ಮಂಗಳವಾರ, ಜೂನ್ 15, 2021
26 °C
ಎ.ಜೆ. ಆಸ್ಪತ್ರೆಯ ವೈದ್ಯರ ತಂಡದ ಸಾಧನೆ

ಕನಿಷ್ಠ ಗಾಯದ ಲಿವರ್ ಕ್ಯಾನ್ಸರ್ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಎ.ಜೆ. ಆಸ್ಪತ್ರೆಯ ವೈದ್ಯರ ತಂಡ, ವಿಕಿರಣಶೀಲ (ರೆಡಿಯೊ ಆಕ್ಟೀವ್) ಔಷಧಿಯನ್ನು ಬಳಸಿಕೊಂಡು ಸುಧಾರಿತ ಕನಿಷ್ಠ ಗಾಯದ ಚಿಕಿತ್ಸೆಯನ್ನು ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿಯಾಗಿ ನೀಡಿದೆ. ಈ ಚಿಕಿತ್ಸೆಯನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನೀಡಲಾಗಿದೆ.

ಎ.ಜೆ. ಆಸ್ಪತ್ರೆಯ ಇಂಟರ್ ವೆನ್ಷನಲ್‌ ರೆಡಿಯಾಲಜಿಸ್ಟ್ ಡಾ. ಅಶ್ವಿನ್ ಪೋಲ್ನಾಯಾ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ಪರಿಣತ ಡಾ. ಸುಜಿತ್ ರೈ ನೇತೃತ್ವದ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ತಂಡ ಈ ಚಿಕಿತ್ಸೆ ನೀಡಿದೆ. ನ್ಯೂಕ್ಲಿಯರ್ ಮೆಡಿಸಿನ್ ಪರಿಣತ ಡಾ. ರಾಧಮೋಹನ್ ಮತ್ತು ಜಠರ ತಜ್ಞ ಡಾ.ರಾಘವೇಂದ್ರ ಪ್ರಸಾದ ಅವರೂ ಈ ತಂಡದಲ್ಲಿದ್ದರು. ಅಗತ್ಯವಾದ ವಿಕಿರಣಶೀಲ ಔಷಧಿಯನ್ನು ಸಿಂಗಪುರದಿಂದ ಆಮದು ಮಾಡಿಕೊಳ್ಳಲಾಯಿತು.

53 ವರ್ಷದ ಪುರುಷನಿಗೆ ಶಸ್ತ್ರಚಿಕಿತ್ಸೆ ಮಾಡಲಾಗದ ಪಿತ್ತಜನಕಾಂಗದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅವರಿಗೆ ವೈ–90 ಮೈಕ್ರೋಸ್ಪಿಯರ್ ಥೆರಪಿ’ ಟೇರ್‌ (ಟ್ರಾನ್ಸ್‌ರ್ಟೇರಿಯಲ್‌ ರೆಡಿಯೊಎಂಬೋಲೈಸೆಶನ್‌) ಚಿಕಿತ್ಸೆ ನೀಡಲು ನಿರ್ಧರಿಸಲಾಯಿತು. ಇದು ಸುಧಾರಿತ ಕನಿಷ್ಠ ಗಾಯದ ಕ್ಯಾನ್ಸರ್ ಚಿಕಿತ್ಸೆಯಾಗಿದ್ದು, ತೊಡೆಸಂದಿಯಲ್ಲಿ ಸೂಕ್ಷ್ಮ ರಂಧ್ರದಲ್ಲಿ ಅಳವಡಿಸಿದ ಕ್ಯಾತೆಟರ್‌ ಅನ್ನು ಅಪಧಮನಿ ಮೂಲಕ ಹಾಯಿಸಿ, ಸಣ್ಣ ಮಣಿಗಳ ಅಥವಾ ವಿಕಿರಣಶೀಲ ಘಟಕ (ವೈ-90)ಯನ್ನು ಲಿವರ್ ಕ್ಯಾನ್ಸರ್ ಗೆಡ್ಡೆಗೆ ಚುಚ್ಚಲಾಗುತ್ತದೆ. ಈ ರೀತಿ ಚುಚ್ಚಲಾದ ವಿಕಿರಣಶೀಲ ಘಟಕವು ಗೆಡ್ಡೆಯ ಅಂಗಾಂಶದೊಳಗೆ ಬಿಡಲಾಗುತ್ತದೆ.

ಮೈಕ್ರೊಸ್ಪಿಯರ್‌ಗಳು ಹೆಚ್ಚಿನ ಪ್ರಮಾಣದ ವಿಕಿರಣವನ್ನು ನೇರವಾಗಿ ಗೆಡ್ದೆಯ ಕೋಶಗಳಿಗೆ ಹೊರಸೂಸುವ ಮೂಲಕ ಅವುಗಳನ್ನು ನಾಶ ಮಾಡುತ್ತವೆ. ಈ ಕಾರ್ಯವಿಧಾನವು 40 ಪಟ್ಟು ಹೆಚ್ಚಿನ ವಿಕಿರಣವನ್ನು ಲಿವರ್‌ನ ಗೆಡ್ಡೆಗಳಿಗೆ ತಲುಪಿಸಲು ಅನುವು ಮಾಡಿಕೊಡುತ್ತದೆ. ಆದರೆ, ಲಿವರ್‌ನ ಆರೋಗ್ಯಕರ ಅಂಗಾಂಶವನ್ನು ವಿಕಿರಣದ ತೊಂದರೆಯಿಂದ ತಪ್ಪಿಸುತ್ತದೆ. 2 ವಾರಗಳ ಅವಧಿಯಲ್ಲಿ ವಿಕಿರಣ ಹೊರಸೂಸುವಿಕೆಯು ಕಡಿಮೆಯಾದರೂ, ಆಂತರಿಕ ವಿಕಿರಣ ಪರಿಣಾಮವು ಗೆಡ್ದೆಯ ಮೇಲಿನ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ.

ಇದರಿಂದ 6-12 ವಾರಗಳ ಅವಧಿಯಲ್ಲಿ ಗೆಡ್ಡೆ ನಿಷ್ಕ್ರಿಯವಾಗವುದು. ರೋಗಿಗಳು ಈ ಚಿಕಿತ್ಸೆಯನ್ನು ಸಹಿಸಿಕೊಳ್ಳುತ್ತಾರೆ. ಚಿಕಿತ್ಸೆ ಪಡೆದ ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಗುಣಮಟ್ಟದ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಮಾಹಿತಿಗಾಗಿ ಡಾ. ಅಶ್ವಿನ್ ಪೋಲ್ನಾಯ (99004 58946) ಅವರನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಕೆ. ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು