ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಯಿ ಮಡಿಲಿನ ಸಂತಸ’

ಡಾ.ಆರ್. ಲಕ್ಷ್ಮೀನಾರಾಯಣ ಅವರಿಗೆ ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ
Last Updated 9 ಫೆಬ್ರುವರಿ 2020, 10:28 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರೊ.ಎಸ್‌.ವಿ.ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಸ್ವೀಕರಿಸುತ್ತಿರುವುದು ತಾಯಿ ಮಡಿಲಿಗೆ ಬಂದಂತಹ ಸಂತಸ ನೀಡಿದೆ’ ಎಂದು ಹಿರಿಯ ಸಾಹಿತಿ ಡಾ.ಆರ್. ಲಕ್ಷ್ಮೀನಾರಾಯಣ ಭಾವುಕರಾಗಿ ನುಡಿದರು.

ನಗರದ ಸೇಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ (ಎಸ್ವಿಪಿ) ಪ್ರತಿಷ್ಠಾನವು ಹಮ್ಮಿಕೊಂಡ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಇದೇ ಸಂತ ಅಲೋಷಿಯಸ್ ಕಾಲೇಜು ಆವರಣದಲ್ಲಿ ಅಂದು ಕನ್ನಡ ಸ್ನಾತಕೋತ್ತರ ವಿಭಾಗವಿತ್ತು. ಎಸ್‌.ವಿ. ಪರಮೇಶ್ವರ ಭಟ್ಟ ಅವರು ಮುಖ್ಯಸ್ಥರಾಗಿದ್ದು, ನಮಗೆ ಕಲಿಸಿದ, ಅವರ ಜೊತೆ ಒಡನಾಡಿದ ನೆನಪು ಇನ್ನೂ ಹಸಿರಾಗಿವೆ. ಹೀಗಾಗಿ, ಮಂಗಳೂರಿಗೆ ಬರುವುದೇ ನನಗೆ ತವರಿನ ನಡಿಗೆ’ ಎಂದು ಸಂತಸ ಹಂಚಿಕೊಂಡರು.

ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಮಾತನಾಡಿ, ‘ಕರಾವಳಿ ಭಾಗದಲ್ಲಿ ಕನ್ನಡದ ಜಾಗೃತಿ ಹಾಗೂ ಯಕ್ಷಗಾನಕ್ಕೆ ಶೈಕ್ಷಣಿಕ ಮನ್ನಣೆ ಕೊಟ್ಟವರು ಎಸ್ವಿಪಿ. ಶೇಣಿ ಗೋಪಾಲಕೃಷ್ಣ ಭಟ್ಟ, ಅಳಕೆ ರಾಮಯ್ಯ ರೈ, ಮಲ್ಪೆ ರಾಮದಾಸ ಸಾಮಗ ಮತ್ತಿತರರು ಸನ್ಮಾನಿಸುವ ಮೂಲಕ ಗೌರವ ನೀಡಿದರು. ಅವರ ಬಗ್ಗೆ 7 ಸಂಪುಟಗಳು ಪ್ರಕಟಗೊಂಡಿವೆ’ ಎಂದರು.

‘1968ರ ಆಸುಪಾಸಿನಲ್ಲಿ ಕನ್ನಡ ಹಾಗೂ ಯಕ್ಷಗಾನದ ಬಗ್ಗೆ ಒಂದು ರೀತಿಯ ತಿರಸ್ಕಾರ ಮನೋಭಾವ ಕರಾವಳಿಯಲ್ಲಿ ಇತ್ತು. ಆಗ, ಅದಕ್ಕೆ ಮನ್ನಣೆ ಬರುವಂತೆ ಮಾಡಿದರು. ಮನೆ ಮನೆಗೆ ಕನ್ನಡವನ್ನು ಕೊಂಡೊಯ್ದವರು ಎಸ್ವಿಪಿ’ ಎಂದರು.

‘ಶ್ರಾದ್ಧ ಮಾಡುವುದು, ಗೋರಿ ಕಟ್ಟುವ ಮೂಲಕ ತೀರಿ ಹೋದ ತಂದೆಯನ್ನು ಹಲವರು ಸ್ಮರಿಸುತ್ತಾರೆ. ಆದರೆ, ತಂದೆಯ ಧ್ಯೇಯೋದ್ದೇಶಗಳನ್ನು ಮುಂದುವರಿಸುತ್ತಿರುವವರ ಜೊತೆಗೆ, ಅವರ ಜೊತೆ ಇದ್ದುಕೊಂಡು ಮುನ್ನಡೆಯುವ ಕೆಲಸವನ್ನು ಎಸ್ಪಿಪಿ ಪುತ್ರ ಎಸ್.ಪಿ.ರಾಮಚಂದ್ರ ಮಾಡುತ್ತಿರುವುದು ಶ್ಲಾಘನೀಯ’ ಎಂದು ಅಭಿನಂದಿಸಿದರು.

ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಸಾಹಿತಿ ಡಾ.ರಂಗಾರೆಡ್ಡಿ ಕೋಡಿರಾಂಪುರ, ‘ಡಾ.ಆರ್. ಲಕ್ಷ್ಮೀ ನಾರಾಯಣ ಅವರು ಸಮಭಾವದ ವಿಮರ್ಶಕರು. ಸಹೃದಯ ವಿನಯವಂತರು. ಅವರ ಹಳೇಗನ್ನಡ ಸಾಹಿತ್ಯ ಜ್ಞಾನ ಅಪಾರವಾಗಿದೆ. ಅವರ ಮಾತು, ಕೃತಿಗಳಲ್ಲಿ ನಾವು ಕಾವ್ಯದ ಕಂಪನ್ನು ಕಾಣಬಹುದು. ಕೇಂದ್ರ ಸಾಹಿತ್ಯ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿವೃತ್ತಿ ಬಳಿಕವೂ ಕನ್ನಡ, ಸಾಹಿತ್ಯದಲ್ಲಿ ಸಕ್ರಿಯವಾಗಿ ಸಾಧನೆ ಮಾಡುತ್ತಿರುವ ಸಹೃದಯಿಗಳು’ ಎಂದು ಶ್ಲಾಘಿಸಿದರು.

ಕಾಲೇಜು ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್, ಸಾಹಿತಿ ಚಂದ್ರಕಲಾ ನಂದಾವರ, ಡಾ.ನರಸಿಂಹಮೂರ್ತಿ ಆರ್., ಡಾ.ಸರಸ್ವತಿ ಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT