ಮಂಗಳೂರು: ಕರಾವಳಿ ಪ್ರದೇಶದ ಮುಂಗಾರು ಹಂಗಾಮಿನ ಭತ್ತದ ಬೆಳೆಗಾಗಿ ಅಭಿವೃದ್ಧಿಪಡಿಸಿರುವ ‘ಸಹ್ಯಾದ್ರಿ ಬ್ರಹ್ಮ’ ತಳಿಯನ್ನು ಪ್ರಾಯೋಗಿಕವಾಗಿ ಬೆಳೆದ ಗದ್ದೆಗಳಲ್ಲಿ ಫಸಲು ಚೆನ್ನಾಗಿ ಬಂದಿದೆ. ಕರಾವಳಿಯಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸುಧಾರಿತ ತಳಿ ಎಂಒ4ಗೆ ಪರ್ಯಾಯವಾಗಿ ‘ಸಹ್ಯಾದ್ರಿ ಬ್ರಹ್ಮ’ ತಳಿ ಜನಪ್ರಿಯಗೊಳ್ಳುವ ನಿರೀಕ್ಷೆ ಮೂಡಿಸಿದೆ.
ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರವು ಕರಾವಳಿಯಲ್ಲಿ ಬೆಳೆಯುವ ಸಲುವಾಗಿ ಈ ತಳಿಯನ್ನು ಅಭಿವೃದ್ಧಿಪಡಿಸಿತ್ತು. ಕಂಕನಾಡಿಯ ಕೃಷಿ ವಿಜ್ಞಾನ ಕೇಂದ್ರದವರು ನೀಡಿದ ‘ಸಹ್ಯಾದ್ರಿ ಬ್ರಹ್ಮ’ ಬೀಜವನ್ನು ಬೆಳೆಸಿ ಶಿಬರೂರು ದೇಲಂತಬೆಟ್ಟುವಿನ ಕೃಷಿಕ ದಯಾನಂದ ಕುಲಾಲ್ ಅವರು 5 ಎಕರೆ ಗದ್ದೆಯಲ್ಲಿ ಪ್ರಾಯೋಗಿಕವಾಗಿ ಬಿತ್ತನೆ ಮಾಡಿದ್ದರು. ಈ ವರ್ಷ ಮಳೆಯ ಕಣ್ಣಾಮುಚ್ಚಾಲೆ ನಡುವೆಯೂ ಅವರ ಗದ್ದೆಯಲ್ಲಿ ಈ ತಳಿಯ ಪೈರು ನಳನಳಿಸುತ್ತಿದೆ.
‘ಸಹ್ಯಾದ್ರಿ ಬ್ರಹ್ಮ ತಳಿಯ ಫಸಲು ನಾನು ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿ ಬಂದಿದೆ. ಈ ಮುಂಗಾರು ಹಂಗಾಮಿನಲ್ಲಿ ಮಳೆ ವ್ಯತ್ಯಯವಾದರೂ, ಫಸಲಿನ ಮೇಲೆ ಅದರ ಪರಿಣಾಮ ಉಂಟಾಗಿಲ್ಲ. ಪೈರು ಕಟಾವಿಗೆ ಸಿದ್ಧವಾಗಿದೆ. ಒಂದೆರಡು ದಿನಗಳಲ್ಲಿ ಅದನ್ನು ಕಟಾವು ಮಾಡಲಿದ್ದೇನೆ’ ಎಂದು ದಯಾನಂದ ಕುಲಾಲ್ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.
‘ಎಂಒ4 ಭತ್ತ ಚಿಕ್ಕದು. ಅದಕ್ಕಿಂತ ‘ಸಹ್ಯಾದ್ರಿ ಬ್ರಹ್ಮ’ದ ಗಾತ್ರ ಜಾಸ್ತಿ. ಎಕರೆಗೆ 25ರಿಂದ 28 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ’ ಎಂದರು.
‘ಸಹ್ಯಾದ್ರಿ ಬ್ರಹ್ಮ ಮಳೆಗಾಲಕ್ಕೆ ಸೂಕ್ತವಾದ ತಳಿ. ನೇಜಿ ಹಾಕಿ ನಾಟಿ ಮಾಡಿದ್ದೇವೆ. 120 ದಿನಗಳಲ್ಲಿ ಪೈರು ಕಟಾವಿಗೆ ಬಂದಿದೆ. ದೊಡ್ಡ ಮಳೆ ಬಂದರೂ ಪೈರು ಅಡ್ಡ ಬೀಳುವುದಿಲ್ಲ. ಈ ಪೈರು ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ. ಇದರ ಹುಲ್ಲು ರುಚಿಯಾಗಿದ್ದು, ದನಗಳೂ ಇಷ್ಟಪಟ್ಟು ತಿನ್ನುತ್ತವೆ’ ಎಂದು ತಿಳಿಸಿದರು.
‘ಆಸಕ್ತ ರೈತರು ಮುಂದಿನ ಮುಂಗಾರು ಹಂಗಾಮಿನಲ್ಲಿ ಸಹ್ಯಾದ್ರಿ ಬ್ರಹ್ಮ ತಳಿಯ ಬೀಜ ಬಿತ್ತನೆ ಮಾಡಬಹುದು. ನಾನು ಸಹ್ಯಾದ್ರಿ ಪಂಚಮುಖಿ ತಳಿಯ ಬೀಜವನ್ನು 185 ರೈತರಿಗೆ ನೀಡಿದ್ದೆ. ಇದರ ಬೀಜವನ್ನೂ ಆಸಕ್ತ ರೈತರಿಗೆ ನೀಡಲಿದ್ದೇನೆ’ ಎಂದು ಅವರು ತಿಳಿಸಿದರು.
‘ಬಂಟ್ವಾಳ ತಾಲ್ಲೂಕಿನ ರೈತರ ಬಳಗವೂ ಇದನ್ನು ಪ್ರಾಯೋಗಿಕವಾಗಿ ಬೆಳೆದಿದೆ. ಅಲ್ಲೂ ಫಸಲು ಚೆನ್ನಾಗಿ ಬಂದಿದೆ’ ಎಂದು ಕಂಕನಾಡಿಯ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ವಿಜ್ಞಾನಿ ಹರೀಶ್ ಶೆಣೈ ತಿಳಿಸಿದರು.
‘ಸಹ್ಯಾದ್ರಿ ಬ್ರಹ್ಮ’ ತಳಿಯ ಭತ್ತ ಕುಚ್ಚಲಕ್ಕಿಗೂ ಸೂಕ್ತವಾಗಿದೆ. ಕರಾವಳಿಯ ಆಹಾರ ಪದ್ಧತಿಗೆ ಪೂರಕವಾಗಿರುವ ಈ ತಳಿ ಇಲ್ಲಿನ ರೈತರಿಗೂ ಇಷ್ಟವಾಗಲಿದೆ– ಹರೀಶ್ ಶೆಣೈ . ಬೇಸಾಯ ವಿಜ್ಞಾನಿ ಕಂಕನಾಡಿಯ ಕೃಷಿ ವಿಜ್ಞಾನ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.