ಬದಿಯಡ್ಕ: ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಅನಾವರಣಕ್ಕೆ ಮತ್ತು ಬದುಕಿನ ಕೌಶಲ ಅಭಿವೃದ್ಧಿಗೊಳಿಸಲು ನಾಟಕವು ನೆರವಾಗುತ್ತದೆ. ಮುಕ್ತ ಅಭಿವ್ಯಕ್ತಿಗೂ ಪಡಿಸಲು ಸಹಕರಿಸುತ್ತದೆ ಎಂದು ರಂಗಸಂಸ್ಕೃತಿಯ ನಿರ್ದೇಶಕ ಕಾಸರಗೋಡು ಚಿನ್ನಾ ಹೇಳಿದರು.
ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಸಹಯೋಗದೊಂದಿಗೆ ಶೇಣಿಯ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಿದ ರಂಗ ಸಂಸ್ಕೃತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
‘ರಂಗ ಚಟುವಟಿ ಭರವಸೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಬಲ್ಲುದು. ಸಂವಹನ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಅದರಲ್ಲಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಂಗಚಿನ್ನಾರಿ ನಿರ್ದೇಶಕ ಸತೀಶ್ಚಂದ್ರ ಭಂಡಾರಿ, ‘ನಾಟಕವು ವ್ಯಕ್ತಿತ್ವದ ವಿಕಾಸಕ್ಕೆ ಕಾರಣವಾಗುವುದಲ್ಲದೇ, ವಿಶೇಷ ಅಸ್ತಿತ್ವವನ್ನು ದಯಪಾಲಿಸುತ್ತದೆ’ ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಶಾಸ್ತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯುವ ರಂಗ ನಿರ್ದೇಶಕ ಉದಯ ಸಾರಂಗ್,ಶಾಲೆಯ ವ್ಯವಸ್ಥಾಪಕಿ ಶಾರದಾ ವೈ ಮತ್ತು ಎಣ್ಮಕಜೆ ವಾರ್ಡಿನ ಸದಸ್ಯ ರಾಧಾಕೃಷ್ಣ ನಾಯಕ್ ಜೆ.ಎಸ್. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಕ ಸುಭಾಷ್ ಪಟ್ಟಾಜೆ ಸ್ವಾಗತಿಸಿದರು. ವಿದ್ಯಾರ್ಥಿ ಶತಾ ಆಳ್ವ ವಂದಿಸಿದರು. 54 ವಿದ್ಯಾರ್ಥಿಗಳು ಆಶುರಚನೆ, ಮೂಕಾಭಿನಯ ಮತ್ತು ಸ್ವರಚಿತ ಪ್ರಹಸನದಲ್ಲಿ ಅಭಿನಯಿಸಿದರು.