ಗುರುವಾರ , ಆಗಸ್ಟ್ 11, 2022
23 °C
ವಿಶೇಷ ಶಾಲಾ ಶಿಕ್ಷಕರಿಂದ ನಾಳೆ ಸಾಂಕೇತಿಕ ಮುಷ್ಕರ

ಇನ್ನೂ ಏರಿಕೆಯಾಗದ ಗೌರವಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದ ಸರ್ಕಾರದ ಶಿಶು ಕೇಂದ್ರಿಕೃತ ಸಹಾಯಧನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ 141 ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ 2014 ರಿಂದ ಇದುವರೆಗೆ ಗೌರವಧನ ಏರಿಕೆಯಾಗಿಲ್ಲ. ಸರ್ಕಾರಕ್ಕೆ ಸಲ್ಲಿಸಿದ ಮನವಿಗಳಿಗೂ ಬೆಲೆ ಇಲ್ಲದಂತಾಗಿದೆ. ಇದೀಗ ವಿಶೇಷ ಶಾಲೆಯ ಶಿಕ್ಷಕರು ಡಿ.2 ರಂದು ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

1982 ರ ಅನುದಾನ ನೀತಿಯ ಪ್ರಕಾರ ರಾಜ್ಯದ 32 ವಿಶೇಷ ಮಕ್ಕಳ ಶಾಲೆಗಳಿಗೆ ಮಾತ್ರ ಅನುದಾನ ದೊರೆಯುತ್ತಿತ್ತು. ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮ, 2011–12ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ವಿಶೇಷ ಶಾಲೆಗಳಿಗೆ ಅನುದಾನ ಮಂಜೂರು ಮಾಡಲು ಆದೇಶ ಹೊರಡಿಸಿದರು. ಈ ಆದೇಶದಂತೆ ಶಿಶು ಕೇಂದ್ರಿಕೃತ ಸಹಾಯಧನ ಯೋಜನೆ ಜಾರಿಗೆ ಬಂತು. ಶಾಲೆಯಲ್ಲಿರುವ ವಿಶೇಷ ಮಕ್ಕಳ ಸಂಖ್ಯೆಯ ಆಧಾರದಲ್ಲಿ ಅನುದಾನ ಒದಗಿಸಲು ನಿರ್ಧರಿಸಲಾಗಿತ್ತು. ಆ ಸಂದರ್ಭದಲ್ಲಿ ವಿಶೇಷ ಶಾಲೆ ಶಿಕ್ಷಕರಿಗೆ ₹6,500 ಹಾಗೂ ಇತರ ಸಿಬ್ಬಂದಿಗೆ ₹5 ಸಾವಿರದಿಂದ ₹4 ಸಾವಿರ ಗೌರವಧನ ದೊರೆಯುತ್ತಿತ್ತು.

‘2013–14 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ವಿಶೇಷ ಶಿಕ್ಷಕರ ಗೌರವಧನವನ್ನು ₹13,500 ಹಾಗೂ ಇತರ ಸಿಬ್ಬಂದಿ ಗೌರವಧನವನ್ನು ₹8 ಸಾವಿರದಿಂದ ₹9 ಸಾವಿರಕ್ಕೆ ಏರಿಕೆ ಮಾಡಿದರು. ಆದರೆ, 2014 ರಿಂದ ಇದುವರೆಗೂ ವಿಶೇಷ ಶಿಕ್ಷಕರಿಗೆ ಹಾಗೂ ಸಿಬ್ಬಂದಿ ಏರಿಕೆಯಾದ ಗೌರವಧನ ಸಿಕ್ಕಿಲ್ಲ’ ಎಂದು ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ ಸಂಘದ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ ಹೇಳಿದ್ದಾರೆ.

‘ಸದ್ಯದ ಸಚಿವೆ ಶಶಿಕಲಾ ಜೊಲ್ಲೆ, ಹಿಂದಿನ ಇಬ್ಬರು ಸಚಿವರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ, ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅಲ್ಲದೇ 25 ವರ್ಷ ಮೀರಿದ ಅಂಗವಿಕಲರಿಗೆ ರಾಜ್ಯ ಸರ್ಕಾರದ ಇಲಾಖೆಯಿಂದ ಯಾವುದೇ ತರಬೇತಿ, ಪುನರ್ವಸತಿ ಕಾರ್ಯಕ್ರಮ ಇಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಳೆದ ವರ್ಷ ಅಂಗವಿಕಲರ ದಿನಾಚರಣೆ ಬಹಿಷ್ಕರಿಸುವುದಾಗಿ ಸರ್ಕಾರಕ್ಕೆ ಹಾಗೂ ಇಲಾಖೆಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಹಿಂದಿನ ನಿರ್ದೇಶಕಿ ಲೀಲಾವತಿ ಅವರು, ಈ ಬಗ್ಗೆ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿದೆ ಎಂದು ಲಿಖಿತ ಪತ್ರ ನೀಡಿದ್ದರು. ಅದಕ್ಕೆ ಮನ್ನಣೆ ನೀಡಿ, ಕಳೆದ ವರ್ಷ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು. ಈ ವರ್ಷವಾದರೂ ಗೌರವಧನ ದ್ವಿಗುಣಗೊಳಿಸುವಂತೆ ಮನವಿ ಮಾಡಿದ್ದೆವು. ಅದಕ್ಕೆ ಇದುವರೆಗೆ ಸ್ಪಂದನೆ ದೊರೆತಿಲ್ಲ. ಹಾಗಾಗಿ ಹೋರಾಟ ಅನಿವಾರ್ಯ’ ಎಂದು ವಸಂತಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.