದಿಸಿದರು. ಆದರೆ, ಈಗ ಮದುವೆಗಾಗಿ ದುಬಾರಿ ಖರ್ಚು ಮಾಡುತ್ತಿಲ್ಲವೇ, ವರದಕ್ಷಿಣೆ ಪದ್ಧತಿ ರೂಢಿಯಲ್ಲಿಲ್ಲವೇ ಎಂಬ ಬಗ್ಗೆ ಮುಸ್ಲೀಮರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಆದರ್ಶಗಳ ಬಗ್ಗೆ, ನಿಲುವುಗಳ ಬಗ್ಗೆ ಹಾಗೂ ಬೋಧನೆಗಳ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸ ಆಗುತ್ತಿದೆ. ಸರಿಯಾದ ಅರ್ಥದಲ್ಲಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಶ್ಲಾಘನೀಯ’ ಎಂದರು.

ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್‌ ಫಾ.ಪೀಟರ್‌ ವಾವ್ಲ್‌ ಸಲ್ಡಾನ, ರಫಿಯುದ್ದೀನ್‌ ಕುದ್ರೋಳಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT