ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ | ಶಾಸಕರ ಆಪ್ತರಿಗೆ ಮಾತ್ರ ಸರ್ಕಾರಿ ಸವಲತ್ತು: ಆರೋಪ

ಕಡಬ: ಪ. ಜಾತಿ, ಪಂಗಡದವರ ಕ್ಷೇಮಾಭಿವೃದ್ಧಿ ಸಮಿತಿ ಸಭೆ
Published 29 ಅಕ್ಟೋಬರ್ 2023, 13:17 IST
Last Updated 29 ಅಕ್ಟೋಬರ್ 2023, 13:17 IST
ಅಕ್ಷರ ಗಾತ್ರ

ಕಡಬ (ಉಪ್ಪಿನಂಗಡಿ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣೆ ಮತ್ತು ಕ್ಷೇಮಾಭಿವೃದ್ಧಿ ಸಮಿತಿಯ ಕಡಬ ತಾಲ್ಲೂಕು ಮಟ್ಟದ ಸಭೆ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಅಧ್ಯಕ್ಷತೆಯಲ್ಲಿ ಕಡಬ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆಯಿತು.

ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಮೀಸಲಾಗಿರುವ ಕೊಳವೆ ಬಾವಿ ಮಂಜೂರು ಸೇರಿದಂತೆ ಹೆಚ್ಚಿನ ಸರ್ಕಾರಿ ಸವಲತ್ತುಗಳು ಅರ್ಹರಿಗೆ ಸಿಗುತ್ತಿಲ್ಲ. ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯಕರ್ತರು ಅಥವಾ ಶಾಸಕರ ಆಪ್ತರಿಗೆ ಮಾತ್ರ ಸವಲತ್ತು ಹಂಚಲಾಗುತ್ತಿದೆ ಎಂದು ದಲಿತ ಮುಖಂಡ ಬಾಬು ಎನ್.ಸವಣೂರು ದೂರಿದರು. ಅದಕ್ಕೆ ಧ್ವನಿಗೂಡಿಸಿದ ಮುಖಂಡರು ಆ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಅಧಿಕಾರಿಗಳ ಹಾಜರಿಗೆ ಆಗ್ರಹ: ತಾಲ್ಲೂಕು ಮಟ್ಟದ ಸಭೆಯಲ್ಲಿ ತಾಲ್ಲೂಕು ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿಗಳು ಭಾಗವಹಿಸಬೇಕಿದ್ದು, ಕಡಬ ಠಾಣೆಯ ಎಎಸ್‌ಐ ಮಾತ್ರ ಇದ್ದಾರೆ. ಕಳೆದ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸಲಾಗಿತ್ತು. ಅದಕ್ಕೆ ಪುತ್ತೂರು ಡಿವೈಎಸ್ಪಿ ಪಾಲನಾ ವರದಿಯಲ್ಲಿ ಉತ್ತರಿಸಿ ಕಡಬ ತಾಲ್ಲೂಕು ವ್ಯಾಪ್ತಿಯ ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ, ಉಪ್ಪಿನಂಗಡಿ ಠಾಣೆಯ ಎಸ್‌ಐಗಳು ಹಾಜರಾಗುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಅದು ಜಾರಿಗೆ ಬಂದಿಲ್ಲ ಎಂದು ಗುರುವಪ್ಪ ಕಲ್ಲುಗುಡ್ಡೆ ಹೇಳಿದರು.

ಮುಂದಿನ ಸಭೆಗಳಲ್ಲಿ ತಾಲ್ಲೂಕಿನ ಎಲ್ಲ ಠಾಣೆಗಳ ಎಸ್‌ಐಗಳು ಭಾಗವಹಿಸುವಂತೆ ಎಸ್‌ಪಿಗೆ ಪತ್ರ ಬರೆಯಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಪೊಲೀಸ್ ಠಾಣೆಗಳಲ್ಲಿ ಕೆಲವೇ ಮಂದಿ ಮುಖಂಡರನ್ನು ಸೇರಿಸಿಕೊಂಡು ಪರಿಶಿಷ್ಟ ಜಾತಿ, ಪಂಗಡದವರ ಕುಂದು ಕೊರತೆ ಸಭೆ ನಡೆಸಲಾಗುತ್ತಿದೆ. ಎಲ್ಲರಿಗೂ ಮಾಹಿತಿ ನೀಡಿ ಸರಿಯಾದ ರೀತಿಯಲ್ಲಿ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಬಸ್‌ಗೆ ಮನವಿ: ಈ ಹಿಂದೆ ಪುತ್ತೂರಿನಿಂದ ನೆಲ್ಯಾಡಿ, ಬಲ್ಯ, ಕಡಬ ಮೂಲಕ ಸುಬ್ರಹ್ಮಣ್ಯಕ್ಕೆ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಕೆಲವು ಸಮಯದಿಂದ ಸಂಚರಿಸುತ್ತಿಲ್ಲ. ಪುತ್ತೂರಿನಿಂದ ಕಾಣಿಯೂರು, ನಿಂತಿಕಲ್, ಎಡಮಂಗಲ ಮೂಲಕ ಸಂಜೆ ವೇಳೆಗೆ ಕಡಬಕ್ಕೆ ಸಂಚರಿಸುತ್ತಿದ್ದ ಬಸ್ ಬರುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ದೂರಲಾಯಿತು.

ಕೆಎಸ್‌ಆರ್‌ಟಿಸಿ ಅಧಿಕಾರಿ ಅಬ್ಬಾಸ್ ಕೋಚಕಟ್ಟೆ ಪ್ರತಿಕ್ರಿಯಿಸಿ ಬಸ್‌ಗಳ ಕೊರತೆಯಿಂದ ಹೀಗಾಗುತ್ತಿದೆ. ಶೀಘ್ರ ಹೊಸ ಬಸ್‌ಗಳು ಬರಲಿದ್ದು, ಬಳಿಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಬಲ್ಯದಲ್ಲಿ ಶಿಕಾರಿ: ಬಲ್ಯ ಗ್ರಾಮದ ಅರಣ್ಯದಲ್ಲಿ ನಿರಂತರವಾಗಿ ಶಿಕಾರಿ ನಡೆಸಲಾಗುತ್ತಿದ್ದು, ಕಾಡು ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಜನವಸತಿ ಇರುವ ಪ್ರದೇಶಗಳಿಗೂ ಬೇಟೆಗಾರರು ಕಾಡು ಪ್ರಾಣಿಗಳನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ. ಕೋವಿಯಿಂದ ಸಿಡಿದ ಗುಂಡುಗಳು ಮನೆಯಂಗಳಕ್ಕೆ ಬಿದ್ದ ಉದಾಹರಣೆಗಳೂ ಇವೆ ಎಂದು ಸ್ಥಳೀಯ ಮುಖಂಡರು ದೂರಿದರು. ಆ ಬಗ್ಗೆ ಪರಿಶೀಲಿಸುವುದಾಗಿ
ಅರಣ್ಯಾಧಿಕಾರಿಗಳು ತಿಳಿಸಿದರು.

ಮುಖಂಡರಾದ ಶಶಿಧರ ಬೊಟ್ಟಡ್ಕ, ಆನಂದ ಮಿತ್ತಬೈಲ್, ಗುರುವಪ್ಪ ಕುಬಲಾಡಿ, ವಸಂತ ಕುಬಲಾಡಿ, ಜಯಪ್ರಕಾಶ್, ಕೆ.ಪಿ.ಆನಂದ, ಚಂದ್ರಹಾಸ ಬಲ್ಯ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ಉಪ ತಹಶೀಲ್ದಾರ್ ಮನೋಹರ್, ಶಿಕ್ಷಣ ಇಲಾಖೆಯ ವಿಷ್ಣುಪ್ರಸಾದ್, ಓಬಳೇಶ್, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಸಂಗಪ್ಪ ಹುಕ್ಕೇರಿ, ಕಡಬ ಎಎಸ್‌ಐ ಶಿವರಾಮ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಕೃಷ್ಣ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT