ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್ ಜಂಕ್ಷನ್‌: ‘ಸಾವರ್ಕರ್‌ ವೃತ್ತ‘ ಫ್ಲೆಕ್ಸ್‌ ಅಳವಡಿಕೆ

ವಿರೋಧಕ್ಕೆ ಮಣಿದು ಫ್ಲೆಕ್ಸ್‌ ತೆರವುಗೊಳಿಸಿದ ಪಾಲಿಕೆ
Last Updated 14 ಆಗಸ್ಟ್ 2022, 15:45 IST
ಅಕ್ಷರ ಗಾತ್ರ

ಸುರತ್ಕಲ್ (ದಕ್ಷಿಣ ಕನ್ನಡ): ಪಟ್ಟಣದ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಎಂಆರ್‌ಪಿಎಲ್ ರಸ್ತೆ ಸಂಧಿಸುವಲ್ಲಿನ ಮೇಲ್ಸೇತುವೆಯ ಕಾಂಕ್ರೀಟ್‌ ಕಂಬದಲ್ಲಿ ಸಾವರ್ಕರ್‌ ಭಾವಚಿತ್ರ ಹಾಗೂ ‘ಸ್ವಾತಂತ್ರ್ಯ ಯೋಧ ವೀರ ಸಾರ್ವಕರ್ ವೃತ್ತ’ ಎಂಬ ಬರಹವಿದ್ದ ಫ್ಲೆಕ್ಸ್ ಅನ್ನು ಭಾನುವಾರದ ಬೆಳಿಗ್ಗೆ ಏಕಾಏಕಿ ಅನಧಿಕೃತವಾಗಿ ತೂಗುಹಾಕಲಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್‌ ಅನ್ನು ತೆರವುಗೊಳಿಸಿದರು.

ವೃತ್ತದಲ್ಲಿ ಸಾವರ್ಕರ್‌ ಹೆಸರಿನ ಫ್ಲೆಕ್ಸ್‌ ಅನ್ನು ಅನಧಿಕೃತವಾಗಿ ಅಳವಡಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್‌ಡಿಪಿಐನ ಸುರತ್ಕಲ್ ಘಟಕವು ಈ ವಿಚಾರವನ್ನು ಸುರತ್ಕಲ್ ಪೊಲೀಸರ ಗಮನಕ್ಕೆ ತಂದಿತ್ತು.

‘ ಬಿ.ಆರ್‌.ಅಂಬೇಡ್ಕರ್ ಮೊದಲಾದ ವಿವಾದರಹಿತ ನಾಯಕರ ಹೆಸರನ್ನು ವೃತ್ತಕ್ಕೆ ಇಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈಗ ಹಾಕಿರುವ ಫ್ಲೆಕ್ಸ್‌ ತೆರವುಗೊಳಿಸದಿದ್ದರೆ ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಪಕ್ಷದ ಮುಖಂಡರು ಎಚ್ಚರಿಕೆ ನೀಡಿದರು. ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ ಪೊಲೀಸರು, ‘ಇದು ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಿಚಾರ. ಇದನ್ನು ಅವರೇ ತೆರವುಗೊಳಿಸಬೇಕು’ ಎಂದು ಪ್ರತಿಕ್ರಿಯಿಸಿದ್ದರು. ಇದರಿಂದ ಸಿಟ್ಟಿಗೆದ್ದ ಪಕ್ಷದ ಕೆಲವು ಕಾರ್ಯಕರ್ತರು, ‘ಟಿಪ್ಪು ಸುಲ್ತಾನ್ ವೃತ್ತ’ ಎಂಬ ಇನ್ನೊಂದು ಪ್ಲೆಕ್ಸ್ ಅನ್ನು ಸ್ಥಳದಲ್ಲಿ ಅಳವಡಿಸಲು ಮುಂದಾಗಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರನ್ನೂ ಸಂಪರ್ಕಿಸಿದ ಪಕ್ಷದ ಪ್ರಮುಖರು, ಫ್ಲೆಕ್ಸ್‌ ತೆರವುಗೊಳಿಸುವಂತೆ ಆಗ್ರಹಿಸಿದರು. ಬಳಿಕ ಆಯುಕ್ತರ ಸೂಚನೆ ಮೇರೆಗೆ ಪಾಲಿಕೆಯ ಎಂಜಿನಿಯರ್‌ಗಳು ಫ್ಲೆಕ್ಸ್‌ ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT