ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ ಠೇವಣಿ, ಸಾಲ ನೀಡುವ ಅಭಿಯಾನ: ರಾಜೇಂದ್ರ ಕುಮಾರ್

ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಕೊಡುಗೆ: ರಾಜೇಂದ್ರಕುಮಾರ್
Last Updated 26 ಸೆಪ್ಟೆಂಬರ್ 2022, 12:02 IST
ಅಕ್ಷರ ಗಾತ್ರ

ಮಂಗಳೂರು: ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ವಿಶೇಷ ಠೇವಣಿ ಹಾಗೂ ಸಾಲ ನೀಡುವ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಒಂದು ವರ್ಷದ ಮೇಲ್ಪಟ್ಟು 2 ವರ್ಷದ ಠೇವಣಿಗಳಿಗೆ ಶೇ 6.50 ಬಡ್ಡಿದರ ಹಾಗೂ 3 ವರ್ಷದಿಂದ 3 ವರ್ಷದವರೆಗಿನ ₹ 25 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗೆ ಶೇ 8 ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಸಾಂಸ್ಥಿಕ ಠೇವಣಿಗಳಿಗೆ ಶೇ 7.50 ಬಡ್ಡಿದರ ನೀಡಲಾಗುವುದು ಎಂದರು.

ಹಿರಿಯ ನಾಗರಿಕರು, ಸೈನಿಕರು ಹಾಗೂ ಮಹಿಳೆಯರು ಇಡುವ ಠೇವಣಿಗೆ ಹೆಚ್ಚುವರಿಯಾಗಿ ಶೇ 0.50 ಬಡ್ಡಿದರ ನೀಡಲಾಗುವುದು. ಹಿರಿಯ ನಾಗರಿಕರು ಇಡುವ ₹ 10 ಲಕ್ಷ ಮೇಲ್ಪಟ್ಟ ಠೇವಣಿಗಳಿಗೆ ಶೇ 0.25 ಹೆಚ್ಚುವರಿ ಬಡ್ಡಿ ನೀಡಲಾಗುವುದು. ಸಹಕಾರ ಸಂಘಗಳ ಮೂರು ವರ್ಷಗಳ ಅವಧಿಯ ಠೇವಣಿಗೆ ಶೇ 8 ಬಡ್ಡಿದರ ನೀಡಲಾಗುವುದು. ಇದು ವಿಶೇಷ ಠೇವಣಿ ಅಭಿಯಾನಕ್ಕೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದರು.

ಚಿನ್ನಾಭರಣ ಸಾಲಗಳಿಗೂ ಕಡಿಮೆ ಬಡ್ಡಿದರವನ್ನು ಬ್ಯಾಂಕ್ ನಿಗದಿಪಡಿಸಿದೆ. ಚಿನ್ನಾಭರಣದ ಒಟ್ಟು ಮೌಲ್ಯದ ಶೇ 90ರಷ್ಟು ಸಾಲವನ್ನು ಬ್ಯಾಂಕ್ ನೀಡುತ್ತಿದೆ. ತಿಂಗಳ ಬಡ್ಡಿ ಕೇವಲ ಶೇ 0.7 ಆಗಿದೆ. ಆಕರ್ಷಕ ಬಡ್ಡಿದರದಲ್ಲಿ ಗ್ರಾಹಕರಿಗೆ ಗೃಹಸಾಲವನ್ನು ನೀಡಲು ಬ್ಯಾಂಕ್ ಮುಂದಾಗಿದೆ. ವಾಸ್ತವ್ಯದ ಮನೆ ಸಾಲವಾಗಿ ₹ 25ಲಕ್ಷದವರೆಗೆ ಶೇ 9.50 ಬಡ್ಡಿದರದಲ್ಲಿ, ₹ 25 ಲಕ್ಷಕ್ಕಿಂತ ಮೇಲಿನ ಮೊತ್ತಕ್ಕೆ ಶೇ 8.95 ಬಡ್ಡಿದರ ನಿಗದಿಪಡಿಸಲಾಗಿದೆ. ಗರಿಷ್ಠ ₹ 75 ಲಕ್ಷದವರೆಗೂ ಗೃಹಸಾಲ ನೀಡಲಾಗುವುದು ಎಂದು ಹೇಳಿದರು.

ವಿಮಾ ಸೌಲಭ್ಯ: ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ ಬರುವ ಉಭಯ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬೆಳೆಸಾಲಗಾರ ಸದಸ್ಯರು ಪಡೆದಿರುವ ಸಾಲದ ಮೇಲೆ ವಿಮಾ ಸೌಲಭ್ಯವನ್ನು ಬ್ಯಾಂಕ್ ನೀಡಲು ಮುಂದಾಗಿದೆ. ರೈತರು ಪಡೆದಿರುವ ₹ 3 ಲಕ್ಷದವರೆಗಿನ ಅಲ್ಪಾವಧಿ ಸಾಲ ಮತ್ತು ₹ 10 ಲಕ್ಷದವರೆಗಿನ ಮಧ್ಯಮಾವಧಿ ಸಾಲ ಪಡೆದುಕೊಂಡ ರೈತರು ಯಾವುದೇ ರೀತಿಯಲ್ಲಿ ಮೃತಪಟ್ಟರೆ ಸಾಲದ ಮೊತ್ತವನ್ನು ಸಂಪೂರ್ಣವಾಗಿ ವಿಮೆಯ ಮೂಲಕ ಭರಿಸಲಾಗುವುದು. ಇದರಿಂದ ಅವರ ಕುಟುಂಬಕ್ಕೆ ಯಾವುದೇ ಹೊರೆಯಾಗುವುದಿಲ್ಲ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜರಾಮ ಭಟ್ , ಭಾಸ್ಕರ್ ಎಸ್. ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ , ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ ಬಾಲ್ಯೋಟ್ಟು, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆ.ಹರಿಶ್ಚಂದ್ರ ಎಂ.ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಜೈರಾಜ್ ಬಿ ರೈ, ರಾಜೇಶ್ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಉಪ ನಿಬಂಧಕ ಲಕ್ಷ್ಮಿನಾರಾಯಣ ಇದ್ದರು.

ಮುಂದಿನ ಯೋಜನೆಗಳು

* ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ

* ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ ಶೀಘ್ರ ಆರಂಭ

* ಮಂಗಳೂರು ಮಾದರಿಯಲ್ಲಿ ಉಡುಪಿಗೆ ಮೊಬೈಲ್ ಬ್ಯಾಂಕಿಂಗ್

* 15 ಹೊಸ ಶಾಖೆ ತೆರೆಯುವ ಯೋಜನೆ

* ಸಿದ್ದಾಪುರ ಶಾಖೆಗೆ ಹೊಸ ಕಟ್ಟಡ ನಿರ್ಮಾಣ

* ಬ್ಯಾಂಕ್‌ನ ಪ್ರತಿ ತಾಲ್ಲೂಕು ಶಾಖೆಗೆ ಎಟಿಎಂ ಅಳವಡಿಕೆ

* ವಿದ್ಯುತ್, ನೀರಿನ ಬಿಲ್ ಪಾವತಿಗೆ ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್

* ಬೆಳ್ತಂಗಡಿ ಶಾಖೆಯಲ್ಲಿ ಎಟಿಎಂ ಹಾಗೂ ಲಿಫ್ಟ್ ಅಳವಡಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT