ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಮರಳು ಸಮಸ್ಯೆ; ನ.10ರಂದು ಪ್ರತಿಭಟನೆ

Published : 9 ನವೆಂಬರ್ 2023, 3:21 IST
Last Updated : 9 ನವೆಂಬರ್ 2023, 3:21 IST
ಫಾಲೋ ಮಾಡಿ
Comments

ಮಂಗಳೂರು: ಜಿಲ್ಲೆಯ ಮರಳು ಸಮಸ್ಯೆ ನಿವಾರಣೆಗೆ ಆಗ್ರಹಿಸಿ ನ.10ರಂದು ಮಧ್ಯಾಹ್ನ 3 ಗಂಟೆಗೆ ಪುರಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಸಿಆರ್‌ಝೆಡ್ ಮತ್ತು ನಾನ್ ಸಿಆರ್‌ಝೆಡ್ ವಲಯಗಳಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ತೊಂದರೆಯಾಗಿದೆ. ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿತ್ತು. ಇಷ್ಟು ದಿನ ಕಳೆದರೂ ಯಾವುದೇ ಸ್ಪಂದನೆ ಇಲ್ಲ. ಹೀಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ’ ಎಂದರು.

ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್, ಕೆನರಾ ಬಿಲ್ಡರ್ಸ್ ಅಸೋಸಿಯೇಷನ್, ಕ್ರೆಡಾಯ್, ಕರಾವಳಿ ಸಿಮೆಂಟ್ ಡೀಲರ್ಸ್ ಅಸೋಸಿಯೇಷನ್, ಸ್ಟೀಲ್‍ ಡೀಲರ್ಸ್ ಅಸೋಸಿಯೇಷನ್, ಪೇಂಟ್ ಹಾರ್ಡ್‍ವೇರ್ ಡೀಲರ್ಸ್ ಅಸೋಸಿಯೇಷನ್ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. 1,000ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಮರಳಿನ ಸಮಸ್ಯೆಯಿಂದ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಎಂ–ಸ್ಯಾಂಡ್‌ನಲ್ಲಿ ಅಲ್ಪಸ್ವಲ್ಪ ಕೆಲಸಗಳು ನಡೆಯುತ್ತಿವೆ. ಬಹಳಷ್ಟು ಜನರು ಈ ಮರಳಿನ ಬಳಕೆಯನ್ನು ನಿರಾಕರಿಸುತ್ತಿದ್ದಾರೆ. ರಾತ್ರಿ ಹೊತ್ತು ಲೋಡ್ ಒಂದಕ್ಕೆ ₹18 ಸಾವಿರಕ್ಕೆ ಮರಳನ್ನು ತರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಕೂಡ ಗುಣಮಟ್ಟದಿಂದ ಇರುವುದಿಲ್ಲ ಜತೆಗೆ, ಪ್ರಮಾಣವೂ ಕಡಿಮೆ ಇರುತ್ತದೆ. ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ಉಪಾಧ್ಯಕ್ಷ ದಿನಕರ ಸುವರ್ಣ ಆರೋಪಿಸಿದರು.

ನಾನ್‌ ಸಿಆರ್‌ಝೆಡ್‌ ವಲಯದಲ್ಲಿ ಟೆಂಡರ್ ಪಡೆದವರಿಗೆ ವೇ ಬ್ರಿಡ್ಜ್ ಅಳವಡಿಸುವಂತೆ ಗಣಿ ಇಲಾಖೆ ನಿರ್ದೇಶನ ನೀಡಿತ್ತು. ಟೆಂಡರ್ ಪಡೆದವರು ನಿಯಮ ಪಾಲಿಸದಿದ್ದರೆ ಟೆಂಡರ್ ರದ್ದುಪಡಿಸಿ ಬೇರೆಯವರಿಗೆ ಕೊಡಬಹುದಿತ್ತು ಅಥವಾ ಗಣಿ ಇಲಾಖೆಯೇ ವೇ ಬ್ರಿಡ್ಜ್ ನಿರ್ಮಿಸಬಹುದಿತ್ತು. ಜಿಲ್ಲಾಡಳಿತವೂ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಅವರು ಹೇಳಿದರು.

ಮೇ 15ರವೇಳೆಗೆ ಸ್ಥಗಿತಗೊಂಡಿದ್ದ ಮರಳು ಗಣಿಗಾರಿಕೆ ಆರು ತಿಂಗಳು ಕಳೆದರೂ ಇನ್ನೂ ಪ್ರಾರಂಭವಾಗಿಲ್ಲ. ಜಿಲ್ಲಾಡಳಿತ ಮರಳಿನ ಸಮಸ್ಯೆ ನಿವಾರಿಸದಿದ್ದಲ್ಲಿ ಮುಂದಿನ ಹಂತದಲ್ಲಿ ಅನಿರ್ದಿಷ್ಟಾವಧಿ ಉಪವಾಸ ನಡೆಸಲು ಯೋಚಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ದೇವಾನಂದ ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಸತೀಶ್ ಕುಮಾರ್ ಜೋಗಿ, ಸುರೇಶ್ ಜೆ., ಚಂದನ್‍ದಾಸ್, ಮಧುಸೂದನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT