ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಡಿ ಕಾರ್ಮಿಕರ ಕಲ್ಯಾಣಕ್ಕೆ ಆಯೋಗ ರಚಿಸಿ: ಮೊಯಿಲಿ

ಬೀಡಿ ಕಾರ್ಮಿಕರ ಸಮಾವೇಶ * ಬೀಡಿಗೆ ಶೇ 28ರಷ್ಟು ಜಿಎಸ್‌ಟಿ ರದ್ದುಪಡಿಸಲು ಒತ್ತಾಯ
Last Updated 24 ಜುಲೈ 2022, 12:47 IST
ಅಕ್ಷರ ಗಾತ್ರ

ಮಂಗಳೂರು: ‘ಬೀಡಿ ಕಟ್ಟುವವರ ಬವಣೆ ಪಡುವುದನ್ನು ತಪ್ಪಿಸಬೇಕಿದೆ. ಅವರ ಆರ್ಥಿಕ ಸ್ಥಿತಿ, ಆರೋಗ್ಯ ಸಮಸ್ಯೆ, ಕೆಲಸ ಮಾಡುವ ಪರಿಸರದ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಪರಿಹಾರ ಕ್ರಮಗಳನ್ನು ರೂಪಿಸಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರತ್ಯೇಕ ಆಯೋಗ ರಚಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಂ.ವೀರಪ್ಪ ಮೊಯಿಲಿ ಸಲಹೆ ನೀಡಿದರು.

ಎಚ್‌ಎಂಎಸ್‌ ಸಂಯೋಜಿತ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್‌ ಯೂನಿಯನ್‌ ಹಾಗೂ ಸೌತ್‌ ಕೆನರಾ– ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್‌ ಯೂನಿಯನ್‌ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಬೀಡಿ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಬೀಡಿ ಕಾರ್ಮಿಕರಲ್ಲಿ ಶೇ 92.5 ರಷ್ಟು ಮಂದಿ ಶ್ವಾಸಕೋಶ ಹಾಗೂ ಗಂಟಲಿನ ಸಮಸ್ಯೆಯನ್ನು ಶೇ 99.5 ಮಂದಿ ಕಾಲುನೋವು ಹಾಗೂ ಗಮಟುನೊವು ಹೊಂದಿರುತ್ತಾರೆ. ಅವರಿಗೆ ಕ್ಯಾನ್ಸರ್‌ ತಗಲುವ ಅಪಾಯ ಜಾಸ್ತಿ. ಅವರ ದುಡಿಮೆಯ ಶೇ 28ರಷ್ಟು ಪಾಲು ಚಿಕಿತ್ಸೆಗೆ ವ್ಯಯವಾಗುತ್ತಿದೆ ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ಈ ಬಗ್ಗೆ ಇನ್ನಷ್ಟು ವೈಜ್ಞಾನಿಕವಾದ ಅಧ್ಯಯನದ ಅಗತ್ಯವಿದೆ. ಬೀಡಿ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಬೀಡಿಗೆ ಶೇ 28ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುತ್ತಿದೆ. ಬೀಡಿಯನ್ನು ಸಿಗರೇಟಿಗೆ ಹೋಲಿಸಬಾರದು. ಕೋಟಿಗಟ್ಟಲೆ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಬೀಡಿ ಗುಡಿಕೈಗಾರಿಕೆಯನ್ನು ಸಿಗರೇಟ್‌ ಉದ್ದಿಮೆ ಜೊತೆ ಹೋಲಿಸಬಾರದು. ಬೀಡಿ ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಇದರ ಮೇಲಿ ಜಿಎಸ್‌ಟಿ ರದ್ದುಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಬೆಳಿಗ್ಗೆಯಿಂದ ರಾತ್ರಿ ವರೆಗೆ ಬೀಡಿ ಕಟ್ಟಿದರೂ ಸಿಗುವ ಹಣ ತೀರಾ ಕಡಿಮೆ. ಸಾವಿರ ಬೀಡಿಗೆ ಕೇವಲ ₹ 210 ಸಿಗುತ್ತದೆ. ಈ ಬಗ್ಗೆ ಪರಿಣತಿ ಇರುವವರಿಂದ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿಸಿ ಅವರಿಗೆ ಸೂಕ್ತ ಕನಿಷ್ಠ ವೇತನ ನಿಗದಿಪಡಿಸಬೇಕು. ಎಷ್ಟೋ ಬೀಡಿ ಕಾರ್ಮಿಕರಿಗೆ ಸ್ವಂತ ಮನೆಯೂ ಇಲ್ಲ. ಅವರಿಗೆ ಸೂರು ಕಟ್ಟಿಕೊಡುವ ಕೆಲಸ ಆಗಬೇಕು. ಬೀಡಿ ಕಟ್ಟುವುದಕ್ಕೆ ಮನೆಯಲ್ಲಿ ಪ್ರತ್ಯೇಕ ಕೊಠಡಿ ಒದಗಿಸಬೇಕು’ ಎಂದರು.

ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌, ‘ದೇಶದ ಆರ್ಥಿಕತೆಗೆ ಬೀಡಿ ಕಾರ್ಮಿಕರಂತಹ ಕಾಣದ ಕೈಗಳ ಕೊಡುಗೆಯೇ ಜಾಸ್ತಿ. ಕರಾವಳಿ ಜಿಲ್ಲೆಗಳಲ್ಲಿ ಬೀಡಿ ಕಟ್ಟಿದ ದುಡ್ಡಿನಲ್ಲೇ ಮಕ್ಕಳನ್ನು ಸುಸ್ಥಿತಿಗೆ ತರುವ ಮೂಲಕ ಜಿಲ್ಲೆಯ ಆರ್ಥಿಕತೆಗೂ ದೊಡ್ಡ ಕೊಡುಗೆ ನೀಡಿದ್ದು ಬೀಡಿ ಕಟ್ಟುವ ತಾಯಂದಿರು. ಅವರ ಅಭಿವೃದ್ಧಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು’ ಎಂದು ಸಲಹೆ ನೀಡಿದರು.

ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ ಸದಾಶಿವ, ‘ಆತ್ಮನಿರ್ಭರ ಭಾರತದ ಬಗ್ಗೆ ಚರ್ಚೆ ಆಗುತ್ತಿದೆ. ಕರಾವಳಿಯ ಜಿಲ್ಲೆಯ ಮಹಿಳೆಯರು ಯಾರ ಹಂಗಿಗೂ ಬೀಳದೇ ಬೀಡಿ ಕಟ್ಟುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಆರ್ಥಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸರ್ಕಾರ ಮಾಡಲಾಗದ ಸಾಧನೆಯನ್ನು ಇಲ್ಲಿನ ಮಹಿಳೆಯರು ಮಾಡಿದ್ದಾರೆ’ ಎಂದರು.

‘ಜಿಎಸ್‌ಟಿ ಜಾರಿಯಾದ ಬಳಿಕ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೆಸ್‌ ರೂಪದಲ್ಲಿ ಹಣ ಸಂದಾಯವಾಗುತ್ತಿಲ್ಲ. ಇನ್ನೊಂದೆಡೆ ಕೇಂದ್ರವೂ ಜಿಎಸ್‌ಟಿ ಪಾಲನ್ನೂ ರಾಜ್ಯಗಳಿಗೆ ಸರಿಯಾಗಿ ಹಂಚುತ್ತಿಲ್ಲ. ಇದರಿಂದ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು ಸೊರಗುವಂತಾಗಿದೆ’ ಎಂದರು.

ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್‌ ಯೂನಿಯನ್‌ ಅಧ್ಯಕ್ಷ ಮಹಮ್ಮದ್ ರಫಿ ಸಂಪಾದಿಸಿರುವ ‘ಬೀಡಿ ಬದುಕು’ ಕೃತಿಯನ್ನು ಶಾಸಕ ವೇದವ್ಯಾಸ ಕಾಮತ್‌ ಬಿಡುಗಡೆ ಮಾಡಿದರು. ಬೀಡಿ ಗುತ್ತಿಗೆದಾರ ಕಲ್ಲಡ್ಕದ ಯಾಸಿನ್‌ ಅವರನ್ನು ಸನ್ಮಾನಿಸಲಾಯಿತು. ಎಚ್‌ಎಂಎಸ್‌ನ ರಾಜ್ಯ ಘಟಕದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಬೀಡಿ ಉದ್ಯಮಿ ಕಾಳಿದಾಸ ಎಂ, ಸಂಘಟನಾ ಸಮಿತಿಯ ಅಧ್ಯಕ್ಷ ಹರೀಶ್‌ ಕೆ.ಎಸ್, ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ, ಖಜಾಂಚಿ ಇಸ್ಮಾಯಿಲ್‌ ಡಿ.ಎಸ್‌, ಮುಖಂಡ ಭಾಸ್ಕರ ಮೊಯಿಲಿ ಇದ್ದರು.

‘ಜೀವನ್ ಪ್ರಮಾಣ್‌ ಮನೆಯಲ್ಲೇ ನವೀಕರಿಸಿ’

‘ಬೀಡಿ ಕಾರ್ಮಿಕರು ಪಿಂಚಣಿ ಪಡೆಯಲು ಜೀವನ್‌ ಪ್ರಮಾಣ್‌ ಪ್ರಮಾಣಪತ್ರವನ್ನು ಪ್ರತಿವರ್ಷವೂ ನವೀಕರಿಸಬೇಕು. ಇಲ್ಲದಿದ್ದರೆ ಪಿಂಚಣಿ ಸ್ಥಗಿತಗೊಳ್ಳುವ ಅಪಾಯ ಇದೆ. ಸ್ಮಾರ್ಟ್‌ ಪೋನ್‌ ಇರುವವರು ಇದಕ್ಕೆ ಸಂಬಂಧಿಸಿದ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡು ಈ ಕಾರ್ಯವನ್ನು ಮನೆಯಲ್ಲೇ ಮಾಡಬಹುದು. ಅಂಚೆ ಇಲಾಖೆ ಸಿಬ್ಬಂದಿಯೂ ಇದಕ್ಕೆ ನೆರವಾಗುತ್ತಾರೆ. ಆದರೆ ಈ ಸೇವೆಗೆ ₹ 70 ಶುಲ್ಕ ವಿಧಿಸುತ್ತಾರೆ’ ಎಂದು ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಶ್ರೀಹರ್ಷ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT