ಲೋಕಸಭೆ ಚುನಾವಣೆ: ಕಮಿಷನರೇಟ್‌ ವ್ಯಾಪ್ತಿಯಲ್ಲಿ 220 ಸೂಕ್ಷ್ಮ ಮತಗಟ್ಟೆ

ಶುಕ್ರವಾರ, ಏಪ್ರಿಲ್ 26, 2019
24 °C
ಅಗತ್ಯ ಭದ್ರತಾ ಸಿಬ್ಬಂದಿ ನಿಯೋಜನೆ

ಲೋಕಸಭೆ ಚುನಾವಣೆ: ಕಮಿಷನರೇಟ್‌ ವ್ಯಾಪ್ತಿಯಲ್ಲಿ 220 ಸೂಕ್ಷ್ಮ ಮತಗಟ್ಟೆ

Published:
Updated:
Prajavani

ಮಂಗಳೂರು: ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ ಪಾಟೀಲ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಒಟ್ಟು 883 ಬೂತ್‌ಗಳಿದ್ದು, ಈ ಪೈಕಿ 220 ಬೂತ್‌ಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. 12 ಸಿಎಆರ್‌, 8 ಕೆಎಸ್‌ಆರ್‌ಪಿ ತುಕುಡಿಗಳನ್ನು ನಿಯೋಜಿಸಲಾಗುತ್ತಿದೆ ಎಂದರು.

220 ಬೂತ್‌ಗಳಲ್ಲಿ 501 ಸಮಾಜಘಾತುಕ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಅವರಿಂದ ಯಾವುದೇ ತೊಂದರೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳ ಪೈಕಿ 156 ಮತಗಟ್ಟೆಗಳಲ್ಲಿ ಸಿಆರ್‌ಪಿಎಫ್‌, ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಉಳಿದ ಬೂತ್‌ಗಳಲ್ಲಿ ಮೈಕ್ರೋ ವೀಕ್ಷಕರ ಉಸ್ತುವಾರಿಯಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಚುನಾವಣೆಗಾಗಿ ಇಬ್ಬರು ಡಿಸಿಪಿ, ಏಳು ಮಂದಿ ಡಿವೈಎಸ್ಪಿ, ಎಸಿಪಿ, 16 ಇನ್‌ಸ್ಪೆಕ್ಟರ್‌, 37 ಸಬ್‌ ಇನ್‌ಸ್ಪೆಕ್ಟರ್‌, 79 ಎಎಸ್‌ಐ, ಹೆಡ್ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌, ಗೃಹರಕ್ಷಕದಳದ ಸಿಬ್ಬಂದಿ ಸೇರಿದಂತೆ ಒಟ್ಟು 1,500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜತೆಗೆ ಎರಡು ಸಿಆರ್‌ಪಿಎಫ್‌, 8 ಕೆಎಸ್‌ಆರ್‌ಪಿ, 12 ಸಿಎಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ 430 ರೌಡಿಗಳಿಂದ ಬಾಂಡ್‌ಗಳನ್ನು ಪಡೆಯಲಾಗಿದೆ ಎಂದರು.

ನೀತಿ ಸಂಹಿತೆ ಜಾರಿಯಾದ ನಂತರ ಒಟ್ಟು 21 ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ಲೈಸನ್ಸ್‌ ಹೊಂದಿರುವ 2011 ಶಸ್ತ್ರಾಸ್ತ್ರಗಳ ಪೈಕಿ, 1,949 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ. ಉಳಿದ 62 ಶಸ್ತ್ರಾಸ್ತ್ರಗಳಿಗೆ ವಿನಾಯಿತಿ ನೀಡಲಾಗಿದೆ ಎಂದರು.

ಮಸ್ಟರಿಂಗ್‌ ಹಾಗೂ ಡಿ– ಮಸ್ಟರಿಂಗ್‌ ಕೇಂದ್ರಗಳಾದ ಮೂಡುಬಿದಿರೆ ಮಹಾವೀರ ಕಾಲೇಜು, ನಗರದ ರೋಸಾರಿಯೊ ಶಾಲೆ, ರಾಮಕೃಷ್ಣ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಭದ್ರತೆ ಒದಗಿಸಲಾಗಿದೆ. 17 ರಂದು ಮಸ್ಟರಿಂಗ್‌ ನಡೆಯಲಿದ್ದು, ಸ್ಟ್ರಾಂಗ್‌ ರೂಮ್‌ಗೆ ಸಿಆರ್‌ಪಿಎಫ್‌ ಸಿಬ್ಬಂದಿಯ ಜತೆಗೆ ಸ್ಥಳೀಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಡಿಸಿಪಿ ಹನುಮಂತ್ರಾಯ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !