ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳುತ್ತಾರೆ ಎಂಬುದು ಸುಳ್ಳು: ಡಿ.ಕೆ.ಶಿವಕುಮಾರ್

Published 24 ಜನವರಿ 2024, 23:03 IST
Last Updated 24 ಜನವರಿ 2024, 23:03 IST
ಅಕ್ಷರ ಗಾತ್ರ

ಮಂಗಳೂರು: ‘ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳುತ್ತಾರೆ ಎಂಬುದು ಸುಳ್ಳು ಸುದ್ದಿ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಮೇಲೆ ಅನುಮಾನ ಮೂಡಲಿ ಎಂದು ಬಿಜೆಪಿಯವರು ಸಂಚು ರೂಪಿಸಿದ್ದಾರೆ. ಆದರೆ ಇದು ಫಲಿಸದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಬಿಜೆಪಿಯೇ ಆಂತರಿಕ ಸಮಸ್ಯೆಗಳು ಬಹಳಷ್ಟಿವೆ. ಶೆಟ್ಟರ್ ಅವರನ್ನು ಸುಮ್ಮನೆ ಕರೆಯುತ್ತಿದ್ದಾರೆ. ಬಿಜೆಪಿಗೆ ಮರಳಲು ಜಗದೀಶ್ ಶೆಟ್ಟರ್ ಏನು ದಡ್ಡರಾ. ಶೆಟ್ಟರ್ ಅವರಿಗೆ ಆಗಿದ್ದ ಅವಮಾನ, ನೋವು ಎಲ್ಲ ಯೋಚನೆ ಮಾಡಿ ಕಾಂಗ್ರೆಸ್ ಸೇರಿದ್ದಾರೆ.  ನಮಗೆ ದೊಡ್ಡ ಸಹಾಯ ಮಾಡಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ ಶೆಟ್ಟರ್ ಸೋತಿರಬಹುದು. ಕಾಂಗ್ರೆಸ್ ಪಕ್ಷವೂ ವಿಧಾನ ಪರಿಷತ್ ಸದಸ್ಯರನ್ನಾಗಿ ಅವರಿಗೆ ಅವಕಾಶ ಮಾಡಿ ಕೊಟ್ಟಿದೆ’ ಎಂದರು. 

‘ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶ ಹಿಂಪಡೆಯುವಂತೆ ಎಸ್‌ವೈಎಸ್‌ ವಾರ್ಷಿಕ ಸಮ್ಮೇಳನದಲ್ಲಿ ಹಕ್ಕೊತ್ತಾಯ ಮಂಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ’ಈ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾವು ಸಂವಿಧಾನ ಬದ್ಧವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಧರ್ಮಗಳನ್ನೂ ರಕ್ಷಣೆ ಮಾಡುತ್ತೇವೆ’ ಎಂದು ಹೇಳಿದರು.

‘ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶವನ್ನು ಮಂಗಳೂರಿನಲ್ಲಿ ಮುಂದಿನ ತಿಂಗಳು ಆಯೋಜಿಸಲಿದ್ದೇವೆ.  ಈ ಕುರಿತು ಪೂರ್ವಭಾವಿ ಸಭೆ ಮತ್ತು ತಯಾರಿಗಾಗಿ ಇಲ್ಲಿಗೆ ಬಂದಿದ್ದೇನೆ. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ  ದೆಹಲಿಯ ನಾಯಕ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕಾಂಗ್ರೆಸ್ ಸಮಿತಿಯವರು ಈ ಸಮಾವೇಶವನ್ನು  ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಳೆ ಸಮಾವೇಶದ ದಿನಾಂಕ ನಿಗದಿಪಡಿಸುತ್ತೇನೆ’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT