ಮಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ಸ್ಪೋಟಗೊಂಡಿರುವ ಅಸಮಾಧಾನ, ಈಗ ಪದಾಧಿಕಾರಿ ಹುದ್ದೆ ರಾಜೀನಾಮೆಯವರೆಗೆ ತಲುಪಿದೆ.
ಜಿಗಣಿ ಕೃಷ್ಣಪ್ಪ ಅವರ ಬದಲಾಗಿ ಎಚ್.ಎಂ. ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿರುವ ಕಾರ್ಯಕರ್ತರು, ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈಗಾಗಲೇ ಹರಿಹರ ಪಲ್ಲತ್ತಡ್ಕ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಉಜ್ವಲ್ ಕಚ್ಚೋಡಿ ಅವರು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.
‘ಅಭ್ಯರ್ಥಿ ಬದಲಿಸಿ, ನಂದಕುಮಾರ್ ಅವರಿಗೆ ಟಿಕೆಟ್ ನೀಡದಿದ್ದರೆ, ಹಲವಾರು ಕಾರ್ಯಕರ್ತರು, ಪದಾಧಿಕಾರಿಗಳು ರಾಜೀನಾಮೆ ನೀಡುವ ಸಿದ್ಧತೆಯಲ್ಲಿದ್ದಾರೆ. ಕ್ಷೇತ್ರ ಪರಿಚಯ ಇಲ್ಲದ ಅಭ್ಯರ್ಥಿಗೆ ಟಿಕೆಟ್ ನೀಡುವ ಬದಲು, ಕ್ಷೇತ್ರದಾದ್ಯಂತ ಸಂಚರಿಸಿ, ಬೂತ್ ಮಟ್ಟದಲ್ಲಿ ಪಕ್ಷ ಬೆಳೆಸಿರುವ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ’ ಎಂದು ಕಾಂಗ್ರೆಸ್ ಪದಾಧಿಕಾರಿಯೊಬ್ಬರು ಹೇಳಿದರು.
ನಂದಕುಮಾರ್ ಅಭಿಮಾನ ಬಳಗವರು ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ, ತಮ್ಮ ಅಹವಾಲು ಸಲ್ಲಿಸಿದ್ದಾರೆ. ಮುಖಮಡರು ಎರಡು ದಿನಗಳಲ್ಲಿ ತೀರ್ಮಾನಿಸುವುದಾಗಿ ಹೇಳಿದ್ದಾರೆಂದು ನಿಯೋಗದಲ್ಲಿದ್ದವರು ತಿಳಿಸಿದ್ದಾರೆ.
ಅಹವಾಲು ಸಲ್ಲಿಸುವ ವೇಳೆ ಕಾಂಗ್ರೆಸ್ ಸಚಿನ್ ರಾಜ್ ಶೆಟ್ಟಿ, ಬಾಲಕೃಷ್ಣ ಬಳ್ಳೇರಿ, ಉಷಾ ಅಂಚನ್, ಪ್ರವೀಣ್ ಕೆಡಿಂಜಿ, ಗೊಕುಲ್ ದಾಸ್, ಅನಿಲ್ ರೈ, ವಿಜಯಕುಮಾರ್ ರೈ, ಪೈಸಲ್, ಶಶಿಧರ ಎಂ.ಜೆ, ಭವಾನಿಶಂಕರ , ಕಂದಸ್ವಾಮಿ, ಬಶೀರ್ ನೇಲ್ಯಮಜಲು, ಹಮೀದ್, ಲಕ್ಷ್ಮಣ ಬೊಳ್ಳಜೆ, ಉಷಾ ಜೋಯಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.