ಶುಕ್ರವಾರ, ಫೆಬ್ರವರಿ 26, 2021
31 °C
ಸುಳ್ಯದ ಜೀವನದಿ ಪಯಸ್ವಿನಿ ನದಿಯಲ್ಲಿ ವ್ಯಾಪಕ ಮಾಲಿನ್ಯ

ಪಯಸ್ವಿನಿ ಸಮಿತಿ ಜಾಗೃತಿ, ನದಿ ರಕ್ಷಣೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಳ್ಯ: ಪಟ್ಟಣ ಸೇರಿದಂತೆ ಸಂಪಾಜೆ, ಅರಂತೋಡು, ಪೆರಾಜೆ, ಜಾಲ್ಸೂರು ಪಂಚಾಯತಿ ಪ್ರದೇಶಗಳು,  ಕೇರಳದ ಕಾಸರಗೋಡು ಜಿಲ್ಲೆಯ ಜನರಿಗೆ ನೀರುಣಿಸುವ ಜಲಮೂಲ ಪಯಸ್ವಿನಿ. ಆದರೆ ಜೀವನದಿ ಹಲವು ಕಾರಣಗಳಿಂದ ಮಲೀನ ಆಗುತ್ತಿದೆ.

ಈ ಮಧ್ಯೆ ‘ಪಯಸ್ವಿನಿ ಉತ್ಸವ ಸಮಿತಿ’ ರಚನೆಯಾಗಿದ್ದು, ಜಲಸಂರಕ್ಷಣೆ, ಮಾಲಿನ್ಯ ತಡೆ ಜಾಗೃತಿ, ವಿಷಾಂಶ, ತೈಲ, ತ್ಯಾಜ್ಯ ಸ್ಪೋಟಕ ಬಳಸದಂತೆ, ಜಲಚರ ಸಂರಕ್ಷಿಸುವಂತೆ ಜನರಲ್ಲಿ ಅರಿವು ಮೂಡಿಸಲು ಯೋಜನೆ ರೂಪಿಸಿದೆ. ಜನಪ್ರತಿನಿಧಿಗಳು, ಪರಿಸರ ಚಿಂತಕರೂ ಈಗ ಕೈಂಕರ್ಯಕ್ಕೆ ಕೈಜೋಡಿಸಲು ಸಜ್ಜಾಗಿದ್ದಾರೆ.

ಕೊಡಿಗಿನಲ್ಲಿ ಹುಟ್ಟಿ 87 ಕಿ.ಮೀ. ಹರಿದು ಸಮುದ್ರ ಸೇರುವ ಪಯಸ್ವಿನಿ ನದಿಯ ಒಡಲು ತ್ಯಾಜ್ಯ ತುಂಬಿ, ಇದನ್ನೇ ಜೀವ ಸೆಲೆಯಾಗಿಸಿರುವ ಮನುಷ್ಯ, ಪ್ರಾಣಿ-ಪಕ್ಷಿಗಳಿಗೆ ರೋಗ ತರುವ ತಾಣವಾಗುತ್ತಿದೆ.  ತುಂಬಿ ಹರಿಯುತ್ತಿದ್ದ ಪಯಸ್ವಿನಿ ಕೆಲವು ವರ್ಷಗಳಿಂದ ಬೇಸಿಗೆಗೆ ಮೊದಲೇ ಬತ್ತುತ್ತಿದೆ.

ಮೀನಿಗಾಗಿ ವಿಷ: ನೀರಿನ ಮಟ್ಟ ಇಳಿಯುದ್ದಂತೆ ಮೀನು ಹಿಡಿಯುವ ಮಂದಿ ನೀರಲ್ಲಿ ವಿಷ ಬೆರೆಸಿ ಕಲುಷಿತ ಮಾಡುತ್ತಿದ್ದಾರೆ. ಅಡ್ಕಾರ್, ಪಂಜಿಕಲ್, ಪೆರಾಜೆ, ಸಂಪಾಜೆ ಗ್ರಾಮದ ಕಲ್ಲುಗುಂಡಿ ಪ್ರದೇಶದಲ್ಲಿ ಈ ಮೀನುಗಾರಿಕೆ ನಡೆಯುತ್ತಿದೆ. ವಿಷ ಸೇರಿಸಿದ್ದ ಪರಿಣಾಮ ಜಲಚರ ನಾಶ ಆಗುತ್ತಾ ನೀರು ಕೂಡಾ ಕಲುಷಿತಗೊಂಡು ಮಾರಕ ರೋಗಕಾರಕವಾಗುತ್ತಿದೆ.

ತ್ಯಾಜ್ಯ, ತೈಲ: ಮನೆಗಳ ಮಲಿನ ನೀರು, ಕೆಲವು ಚಿಕ್ಕ ಕೈಗಾರಿಕೆಗಳ ರಾಸಾಯನಿಕಯುಕ್ತ ತ್ಯಾಜ್ಯ ನೀರು, ವಾಹನಗಳನ್ನು ನದಿಗೆ ಇಳಿಸಿ ತೊಳೆಯುತ್ತಿರುವುದರಿಂದ ಡೀಸಲ್, ತೈಲದ ಅಂಶ,  ತ್ಯಾಜ್ಯ ನದಿಯ ನೀರನ್ನು ಮಲಿನಗೊಳಿಸುತ್ತಿದೆ. ಅಡ್ಕಾರ್, ಕಾಂತಮಂಗಲ ಭಾಗದಲ್ಲಿ ಕೋಳಿ, ಇತರ ಮಾಂಸ ತ್ಯಾಜ್ಯ ಎಸೆಯುವ ಪರಿಪಾಠ ಮುಂದುವರಿಯುತ್ತಿದೆ.

ಕುಡಿಯುವ ನೀರು: ಪಟ್ಟಣದಲ್ಲಿ 4000ಕ್ಕೂ ಅಧಿಕ ನಲ್ಲಿ ನೀರಿನ ಸಂಪರ್ಕ ಇದೆ. ಪಯಸ್ವಿನಿ ನದಿಯಿಂದ ಕಲ್ಲಮುಟ್ಲು ಪಂಪ್ ಹೌಸ್‌ನಲ್ಲಿ 1.50 ಲಕ್ಷ ಗ್ಯಾಲನ್‌ ಸಾಮರ್ಥ್ಯದ ಎರಡು ಟ್ಯಾಂಕ್‌ಗಳಲ್ಲಿ ಶೇಖರಿಸಿ ಪೂರೈಸಲಾಗುತ್ತಿದೆ. ನದಿ ಕಲುಷಿತಗೊಂಡ ಪರಿಣಾಮ ಈ ನೀರೇ ಜನರ ಒಡಲು ಸೇರುತ್ತಿದೆ. ಜಾಂಡೀಸ್ (ಹಳದಿ ರೋಗ ಕಾಮಾಲೆ) ಬರುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಪಟ್ಟಣದಲ್ಲಿ ಜಾಂಡೀಸ್ ರೋಗ ಕಂಡುಬರುವುದು ಸಾಮಾನ್ಯ ಎಂಬಂತಾಗಿದೆ. ಪಟ್ಟಣದಲ್ಲಿ ಸರಿಯಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಶುದ್ಧೀಕರಣ ಘಟಕ ಇಲ್ಲದೆ, ನದಿ ಇನ್ನಷ್ಟು ಮಲೀನವಾಗುತ್ತಿದೆ.

ಜಾಗೃತಿ: ಪಯಸ್ವಿನಿ ನದಿಯ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪಯಸ್ವಿನಿ ಉತ್ಸವ ಸಮಿತಿ ರಚನೆ ಆಗಿದೆ. ಈ ಸಮಿತಿ ಅಂತರ್ಜಲ ಹೆಚ್ಚಳ, ಮಾಲಿನ್ಯ ತಡೆ ಜಾಗೃತಿ, ಮೀನುಗಾರಿಕೆ ನೆಪದಲ್ಲಿ ನೀರಿಗೆ ವಿಷ ಹಾಕುವುದನ್ನು ತಡೆಯಲು ಅಧಿಕಾರಿ, ಜನಪ್ರತಿನಿಧಿಗಳಿಗೆ ಒತ್ತಡ, ವಿದ್ಯಾರ್ಥಿಗಳಲ್ಲಿ ನದಿ ರಕ್ಷಣಾ ಅರಿವು ಇತ್ಯಾದಿ ಯೋಜನೆಗಳನ್ನು ರೂಪಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು