ಶನಿವಾರ, ಜುಲೈ 24, 2021
23 °C

ಶಿಕ್ಷಣದ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲ: ಯು.ಟಿ. ಖಾದರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇಲ್ಲದ ರಾಜ್ಯ ಸರ್ಕಾರ ಶಿಕ್ಷಣದ ವಿಷಯದಲ್ಲೂ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸಚಿವರು, ಶಿಕ್ಷಣ ಇಲಾಖೆ ಮಧ್ಯೆ ಸಮನ್ವಯ ಇಲ್ಲ. ಶಾಲಾ– ಕಾಲೇಜುಗಳ ಆರಂಭ ವಿಚಾರದಲ್ಲಿ ಗೊಂದಲಕಾರಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ. ಆನ್‌ಲೈನ್ ಶಿಕ್ಷಣದ ಕುರಿತು ದಿನಕ್ಕೊಂದು ಹೇಳಿಕೆ ನೀಡಿ, ವಿದ್ಯಾರ್ಥಿಗಳ ಪಾಲಕರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ’ ಎಂದರು.

ಜನಾಭಿಪ್ರಾಯಕ್ಕೆ ರಾಜ್ಯ ಸರ್ಕಾರ ಮನ್ನಣೆ ಕೊಡಬೇಕು. ಒಮ್ಮೆ ಪರೀಕ್ಷೆ ಇದೆ, ಇನ್ನೊಮ್ಮೆ ಪರೀಕ್ಷೆ ಇಲ್ಲ ಎಂದು ಹೇಳಿ ಗೊಂದಲ ಸೃಷ್ಟಿಬಾರದು. ಮೊದಲು ಪರೀಕ್ಷೆ ಬಗ್ಗೆ ತೀರ್ಮಾನ ಮಾಡಿ. ಆ ಬಳಿಕ ನಿಗದಿತ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಸಮರ್ಪಕ ವ್ಯವಸ್ಥೆ ಮಾಡಬೇಕು. ಅದಾದ ನಂತರ ಆನ್‌ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಒಂದು ವೇಳೆ ಆನ್‌ಲೈನ್ ಶಿಕ್ಷಣಕ್ಕೆ ಮೊಬೈಲ್ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳು ಹೇಗೆ ಶಿಕ್ಷಣ ಪಡೆಯಬೇಕು? ಆನ್‌ಲೈನ್ ಶಿಕ್ಷಣ ಕಡ್ಡಾಯ ಮಾಡಿದರೆ ಬಡ ಮಕ್ಕಳ ಮಾನಸಿಕ ಸ್ಥಿತಿ ಏನಾಗಬಹುದು? ಎಲ್ಲರಲ್ಲೂ ಸ್ಮಾರ್ಟ್ ಫೋನ್ ತೆಗೆದುಕೊಳ್ಳವ ಶಕ್ತಿ ಇಲ್ಲ. ಕೆಲವೊಂದು ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಿಗೆ ಸಂಬಳ ಕೂಡಾ ಇಲ್ಲ, ಇನ್ನು ಕೆಲವರು ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೂ ತೊಂದರೆ ಸಿಲುಕಿವೆ. ಈ ಬಗ್ಗೆ ಸರ್ಕಾರ ಗಮನ ನೀಡಿ, ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ, ಅಗತ್ಯ ಮುಂಜಾಗ್ರತೆಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಪ್ರತಿ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವ ಜವಾಬ್ದಾರಿಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳ ಬದಲಾಗಿ, ಆರೋಗ್ಯ ಇಲಾಖೆಗೆ ವಹಿಸಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರ 5 ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿರ್ಬಂಧಿಸಿದೆ. ಆದರೆ, ಇದೇ ವೇಳೆ ಆನ್‌ಲೈನ್‌ ಕೋಚಿಂಗ್‌, ಆ್ಯಪ್‌ಗಳ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಪರಿಸ್ಥಿತಿ ಸುಧಾರಿಸದೇ ಇದ್ದರೆ, ಶಾಲೆಗಳು ಇಂತಹ ಕಾರ್ಪೊರೇಟ್ ಕಂಪನಿಗಳ ಆ್ಯಪ್‌ ಮೂಲಕ ಆನ್‌ಲೈನ್‌ ಶಿಕ್ಷಣ ಆರಂಭಿಸಲಿವೆ ಎಂದು ಹೇಳಿದರು.

***

ಪಠ್ಯಪುಸ್ತಕಗಳನ್ನು ಮುದ್ರಿಸಿ ಈಗಾಗಲೇ ಶಾಲೆಗೆ ಕಳುಹಿಸಬೇಕಿತ್ತು. ಜತೆಗೆ ಪಠ್ಯಕ್ರಮ ಕಡಿತಗೊಳಿಸಿ, ಶಾಲೆಗಳ ಆರಂಭಕ್ಕೆ ಯೋಜನೆ ರೂಪಿಸಬೇಕಿತ್ತು.

-ಯು.ಟಿ. ಖಾದರ್, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು