ಮಂಗಳೂರು: ‘ಹಿಂದೂ ಧರ್ಮವೊಂದೇ ಸನಾತನ ಧರ್ಮ ಎಂಬುದನ್ನು ಒಪ್ಪಲಾಗದು. ಮುಸ್ಲಿಂ, ಕ್ರೈಸ್ತ ಧರ್ಮಗಳು ಹೊರಗಿನಿಂದ ಬಂದ ಧರ್ಮಗಳು ಎಂದು ವಾದಿಸಬಹುದು. ಆದರೆ ಜೈನ, ಬೌದ್ಧ, ಸಿಖ್ ಧರ್ಮಗಳು ಸನಾತನ ಧರ್ಮಗಳು ಅಲ್ಲವೇ’ ಎಂದು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಶಂಸುಲ್ ಇಸ್ಲಾಂ ಪ್ರಶ್ನಿಸಿದರು.
ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ‘ಮೊದಲ ಸ್ವಾತಂತ್ರ್ಯ ಸಂಗ್ರಾಮ, 1857– ಜಂಟಿ ಬಲಿದಾನಗಳು, ಜಂಟಿ ವಾರಸುದಾರಿಕೆ’ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
‘ನಾವು ಸನಾತನ ಧರ್ಮದ ಬಗ್ಗೆ ಮಾತನಾಡುತ್ತಿದ್ದೇವೆ. ಮಹಾತ್ಮ ಗಾಂಧಿ ಬಹುದೊಡ್ಡ ಸನಾತನ ಧರ್ಮಿ. ಅವರನ್ನು ಕೊಂದವರು ಪಾಕಿಸ್ತಾನಿಗಳೇ? ಐಎಸ್‌ಎಸ್ ಉಗ್ರರೇ? ನಾಥೂರಾಮ್ ಗೋಡ್ಸೆ ಶ್ರೀಕೃಷ್ಣನ ಅವತಾರದಲ್ಲಿ ಬಂದು ಗಾಂಧೀಜಿಯನ್ನು ಹತ್ಯೆ ಮಾಡಿದ್ದಾರೆ ಎಂದು ಹಿಂದುತ್ವವಾದಿಗಳೇ ಬರೆದುಕೊಂಡಿದ್ದಾರೆ. ಇದು ಯಾವ ರಾಷ್ಟ್ರವಾದ’ ಎಂದರು.
ಶಂಸುಲ್ ಅವರು ಕಾಲೇಜಿನ ಆವರಣಕ್ಕೆ ಬರುವುದನ್ನು ವಿರೋಧಿಸಿದ ಎಬಿವಿಪಿ ಕಾರ್ಯಕರ್ತರು, ‘ಶಂಸುಲ್ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದರು. ಕಾಲೇಜಿನ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಪ್ರತಿಭಟನೆಗೆ ಹೊರಗಿನಿಂದ ಬಂದಿದ್ದ 10ಕ್ಕೂ ಹೆಚ್ಚು ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಸಭಾಭವನದಲ್ಲಿ ಉಪನ್ಯಾಸ ಕಾರ್ಯಕ್ರಮ ತಡೆಯಿಲ್ಲದೆ ನಡೆಯಿತು. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರೊ. ಕೇಶವನ್ ಅವರಿಗೆ ಮುತ್ತಿಗೆ: ‘ಶಂಸುಲ್ ಇಸ್ಲಾಂ ಅವರನ್ನು ಸಭಾಭವನಕ್ಕೆ ಬರದಂತೆ ತಡೆಯಬೇಕೆಂದು ನಿಂತಿದ್ದ ಎಬಿವಿಪಿಯವರು, ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಕೇಶವನ್ ವೇಲುತಾಟ್ ಅವರು ಬಂದಾಗ, ಅವರೇ ಶಂಸುಲ್ ಎಂದು ತಿಳಿದು ಮುತ್ತಿಗೆ ಹಾಕಿದರು. ನಂತರ ಪೊಲೀಸರ ಸಹಕಾರದಲ್ಲಿ ಅವರು ಸಭಾಭವನದ ಒಳಕ್ಕೆ ಬಂದರು. ಇದಕ್ಕೂ ಮುನ್ನವೇ ಶಂಸುಲ್ ಅವರು ಸಭಾಭವನಕ್ಕೆ ತೆರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.