ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್‌ ತಯಾರಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ

ಮಂಗಳೂರಿನ ಶಮಂತ್‌ ಆಚಾರ್ಯ ಸಾಧನೆ
Last Updated 26 ಜುಲೈ 2020, 5:18 IST
ಅಕ್ಷರ ಗಾತ್ರ

ಮಂಗಳೂರು: ಕ್ಯಾಟರಿಂಗ್‌ ಕೆಲಸದಿಂದ ಸಂಪಾದಿಸಿದ ಹಣದಿಂದ ನಗರದ ವಿದ್ಯಾರ್ಥಿಯೊಬ್ಬ ಡ್ರೋನ್‌ ತಯಾರಿಸಿದ್ದಾರೆ. ರಥಬೀದಿಯ ಎಸ್‌.ಜೆ. ಶಮಂತ್‌ ಆಚಾರ್ಯ ಕಿರಿಯ ವಯಸ್ಸಿನಲ್ಲಿಯೇ ಈ ಸಾಧನೆ ಮಾಡಿದ ವಿದ್ಯಾರ್ಥಿ.

ರಥಬೀದಿಯ ಜಗದೀಶ್‌ ಆಚಾರ್ಯ, ಶ್ಯಾಮಲಾ ಆಚಾರ್ಯ ದಂಪತಿ ಪುತ್ರ ಶಮಂತ್‌ ಆಚಾರ್ಯ, ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕ್ಯಾಟರಿಂಗ್‌ ಕೆಲಸದಿಂದ ಒಂದು ತಿಂಗಳಿನಲ್ಲಿ ಸುಮಾರು ₹8 ಸಾವಿರ ಸಂಪಾದಿಸಿದ್ದು, ಆ ಹಣದಲ್ಲಿ ಡ್ರೋನ್‌ ತಯಾರಿಕೆಗೆ ಬೇಕಾಗುವ ಕೆಲಉಪಕರಣಗಳನ್ನು ಆನ್‌ಲೈನ್‌ ಮೂಲಕ ತರಿಸಿಕೊಂಡರು. ಹಣದ ಕೊರತೆ ಬಂದಾಗ ಸ್ನೇಹಿತರು ಮತ್ತು ಕುಟುಂಬದವರು ಶಮಂತ್‌ ಪ್ರಯತ್ನಕ್ಕೆ ಸ್ಫೂರ್ತಿ ನೀಡುವ ಜತೆಗೆ ಆರ್ಥಿಕವಾಗಿಯೂ ಬೆಂಬಲ ನೀಡಿದರು.

ವೆಬ್‌ಸೈಟ್‌, ಯೂಟ್ಯೂಬ್‌ ಸಹಾಯದಿಂದ ಡ್ರೋನ್‌ ತಯಾರಿಸುವುದು ಹೇಗೆ ಎನ್ನುವುದನ್ನು ಕಲಿತ ಶಮಂತ್‌, ನಿರಂತರ ಪರಿಶ್ರಮದಿಂದ ಸದ್ಯ ಬೇಸಿಕ್‌ ಡ್ರೋನ್‌ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಡ್ರೋನ್‌ ಸುಮಾರು 1 ಕಿ.ಮೀ. ದೂರ ಹೋಗಬಲ್ಲದು. 60 ಅಡಿ ಎತ್ತರಕ್ಕೆ ಹಾರುತ್ತದೆ. 4 ಸಾವಿರ ಕೆ.ಡಬ್ಲ್ಯು. ಮೋಟರ್‌, ಎಫ್‌-450 ಫ್ರೇಂ ಹೊಂದಿದೆ.

ಶಮಂತ್‌ ಈಗಾಗಲೇ ಶಾಲಾ ಹಂತದಲ್ಲಿ ವಿಜ್ಞಾನ ಸ್ಪರ್ಧೆಗಳಲ್ಲಿ ಪ್ರದರ್ಶನ ನಡೆಸಿ ಪ್ರಶಸ್ತಿ ಪಡೆದಿದ್ದಾರೆ. ಬೆಸೆಂಟ್‌ ಕಾಲೇಜು, ಸುರತ್ಕಲ್‌ನ ಎನ್‌ಐಟಿಕೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯ ಮಟ್ಟದ ವಿಜ್ಞಾನ ಇನ್‌ಸ್ಪೈಯರ್‌ ಅವಾರ್ಡ್‌ ಸ್ಪರ್ಧೆಯಲ್ಲಿ ಭಾಗವಹಿಸಿ ₹ 10 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಕಳೆದ ವರ್ಷದ ನೆಹರೂ ಮೈದಾನದಲ್ಲಿ ಜರುಗಿದ್ದ ಚೌತಿ ಹಬ್ಬದ ಮೆರವಣಿಗೆ ದಿನ ಗಣೇಶನ ಮೂರ್ತಿಗೆ ಡ್ರೋನ್‌ ಮೂಲಕ ಪುಷ್ಪಾರ್ಚನೆ ಮಾಡಿಸಿ ಗಮನ ಸೆಳೆದಿದ್ದರು.

‘ಮದುವೆ ಸಮಾರಂಭದಲ್ಲಿ ಡ್ರೋನ್‌ ಚಿತ್ರೀಕರಣ ನೋಡುತ್ತಿದ್ದಾಗ ನಾನು ಕೂಡ ಇದೇ ರೀತಿ ಡ್ರೋನ್‌ ತಯಾರಿಸಬೇಕೆಂಬ ಆಸಕ್ತಿ ಬೆಳೆಯಿತು. ಕ್ಯಾಟರಿಂಗ್‌ ಕೆಲಸಕ್ಕೆ ತೆರಳಿ ಹಣ ಸಂಪಾದಿಸಿದೆ. ಸದ್ಯ ಬೇಸಿಕ್‌ ಡ್ರೋನ್‌ ತಯಾರಿಸಿದ್ದು, ಮುಂದಿನ ದಿನಗಳಲ್ಲಿ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇನೆ. ಕೃಷಿ, ಆರೋಗ್ಯ ಸೇವೆಯಲ್ಲಿಯೂ ಡ್ರೋನ್‌ ಬಳಕೆ ಕುರಿತು ಯೋಚಿಸುತ್ತಿದ್ದೇನೆ’ ಎಂದು ಶಮಂತ್‌ ಆಚಾರ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT