ಗುರುವಾರ , ಜುಲೈ 29, 2021
23 °C
ಅತಂತ್ರ ಸ್ಥಿತಿಯಲ್ಲಿ ಕರಾವಳಿಗರು: ಶಾಸಕರು, ಸಂಸದರ ವಿರುದ್ಧ ಸಂತ್ರಸ್ತರ ಆಕ್ರೋಶ

ಮಂಗಳೂರು: ಕುವೈತ್‌ನಿಂದ ನಿಗದಿಯಾಗಿದ್ದ ವಿಮಾನ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಂಗಳೂರು: ಉದ್ಯೋಗ ಕಳೆದುಕೊಂಡವರು ಮತ್ತು ಕೋವಿಡ್‌–19 ಸೋಂಕಿನ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದವರನ್ನು ಕುವೈತ್‌ನಿಂದ ಮರಳಿ ಕರೆತರಲು ನಿಗದಿಯಾಗಿದ್ದ ವಿಮಾನದ ಹಾರಾಟ ರದ್ದಾಗಿದೆ. ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಕರಾವಳಿಯ ಜನರು ಇಲ್ಲಿನ ಶಾಸಕರು, ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ‘ವಂದೇ ಭಾರತ್‌ ಮಿಷನ್‌’ನಲ್ಲಿ ಕುವೈತ್‌ನಿಂದ ಮಂಗಳೂರಿಗೆ ಬೇಡಿಕೆಯಷ್ಟು ವಿಮಾನ ಒದಗಿಸಿಲ್ಲ. ವಿವಿಧ ಸಂಘ, ಸಂಸ್ಥೆಗಳ ನೇತೃತ್ವದಲ್ಲಿ ಬಾಡಿಗೆ ವಿಮಾನಗಳನ್ನು ಹಿಡಿದು ಜನರು ಬರುತ್ತಿದ್ದಾರೆ. ಕುವೈತ್‌ ಕೇರಳ ಮುಸ್ಲಿಂ ಅಸೋಸಿಯೇಷನ್‌ನ ಕರ್ನಾಟಕ ಘಟಕ ಜೂನ್‌ 27ರಂದು ವಿಮಾನದ ವ್ಯವಸ್ಥೆ ಮಾಡಿತ್ತು. ಆದರೆ, ಮಂಗಳೂರಿನಲ್ಲಿ ವಿಮಾನ ಇಳಿಸಲು ರಾಜ್ಯ ಸರ್ಕಾರ ಅನುಮತಿ ನೀಡದ ಕಾರಣದಿಂದ ಹಾರಾಟ ರದ್ದಾಗಿದೆ.

ಜೂನ್‌ 27ರಂದು ನಿಗದಿಯಾಗಿದ್ದ ವಿಮಾನದಲ್ಲಿ ಗರ್ಭಿಣಿಯರು ಸೇರಿ ದಂತೆ 164 ಜನರು ಬರಬೇಕಿತ್ತು. ಅವರಲ್ಲಿ ಬಹುತೇಕರು ಕೆಲಸ ಕಳೆದುಕೊಂಡವರು. ಈಗ ಅಲ್ಲಿಯೇ ಉಳಿದಿದ್ದು, ವಸತಿ, ಊಟದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಸಂತ್ರಸ್ತರು ಕರಾವಳಿಯ ಬಿಜೆಪಿ ಸಂಸದರು ಮತ್ತು ಶಾಸಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿರುವ ಆಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

‘ಕರಾವಳಿಯ ಶಾಸಕರೇ, ಸಂಸದರೇ ನಿಮಗೆ ಕೈ ಮುಗಿಯುತ್ತೇವೆ. 48 ಡಿಗ್ರಿ ಉಷ್ಣಾಂಶದಲ್ಲಿ ಇಲ್ಲಿ ನಾವು ಬೇಯುತ್ತಿದ್ದೇವೆ. ನೀವು ಎ.ಸಿ ಕೊಠಡಿಯಲ್ಲಿ ಇದ್ದೀರಿ. ಊರಿಗೆ ಬರಲು ನಮಗೆ ಯಾರೂ ನೆರವಾಗುತ್ತಿಲ್ಲ. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌, ಗಣೇಶ್ ಕಾರ್ಣಿಕ್‌ ಮಾತ್ರ ನಮ್ಮ ಅಹವಾಲು ಕೇಳುತ್ತಿದ್ದಾರೆ. ಉಳಿದವರು ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಬಿಜೆಪಿಯ 13 ಜನ ಶಾಸಕರು ಇದ್ದೀರಿ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಮ್ಮ ಮಾತು ಕೇಳುವುದಿಲ್ಲವೇ’ ಎಂದು ಕುವೈತ್‌ನಲ್ಲಿರುವ ಜನರು ಆಡಿಯೊದಲ್ಲಿ ಪ್ರಶ್ನಿಸಿದ್ದಾರೆ.

‘ನೀವು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ಗಿಂತ ಹೆಚ್ಚು ಅನುಕೂಲ ಮಾಡುತ್ತೀರಿ ಎಂದು ಇಲ್ಲಿಂದ ಖರ್ಚು ಮಾಡಿಕೊಂಡು ಬಂದು ಮತ ಹಾಕಿದ್ದೆವು. ಆದರೆ, ನಮ್ಮ ಮಾತನ್ನು ಕೇಳಿಸಿಕೊಳ್ಳುವುದಕ್ಕೂ ನೀವು ಸಿದ್ಧರಿಲ್ಲವೇ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು