ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಮಾಫಿಯಾಕ್ಕೆ ಮೂಗುದಾರ ಹಾಕಿದ್ದ ಸೆಂಥಿಲ್‌

ದೊಡ್ಡ ಸವಾಲುಗಳನ್ನೂ ತಾಳ್ಮೆಯಿಂದ ಎದುರಿಸುತ್ತಿದ್ದ ಅಧಿಕಾರಿ
Last Updated 6 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮಂಗಳೂರು: ಒಂದು ವರ್ಷ ಹನ್ನೊಂದು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರು ಜಿಲ್ಲೆಯಲ್ಲಿ ಮರಳು ಮಾಫಿಯಾ ನಿಯಂತ್ರಿಸಲು ಒಂದಾದ ಮೇಲೊಂದರಂತೆ ಹಲವು ಪ್ರಯೋಗಗಳನ್ನು ನಡೆಸಿದ್ದರು. ಕೊನೆಗೂ ತಾವೇ ಆಸಕ್ತಿ ವಹಿಸಿ ರೂಪಿಸಿದ್ದ ‘ಸ್ಯಾಂಡ್‌ ಬಜಾರ್‌’ ಎಂಬ ವ್ಯವಸ್ಥೆಯ ಮೂಲಕ ಮಾಫಿಯಾಕ್ಕೆ ಮೂಗುದಾರ ಹಾಕುವಲ್ಲಿ ಯಶಸ್ವಿಯಾಗಿದ್ದರು.

2017ರ ಅಕ್ಟೋಬರ್‌ 10ರಿಂದ ಶುಕ್ರವಾರದವರೆಗೂ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ಸೆಂಥಿಲ್‌, ಆರಂಭದಿಂದಲೇ ಮರಳು ಮಾಫಿಯಾದ ಅಬ್ಬರವನ್ನು ಕಟ್ಟಿಹಾಕುವ ಸವಾಲು ಎದುರಿಸಿದ್ದರು. ‘ರಂಗೋಲಿ ಕೆಳಗೆ ನುಸುಳಿ’ ಮರಳನ್ನು ಕಳ್ಳ ಸಾಗಣೆ ಮಾಡುವವರು ಮತ್ತು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಮಾರುವವರ ವಿರುದ್ಧ ಸಮರ ಸಾರಿದ್ದರು.

ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಜೆಡ್‌) ವ್ಯಾಪ್ತಿಯಲ್ಲಿನ ನದಿಗಳಲ್ಲಿ ಮರಳು ದಿಬ್ಬ ತೆರವಿಗೆ ಹೆಚ್ಚು ಪೈಪೋಟಿ ಇದೆ. ಆದರೆ, ಸಿಆರ್‌ಜೆಡ್‌ ವ್ಯಾಪ್ತಿಯ ಹೊರಗೆ ಲಭ್ಯವಿರುವ ಮರಳನ್ನು ಮುಟ್ಟುವವರೇ ಇರಲಿಲ್ಲ. ಖುದ್ದು ಆಸಕ್ತಿ ವಹಿಸಿ ನಿಯಮಗಳಲ್ಲಿ ತಿದ್ದುಪಡಿ ಮಾಡಿಸಿದ್ದ ಸೆಂಥಿಲ್‌, ನದಿ ತೀರದ ಮರಳು ಕೂಡ ಅಧಿಕೃತವಾಗಿ ಮಾರುಕಟ್ಟೆ ತಲುಪುವಂತೆ ಮಾಡಿದ್ದರು.

ಮರಳು ಮಾಫಿಯಾದ ಕೈಗಳನ್ನು ಪೂರ್ಣವಾಗಿ ಕಟ್ಟಿಹಾಕಲು ಬಯಸಿದ್ದ ಜಿಲ್ಲಾಧಿಕಾರಿ, ತಾವೇ ಖುದ್ದಾಗಿ ಆಸಕ್ತಿ ವಹಿಸಿ ‘ಸ್ಯಾಂಡ್‌ ಬಜಾರ್‌’ ಎಂಬ ಮೊಬೈಲ್‌ ಅಪ್ಲಿಕೇಷನ್‌ ರೂಪಿಸಿದ್ದರು. 2019ರ ಏಪ್ರಿಲ್‌ ಅಂತ್ಯದಿಂದ ಈ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಮರಳು ಖರೀದಿಗೆ ಅವಕಾಶ ಕಲ್ಪಿಸಿದ್ದರು. ಸರ್ಕಾರ ನಿಗದಿಪಡಿಸಿದ ದರದಲ್ಲೇ ಮರಳು ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಿದ್ದರು.

ಈ ವ್ಯವಸ್ಥೆಯನ್ನೂ ಗುತ್ತಿಗೆದಾರರು, ಸಾಗಣೆದಾರರು ದುರುಪಯೋಗ ಮಾಡಿಕೊಳ್ಳುತ್ತಿರುವ ದೂರುಗಳು ಬಂದಿದ್ದವು. ತಕ್ಷಣವೇ ಪರವಾನಗಿಗಳ ಸಂಖ್ಯೆಯನ್ನು 400ರಿಂದ 100ಕ್ಕೆ ಮಿತಿಗೊಳಿಸಿದ್ದರು. ಈವರೆಗೆ ಸ್ಯಾಂಡ್‌ ಬಜಾರ್‌ ಮೂಲಕ 3,190 ಲೋಡ್‌ ಮರಳು ವಿತರಣೆಯಾಗಿತ್ತು. ಮಂಗಳವಾರ ರಜೆಯ ಮೇಲೆ ತೆರಳುವ ಮುನ್ನ ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ವಿಪತ್ತು; ಚುನಾವಣೆ:

ಸೆಂಥಿಲ್‌ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಜಿಲ್ಲೆ ಎರಡು ಘೋರ ಪ್ರಕೃತಿ ವಿಕೋಪಗಳಿಗೆ ಸಾಕ್ಷಿಯಾಯಿತು. 2018ರಲ್ಲಿ ಭಾರಿ ಮಳೆಯಿಂದ ದಕ್ಷಿಣ ಕನ್ನಡ– ಕೊಡಗು ಜಿಲ್ಲೆಗಳ ಗಡಿಭಾಗದ ಜೋಡುಪಾಲದಲ್ಲಿ ಭೀಕರ ಭೂಕುಸಿತ ಸಂಭವಿಸಿತು. ನೂರಾರು ಕುಟುಂಬಗಳ ಜನರು ನಿರಾಶ್ರಿತರಾಗಿದ್ದರು. ಜಿಲ್ಲೆಯ ಗಡಿಯನ್ನು ಲೆಕ್ಕಿಸದೇ ಕೊಡಗು ಜಿಲ್ಲೆಯ ಜನರ ನೆರವಿಗೆ ಧಾವಿಸಿದ್ದ ಸೆಂಥಿಲ್‌, ಸಂತ್ರಸ್ತರನ್ನು ರಕ್ಷಿಸಿ, ಸುರಕ್ಷಿತ ನೆಲೆ ಒದಗಿಸಲು ಶ್ರಮಿಸಿದ್ದರು.

ಈ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ತಾಲ್ಲೂಕಿನಲ್ಲಿ ಪ್ರವಾಹ, ಭೂಕುಸಿತ ಉಂಟಾದಾಗಲೂ ಖುದ್ದಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಸ್ವಯಂಪ್ರೇರಿತರಾಗಿಯೇ ಸಂತ್ರಸ್ತರ ರಕ್ಷಣೆಗೆ ಕ್ರಮ ಕೈಗೊಂಡಿದ್ದರು. ಎರಡೂ ವರ್ಷಗಳ ಅವರ ಕಾರ್ಯಾಚರಣೆ ಜಿಲ್ಲೆಯಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

2018ರ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯನ್ನು ಸೆಂಥಿಲ್‌ ಯಶಸ್ವಿಯಾಗಿ ನಡೆಸಿದ್ದರು. ಚುನಾವಣೆಯ ದಿನಗಳಲ್ಲಿ ಹಗಲು, ರಾತ್ರಿಯನ್ನು ಲೆಕ್ಕಿಸದೇ ಕೆಲಸ ಮಾಡುತ್ತಿದ್ದ ಜಿಲ್ಲಾಧಿಕಾರಿ, ಇತರರನ್ನೂ ಅದಕ್ಕೆ ಒಗ್ಗಿಸಿದ್ದರು.

ಪ್ರವಾಸೋದ್ಯಮಕ್ಕೆ ಒತ್ತು:

ಕೋಮು ಸಂಘರ್ಷಗಳ ಕಾರಣದಿಂದ ಕಳಂಕ ಅಂಟಿಸಿಕೊಳ್ಳುತ್ತಿದ್ದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಮೂಲಕ ಹೊಸ ಮನ್ವಂತರ ಆರಂಭಕ್ಕೆ ಸೆಂಥಿಲ್‌ ಮುಂದಾಗಿದ್ದರು. ಇದಕ್ಕಾಗಿ ನದಿ ಉತ್ಸವಗಳಂತಹ ಕಾರ್ಯಕ್ರಮ ರೂಪಿಸಿದ್ದರು.

ರಿಯಲ್‌ ಎಸ್ಟೇಟ್‌ ಉದ್ಯಮದ ಪ್ರತಿರೋಧದ ನಡುವೆಯೂ ಜಿಲ್ಲೆಯಲ್ಲಿನ ಭೂ ದಾಖಲೆಗಳನ್ನು ಸರಳೀಕರಣ ಮಾಡುವ ಮತ್ತು ಎಲ್ಲರಿಗೂ ದಾಖಲೆಗಳನ್ನು ಒದಗಿಸುವ ಪ್ರಸ್ತಾವವನ್ನು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT