ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BJP ಪ್ರತಿಭಟನೆ: ಯುವಮೋರ್ಚಾ ಮುಖಂಡನ ಕಾಲರ್ ಪಟ್ಟಿ ಹಿಡಿದ ಇನ್‌ಸ್ಪೆಕ್ಟರ್‌

Published 20 ಜೂನ್ 2024, 13:40 IST
Last Updated 20 ಜೂನ್ 2024, 13:40 IST
ಅಕ್ಷರ ಗಾತ್ರ

ಉಳ್ಳಾಲ: ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ದ ಬಿಜೆಪಿಯ ಮಂಗಳೂರು ಮಂಡಲ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯಲು ಮುಂದಾದ ಪಕ್ಷದ ಯುವಮೋರ್ಚಾ ಮಂಡಲ ಘಟಕದ ಅಧ್ಯಕ್ಷ ಮುರಳಿ ಕೊಣಾಜೆ ಅವರನ್ನು ಉಳ್ಳಾಲ ಠಾಣಾಧಿಕಾರಿ ಎಚ್.ಎನ್ ಬಾಲಕೃಷ್ಣ, ಅಂಗಿಯ ಕಾಲರ್‌ ಪಟ್ಟಿ ಹಿಡಿದು ಹೆದ್ದಾರಿ ಪಕ್ಕಕ್ಕೆ ಎಳೆದು ತಂದರು.

ಈ ಘಟನೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸಿದ್ದನ್ನು ಖಂಡಿಸಿ ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟು ಜಂಕ್ಷನ್‌ ಮೇಲ್ಸೇತುವೆ ಬಳಿ ಗುರುವಾರ ಪ್ರತಿಭಟನೆ ನಡೆಯಿತು. ಈ ವೇಳೆ ಪಕ್ಷದ ಮುಖಂಡರಾದ ಜಯರಾಮ ಶೆಟ್ಟಿ, ಸಂತೋಷ್ ರೈ ಬೋಳಿಯಾರ್, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಿನೇಶ್ ಅಮ್ಟೂರು, ಮಹೇಶ್ ಜೋಗಿ , ಮಂಡಲ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ, ಧನಲಕ್ಷ್ಮೀ ಗಟ್ಟಿ ಭಾಷಣ ಮಾಡಿದ್ದರು.

ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಆ ಬಳಿಕ ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದರು. ಇದಕ್ಕೆ ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್ ಬಾಲಕೃಷ್ಣ ಅವಕಾಶ ನೀಡಲಿಲ್ಲ. ‘ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮಕೈಗೊಳ್ಳುವಂತೆ ಮೇಲಧಿಕಾರಿಯವರ ಆದೇಶವಿದೆ’ ಎಂದು ಇನ್‌ಸ್ಪೆಕ್ಟರ್‌ ತಿಳಿಸಿದರು. ಈ ನಡುವೆ ಮುರಳಿ ಕೊಣಾಜೆ ಅವರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲು ಮುಂದಾದರು. ಆಗ ಅವರ ಅಂಗಿಯ ಕಾಲರ್‌ಪಟ್ಟಿ ಹಿಡಿದ ಇನ್‌ಸ್ಪೆಕ್ಟರ್‌ ಹೆದ್ದಾರಿಯಿಂದ ಬದಿಗೆ ಎಳೆದುತಂದರು. ಇದು ಯುವಮೋರ್ಚಾ ಕಾರ್ಯಕರ್ತರು ಹಾಗೂ ಠಾಣಾಧಿಕಾರಿ ವಿರುದ್ಧ ವಾಗ್ವಾದಕ್ಕೆ ಕಾರಣವಾಯಿತು.

ಮಧ್ಯ ಪ್ರವೇಶಿಸಿದ ಮಂಗಳೂರು ದಕ್ಷಿಣ ಉಪವಿಭಾಗದ ಪ್ರಭಾರ ಎಸಿಪಿ ರವೀಶ್ ನಾಯ್ಕ್ ಬಿಜೆಪಿ ಪ್ರಮುಖರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

‘ಯುವಮೋರ್ಚಾ ಮುಖಂಡನಿಗೇ ಈ ಗತಿ ಆದರೆ, ಇನ್ನು ಕಾರ್ಯಕರ್ತರ ಪಾಡೇನು’ ಎಂದು ಕಾರ್ಯಕರ್ತರು ಪಕ್ಷದ ಮುಖಂಡರನ್ನು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT