ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿಟಕಿ ಗ್ರಿಲ್‌ ಕತ್ತರಿಸಿ ₹ 10 ಸಾವಿರ ಕಳವು

ಕೋಡಿಕಲ್ ರಸ್ತೆ: ಮನೆ ಮಂದಿ ಮಲಗಿದ್ದಾಗ ಐವರ ತಂಡದಿಂದ ಕೃತ್ಯ
Published 7 ಜುಲೈ 2024, 14:32 IST
Last Updated 7 ಜುಲೈ 2024, 14:32 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಂಗಳೂರು: ಕಿಟಕಿಯ ಗ್ರಿಲ್‌ಗಳನ್ನು ಕತ್ತರಿಸಿ ಮನೆಯಲ್ಲಿ ಕಳ್ಳತನ ನಡೆಸುವ ದುಷ್ಕರ್ಮಿಗಳ ತಂಡವೊಂದು ಉರ್ವ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡಿದೆ. ಕೋಡಿಕಲ್ ರಸ್ತೆಯ ಬಳಿಯ ಮನೆಯೊಂದರ ಕಿಟಕಿಯ ಗ್ರಿಲ್‌ ಕತ್ತರಿಸಿ ₹10 ಸಾವಿರ ಕದ್ದೊಯ್ದಿದೆ.

‘ಕಳ್ಳರು ಕೋಡಿಕಲ್‌ ರಸ್ತೆ ಬಳಿಯ ಪುರಂದರ ಭಟ್‌ ಎಂಬುವರ ಮನೆಯ ಕಿಟಕಿಯ ಗ್ರಿಲ್‌ ಕತ್ತರಿಸಿ ಒಳಗೆ ಪ್ರವೇಶಿಸಿದ್ದರು. ಮನೆಯ ಕಪಾಟಿನಲ್ಲಿದ್ದ ವಸ್ತುಗಳನ್ನು ಜಾಲಾಡಿ, ₹10 ಸಾವಿರ ನಗದನ್ನು ಕದ್ದೊಯ್ದಿದ್ದಾರೆ. ಈ ಕೃತ್ಯ ನಡೆದಾಗ ಮನೆಯಲ್ಲಿ ಮೂವರು ಮಲಗಿದ್ದರು.  ಕಳ್ಳದ ಗ್ಯಾಂಗ್‌ನ ಚಲನವಲನಗಳು ಸಮೀಪದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕೃತ್ಯ ನಡೆಸಿದ ತಂಡದಲ್ಲಿ ಐದು ಮಂದಿ ಇದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬುಡಕಟ್ಟು ಜನರ ಗುಂಪೊಂದು ಇದೇ ಮಾದರಿಯಲ್ಲಿ ಕಳವು ಕೃತ್ಯದಲ್ಲಿ ತೊಡಗಿಸಿಕೊಂಡಿದೆ. ಚಡ್ಡಿ ಗ್ಯಾಂಗ್‌ ಎಂದು ಕರೆಯಲಾಗುವ ಆ ತಂಡವೇ ಈ ಕೃತ್ಯವನ್ನು ನಡೆಸಿರುವ ಸಾಧ್ಯತೆ ಇದೆ. ವಾಹನದಲ್ಲಿ ಬಂದು ಕೃತ್ಯ ನಡೆಸುವ ಅವರು ಮನೆಯ ಕಿಟಕಿಯ ಸರಳುಗಳನ್ನು ಕತ್ತರಿಸಲು ಅಗತ್ಯವಿರುವ ಎಲ್ಲ ಸಾಧನಗಳನ್ನು ಹೊಂದಿರುತ್ತಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

‘ಇಂತಹ ತಂಡದ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಯಾವುದೇ ತಂಡ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ (9480802321) ಅಥವಾ 112 ಸಹಾಯವಾಣಿಗೆ ತಕ್ಷಣ ಮಾಹಿತಿ ನೀಡಬೇಕು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮನೆಗಳಲ್ಲಿ ಹಾಗೂ ಅಂಗಡಿಗಳ ಬಳಿ  ರಸ್ತೆ ಹಾಗೂ ಪ್ರವೇಶ ದಾರಿ ಕಾಣುವ ಹಾಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಅವುಗಳು ಸುಸ್ಥಿತಿಯಲ್ಲಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ರಾತ್ರಿಯ ದೃಶ್ಯಗಳೂ ಸ್ಪಷ್ಟವಾಗಿ ಕಾಣುವಷ್ಟು ರೆಸಲ್ಯೂಷನ್ ಅನ್ನು ಸಿ.ಸಿ.ಟಿ.ವಿ ಕ್ಯಾಮೆರಾ ಹೊಂದಿರಲಿ’ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

‘ಕೋಡಿಕಲ್ ರಸ್ತೆ ಬಳಿಯ ಮನೆಯಲ್ಲಿ ಕಳವು ನಡೆಸಿರುವ ತಂಡದ ಬಗ್ಗೆ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ₹10 ಸಾವಿರ ನಗದು ಹೊರತಾಗಿ ಬೇರಾವುದೇ ಬೆಲೆಬಾಳುವ ಸ್ವತ್ತು ಅವರಿಗೆ ಸಿಕ್ಕಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT