ಶನಿವಾರ, ಡಿಸೆಂಬರ್ 3, 2022
26 °C

ಅಭಿನಂದನೆ ಸಲ್ಲಿಸುವುದಲ್ಲ, ಕ್ಷಮೆ ಯಾಚಿಸಬೇಕಿತ್ತು: ಕಟೀಲ್‌ ವಿರುದ್ಧ ರಾಮಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಸುರತ್ಕಲ್‌ ಟೋಲ್ ಗೇಟ್‌ ರದ್ದತಿಯ ತಾಂತ್ರಿಕ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಟ್ವೀಟ್‌ ಮಾಡಿರುವ ಸಂಸದ ನಳಿನ್ ಕುಮಾರ್, ಕೇಂದ್ರ ಭೂಸಾರಿಗೆ ಸಚಿವರಿಗೆ ಮತ್ತು ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದರ ಬದಲು ಅಕ್ರಮ ಟೋಲ್‌ಗೇಟ್‌ ಮೂಲಕ ಜನರನ್ನು ಆರು ವರ್ಷ ದರೋಡೆ ಮಾಡಿದ್ದಕ್ಕೆ ಅವರು ಕ್ಷಮೆ ಯಾಚಿಸಬೇಕಿತ್ತು’ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಹೇಳಿದರು. 

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಆರು ವರ್ಷಗಳಿಂದ ಜನರನ್ನು ದರೋಡೆ ಮಾಡಿ, ಈಗ ಟೋಲ್ ರದ್ಧತಿ ಬಗ್ಗೆ ಸಂಸದರು ಟ್ವೀಟ್‍ ಮೂಲಕ ಅಭಿನಂದನೆ ಸಲ್ಲಿಸಿರುವುದು ಕುಹಕದಂತೆ ಕಾಣಿಸುತ್ತಿದೆ‘ ಎಂದರು. 

‘ಸುರತ್ಕಲ್ ಟೋಲ್ ಗೇಟ್‌ ವಿರೋಧಿಸಿ ರಾತ್ರಿ ಹಗಲು ನಡೆಯುತ್ತಿರುವ ಧರಣಿಗೆ ಫಲ ದೊರೆಯುವ ಲಕ್ಷಣ ಕಾಣುತ್ತಿದೆ. ಇದು ಆಶಾದಾಯಕ ಬೆಳವಣಿಗೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಇತ್ತೀಚೆಗೆ ಭೇಟಿ ನೀಡಿದಾಗ ಅಲ್ಲಿನ ರಸ್ತೆಗಳಿಗೆ ತೇಪೆ ಹಚ್ಚಲಾಯಿತು.  ಅವರೇ ಹೇಳಿಕೊಳ್ಳುವಂತೆ ಅವರೊಬ್ಬ ಪ್ರಧಾನ ಸೇವಕ. ಬೆಂಗಳೂರಿಗೆ ಭೇಟಿ ನೀಡಿದಾಗ ಜನರ ಸಮಸ್ಯೆಗಳು ಅವರಿಗೆ ಅರಿವಾಗಬೇಕಿತ್ತು. ತೇಪೆ ಹಾಕಿ ರಸ್ತೆಗಳನ್ನು ಅಂದಗೊಳಿಸಿದರೆ ಅವರಿಗೆ ಸಮಸ್ಯೆ ತಿಳಿಯುವುದು ಹೇಗೆ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

‘ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಗುಂಡಿಮಯ ರಸ್ತೆಗಳಿಗೆ ತೇಪೆ ಹಾಕಿರಲಿಲ್ಲ. ಆದರೆ, ಪ್ರಧಾನಿ ಬಂದಾಗ ತೇಪೆ ಹಚ್ಚುವುದರಿಂದ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು. ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಉದಯ ಕುಂದರ್, ನೀರಜ್ ಪಾಲ್, ಯಶವಂತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು