ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದಲ್ಲಿ ನಾರಾಯಣ ಗುರು ಸಂದೇಶ: ಸಜ್ಜಾಗುತ್ತಿದೆ ‘ರುದ್ರ ಥೇಟರ್‌’

Last Updated 4 ನವೆಂಬರ್ 2022, 10:28 IST
ಅಕ್ಷರ ಗಾತ್ರ

ಮಂಗಳೂರು: ರಂಗ ಪ್ರಯೋಗದ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಸಂದೇಶವನ್ನು ಸಾರಲು ಉತ್ಸಾಹಿ ಯುವ ರಂಗಕರ್ಮಿಗಳ ತಂಡವಾದ ‘ರುದ್ರ ಥೇಟರ್‌‘ ಸಜ್ಜಾಗುತ್ತಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ‘ರುದ್ರ ಥೇಟರ್‌‘ನ ರಂಗ ನಿರ್ದೇಶಕ ವಿದ್ದು ಉಚ್ಚಿಲ್‌, ‘ದ್ವೇಷರಹಿತ ಸಮಾಜ ನಿರ್ಮಿಸಲು ಗುರು ಸಂದೇಶ ಸಾರುವ ಉದ್ದೇಶದಿಂದ ರೆಪರ್ಟರಿ ಮಾದರಿಯ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. 21 ಮಂದಿ ನುರಿತ ರಂಗಕರ್ಮಿಗಳ ತಂಡ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಪ್ರದೇಶದಲ್ಲಿ ನಾಟಕ ಪ್ರದರ್ಶಿಸಲಿದೆ. ಎರಡು ಗಂಟೆಯ ಈ ಪ್ರಯೋಗ‌ವನ್ನು ಕ್ರಮೇಣ ಇತರ ಪ್ರದೇಶಗಳಿಗೂ ವಿಸ್ತರಿಸಲಿದ್ದೇವೆ. ಎರಡು ತಿಂಗಳ ಕಾಲ ನಮ್ಮ ತಂಡ ಸಂಚಾರ ನಡೆಸಲಿದೆ’ ಎಂದರು.

‘ತಂಡದ ಸದಸ್ಯರಿಗೆ 40 ದಿನಗಳ ರಂಗ ತಾಲೀಮು ನಡೆಸಲಿದ್ದೇವೆ. ಕುದ್ರೊಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇದೇ 6ರಂದು ರಂಗ ತರಬೇತಿಗೆ ರಂಗಕರ್ಮಿ ಸಿ.ಬಸವಲಿಂಗಯ್ಯ ಚಾಲನೆ ನೀಡಲಿದ್ದಾರೆ. ಮುಖಂಡ ಬಿ.ಜನಾರ್ದನ ಪೂಜಾರಿ ಹಾಗೂಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್‌ ಕುಮಾರ್‌ ಭಾಗವಹಿಸುವರು’ ಎಂದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಆರ್‌.ಪದ್ಮರಾಜ್‌, ‘ಮನಸುಗಳು ಕದಡಿರುವ ಇಂದಿನ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಅಗತ್ಯವಿದೆ. ಮನುಷ್ಯರೆಲ್ಲಒಂದೇ ಜಾತಿ ಎಂಬ ಸಂದೇಶ ಸಾರಿದ, ಮೇಲು– ಕೀಳು ವ್ಯವಸ್ಥೆಯ ನಿವಾರಣೆಗೆ ಹೋರಾಡಿದ ನಾರಾಯಣ ಗುರುಗಳ ಸಂದೇಶ ಪ್ರಸಾರದ ಮೂಲಕ ಸ್ವಚ್ಛ ಸಮಾಜ ನಿರ್ಮಿಸುವ ಉದ್ದೇಶ ನಮ್ಮದು. ಈ ರಂಗ ಪ್ರಯೋಗದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ರಾಜ್ಯದ ಬೇರೆ ಪ್ರದೇಶದ ರಂಗ ಕಲಾವಿದರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಶರತ್‌ ಎಸ್‌. ನೀನಾಸಂ, ಮನೋಜ್‌ ವಾಮಂಜೂರು ಹಾಗೂ ಯೋಗೀಶ್‌ ಜಪ್ಪಿನಮೊಗರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT