ಮಂಗಳೂರು: ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ ನಗರದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಸಂಬಂಧ ಸಮಾಜ ವಿವಿಧ ಕ್ಷೇತ್ರಗಳ ಜನರನ್ನು ಒಗ್ಗೂಡಿಸಿ, ಅಭಿಪ್ರಾಯ ಕ್ರೋಡೀಕರಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸುವ ಕಾರ್ಯಕ್ಕೆ ಮತ್ತೊಮ್ಮೆ ಚಾಲನೆ ದೊರೆತಿದೆ.
ಇದರ ಭಾಗವಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು, ಮಂಗಳವಾರ ಕೆನರಾ ವಾಣಿಜ್ಯೋದ್ಯಮ ಸಂಸ್ಥೆ, ಎಸ್‌ಡಿಎಂ ಕಾನೂನು ಕಾಲೇಜು, ಭಾರತೀಯ ವೈದ್ಯಕೀಯ ಸಂಘದ ಘಟಕಗಳಿಗೆ ಭೇಟಿ ನೀಡಿ ಬೆಂಬಲ ಕೋರಿದರು.
‘ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಹಾಸನ ಜಿಲ್ಲೆಗಳ ಜನರಿಗೆ ಅನುಕೂಲವಾಗುತ್ತದೆ. ಹೈಕೋರ್ಟ್ ಮೆಟ್ಟಲೇರಿರುವ ಪ್ರಕರಣಗಳಿಗಾಗಿ ದೂರದ ಬೆಂಗಳೂರಿಗೆ ಅಲೆದಾಡುವುದು ತಪ್ಪುತ್ತದೆ. ಜೊತೆಗೆ, ತ್ವರಿತ ನ್ಯಾಯದಾನ ಸಾಧ್ಯವಾಗುತ್ತದೆ. ಎಲ್ಲ ಪಕ್ಷಗಳು, ವಿವಿಧ ಸಂಘ–ಸಂಸ್ಥೆಗಳು ಒಂದಾಗಿ ಈ ಬಗ್ಗೆ ಪ್ರಯತ್ನ ನಡೆಸಬೇಕಾಗಿದೆ’ ಎಂದು ಐವನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಕಾನೂನು ಕಾಲೇಜುಗಳು ಇದ್ದು, ಹೊಸ ಮೂರು ಕಾಲೇಜುಗಳ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ಸ್ಥಳೀಯ ಹಲವರು ಹೈಕೋರ್ಟ್ ವಕೀಲರಾಗಿದ್ದಾರೆ. ಜಿಲ್ಲೆಯಲ್ಲಿ ರಸ್ತೆ, ರೈಲ್ವೆ, ವಿಮಾನ ನಿಲ್ದಾಣ, ಸಮುದ್ರ ಮಾರ್ಗ ಹೀಗೆ ಎಲ್ಲ ನಾಲ್ಕು ವಿಧಗಳ ಸಾರಿಗೆ ಸಂಪರ್ಕ ಇರುವುದು, ಹೈಕೋರ್ಟ್ ಪೀಠ ಸ್ಥಾಪನೆಗೆ ಪೂರಕ ಅಂಶವಾಗಲಿದೆ ಎಂದು ಹೇಳಿದರು.
ಬಾಳೆಪುಣಿಯಲ್ಲಿ ಹೊಸ ಜೈಲು ಕಟ್ಟಡ ನಿರ್ಮಾಣವಾಗುತ್ತಿದ್ದು, ಜೈಲು ಅಲ್ಲಿಗೆ ವರ್ಗಾವಣೆಯಾಗಬಹುದು. ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪುತ್ತೂರಿಗೆ ಸ್ಥಳಾಂತರಗೊಂಡರೆ, ಈ ಸ್ಥಳ, ಹೀಗೆ ಒಟ್ಟು ಮೂರು ಸ್ಥಳಗಳು ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಲಭ್ಯವಾಗಲಿವೆ. ಮೂಲ್ಕಿ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು 100 ಎಕರೆ ಸರ್ಕಾರಿ ಭೂಮಿ ಇದ್ದು, ಇದನ್ನು ಕೂಡ ಬಳಸಿಕೊಳ್ಳಬಹುದು. ಸದ್ಯದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಕೇಂದ್ರ ಕಾನೂನು ಸಚಿವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯವಾಗಿ ಹೈಕೋರ್ಟ್ ಪೀಠ ರಚನೆಯಾದರೆ, ವಾಣಿಜ್ಯೋದ್ಯಮ ಸಂಸ್ಥೆಗಳಿಗೂ ಅನುಕೂಲ ಎಂದು ವಕೀಲ ಎಂ.ಪಿ. ನೊರೋನ್ಹ ಹೇಳಿದರು.
ಕೆಸಿಸಿಐ ಅಧ್ಯಕ್ಷ ಆನಂದ ಪೈ ಮಾತನಾಡಿ, ಸಂಸ್ಥೆಯ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಕೆಸಿಸಿಐ ಪದಾಧಿಕಾರಿಗಳು ಇದ್ದರು.
‘ತಗ್ಗುವ ಆರ್ಥಿಕ ಹೊರೆ’
‘ದಕ್ಷಿಣ ಕನ್ನಡ ಉಡುಪಿ ಚಿಕ್ಕಮಗಳೂರು ಕೊಡಗು ಜಿಲ್ಲೆಗಳ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟ್‌ನಲ್ಲಿವೆ. ಬೆಂಗಳೂರು– ಮಂಗಳೂರು ನಡುವೆ ಅಲೆದಾಟ ಖರ್ಚು –ವೆಚ್ಚಗಳು ಸಾಮಾನ್ಯ ವರ್ಗದವರಿಗೆ ಹೊರೆಯಾಗುತ್ತಿದೆ. ಸ್ಥಳೀಯವಾಗಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಆರ್ಥಿಕ ಹೊರೆ ತಪ್ಪಿಸಬಹುದು’ ಎಂದು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.