ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕಿ ಪ್ರಭಾ ತಪ್ಪೆಸಗಿಲ್ಲ: ಸೇಂಟ್‌ ಜೆರೋಸಾ ಶಾಲೆಯ ಆಡಳಿತ ಮಂಡಳಿ ಸ್ಪಷ್ಟನೆ

Published 15 ಫೆಬ್ರುವರಿ 2024, 15:37 IST
Last Updated 15 ಫೆಬ್ರುವರಿ 2024, 15:37 IST
ಅಕ್ಷರ ಗಾತ್ರ

ಮಂಗಳೂರು: ‘ನಮ್ಮ ಶಾಲೆಯ ಅಧ್ಯಾಪಕಿ ಪ್ರಭಾ ಅವರು ಪಾಠ ಮಾಡುವಾಗ ಯಾವುದೇ ಧರ್ಮದ ಅವಹೇಳನ ಮಾಡಿಲ್ಲ’ ಎಂದು ಜೆಪ್ಪುವಿನ ಸೇಂಟ್‌ ಜೆರೋಸಾ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

‘ಶಾಸಕ ವೇದವ್ಯಾಸ ಕಾಮತ್‌ ಒತ್ತಡ ಹೇರಿದ್ದರಿಂದ ಹಾಗೂ ಪ್ರತಿಭಟನೆ ತೀವ್ರಗೊಳಿಸುವ ಬೆದರಿಕೆ ಒಡ್ಡಿದ್ದರಿಂದ ಶಿಕ್ಷಕಿಯನ್ನು ವಜಾ ಮಾಡಬೇಕಾಯಿತು’ ಎಂದೂ ಆರೋಪಿಸಿದೆ.

ಶಾಲೆಯ ಶಿಕ್ಷಕಿ ವಿರುದ್ಧದ ಆರೋಪಗಳ ಕುರಿತು ಪತ್ರಿಕಾ ಹೇಳಿಕೆಯನ್ನು ಗುರುವಾರ ಬಿಡುಗಡೆ ಮಾಡಿರುವ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ, ‘ನಮ್ಮ ಶಾಲೆಯು 60 ವರ್ಷಗಳ ಇತಿಹಾಸದಲ್ಲಿ ಎಂದೂ ನಡೆಯದ ದುರದೃಷ್ಟಕರ ಹಾಗೂ ಬೇಸರದ ಘಟನೆಗೆ ಸಾಕ್ಷಿಯಾಯಿತು. ಫೆ 10ರಂದು ನಾಲ್ವರು ನನ್ನನ್ನು ಭೇಟಿಯಾಗಿದ್ದರು. ಶಿಕ್ಷಕಿ ಪ್ರಭಾ ಅವರು ರವೀಂದ್ರನಾಥ ಟ್ಯಾಗೋರ್‌ ಅವರ ‘ವರ್ಕ್‌ ಈಸ್ ವರ್ಶಿಪ್‌’ ಪದ್ಯವನ್ನು ಕಲಿಸುವಾಗ ಹಿಂದೂ ಧರ್ಮದ ಕುರಿತು ಹಾಗೂ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದೆ. ವಿಚಾರಣೆ ವೇಳೆ ಶಿಕ್ಷಕಿ ಪ್ರಭಾ ಅವರು ಈ ಆರೋಪವನ್ನು ಖಡಾಖಂಡಿತವಾಗಿ ಅಲ್ಲಗಳೆದಿದ್ದರು’ ಎಂದು ತಿಳಿಸಿದ್ದಾರೆ.

ಶಿಕ್ಷಕಿ ಕಲಿಸಿದ ಪದ್ಯದ ಪೂರ್ಣ ಪಾಠವನ್ನು ಹಂಚಿಕೊಂಡಿರುವ ಅನಿತಾ, ‘ದೇವಾಲಯಗಳು, ಚರ್ಚುಗಳು ಮತ್ತು ಮಸೀದಿಗಳು ಕಟ್ಟಡಗಳು ಮಾತ್ರ. ದೇವರು ಮಾನವರ ಹೃದಯಗಳಲ್ಲಿ ನೆಲೆಸಿರುತ್ತಾರೆ. ಹಾಗಾಗಿ ದೇವರ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲಬಾರದು. ಕಾಯಕವನ್ನು ಮನುಷ್ಯರನ್ನು ನಾವು ಗೌರವಿಸುವ ಮೂಲಕ ಅದರಲ್ಲಿ ದೇವರನ್ನು ಕಾಣಬೇಕು. ನಾವೆಲ್ಲರೂ ದೇವರ ಆಲಯಗಳಿದ್ದಂತೆ ಎಂದು ಆ ಪದ್ಯವನ್ನುಅರ್ಥ ಮಾಡಿಸುವಾಗ ಹೇಳಿದ್ದೇನೆ. ಹಿಂದೂ ಅಥವಾ ಯಾವುದ ಧರ್ಮದ ವಿರುದ್ಧ ಹಾಗೂ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಉಲ್ಲೇಖ ಮಾಡಿಲ್ಲ ಎಂಬುದಾಗಿ ಶಿಕ್ಷಕಿ ಪ್ರಭಾ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಶಿಕ್ಷಕಿ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಧ್ವನಿಮುದ್ರಿತ ಸಂದೇಶ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಅಹಿತಕರ ಘಟನೆ ನಡೆಯದಂತೆ ರಕ್ಷಣೆ ನೀಡಬೇಕು ಎಂದು ಕೋರಿ ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದೆವು. ಆ ಮಹಿಳೆಯ ಧ್ವನಿಮುದ್ರಿತ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದೆವು.’

‘ಫೆ.12ರಂದು ಶಿಕ್ಷಣ ಇಲಾಖೆಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವಿಷಯ ಪರಿವೀಕ್ಷಕರು, ಡಿಡಿಪಿಐ ಕಚೇರಿಯ ಸಮನ್ವಯಾಧಿಕಾರಿ, ಬಿಇಒ, ಇಸಿಒ, ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಶಾಲೆಗೆ ಭೇಟಿ ನೀಡಿದ್ದರು. ಅವರ ಕೋರಿಕೆ ಮೇರೆಗೆ ಅವರಿಗೂ ಸತ್ಯಾಂಶ ಏನೆಂದು ವಿವರಿಸಿದ್ದೆವು. ಅದರ ಬೆನ್ನಲ್ಲೇ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್‌ ಬಂದರು. ಅವರ ಜೊತೆ ಬಂದ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಶಾಲೆಯ ವಿರುದ್ಧ ಘೋಷಣೆ ಕೂಗಿದರು. ಶಾಲೆಯ ಒಳಗೆ ಬರುವಂತೆ ಗೌರವಯುತವಾಗಿ ಶಾಸಕರನ್ನು ಆಹ್ವಾನಿಸಿದ್ದೆವು. ಒಳಗೆ ಬರಲು ನಿರಾಕರಿಸಿದ್ದ ಅವರು ಶಾಲೆಯ ಮತ್ತು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.’

‘ಎಲ್ಲರ ಪ್ರತಿನಿಧಿಯಾದ ಶಾಸಕರೇ ಮಕ್ಕಳನ್ನು ಒಟ್ಟಿಗೆ ಸೇರಿಸಿಕೊಂಡು, ಅವರದ್ದೇ ಶಾಲೆಯ ವಿರುದ್ಧ ಘೋಷಣೆ ಕೂಗುವಂತೆ ಪ್ರಚೋದಿಸಿದ್ದು ಅತ್ಯಂತ ನೋವಿನ ಸಂಗತಿ. ಶಿಕ್ಷಕಿ ಆ ಪಾಠ ಮಾಡಿದ್ದ ಸಂದರ್ಭದಲ್ಲಿ ತರಗತಿಯಲ್ಲಿ ಇಲ್ಲದ ವಿದ್ಯಾರ್ಥಿಗಳು ಹಾಗೂ ಇತರ ತರಗತಿಗಳ ವಿದ್ಯಾರ್ಥಿಗಳೂ ಘೋಷಣೆ ಕೂಗುವಂತೆ ಮಾಡಿದರು. ಬಿಇಒ ಮತ್ತು ಶಿಕ್ಷಣ ಇಲಾಖೆಯ ಇತರ ಅಧಿಕಾರಿಗಳು ಶಾಲೆಯ ಗೇಟಿನ ಬಳಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕರನ್ನು ಭೇಟಿ ಮಾಡುವಂತೆ ಕೇಳಿಕೊಂಡರು. ನಾನು ಅವರನ್ನು ಭೇಟಿಯಾದೆ.’

‘ಶಿಕ್ಷಕಿಯನ್ನು ತಕ್ಷಣವೇ ವಜಾ ಮಾಡದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಂದು ಶಾಸಕರು ಬೆದರಿಕೆ ಒಡ್ಡಿದರು. ಶಿಕ್ಷಣ ಸಂಸ್ಥೆಯ ನಿಯಮಗಳ ಪ್ರಕಾರ ವಿಚಾರಣೆ ನಡೆಸದೆಯೇ ಶಿಕ್ಷಕಿಯನ್ನು ವಜಾ ಮಾಡಲು ಅವಕಾಶ ಇಲ್ಲ ಎಂದು ನಾನು ಅವರಿಗೆ ತಿಳಿಸಿದೆ. ಆದರೂ, ಶಿಕ್ಷಕಿಯನ್ನು ತಕ್ಷಣ ವಜಾ ಮಾಡಬೇಕು ಎಂದು ಶಾಸಕರ ನೇತೃತ್ವದ ಗುಂಪು ಒತ್ತಡ ಹೇರಿತು. ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮತ್ತು ಗುಂಪು ಮತ್ತಷ್ಟು ದೊಡ್ಡದಾಗಲು ಅವಕಾಶ ನೀಡುವುದು ಬೇಡ ಎಂಬ ಕಾರಣಕ್ಕೆ ಬೇರೆ ದಾರಿ ಇಲ್ಲದೆಯೇ ಶಿಕ್ಷಕಿ ಪ್ರಭಾ ಅವರನ್ನು ಹುದ್ದೆಯಿಂದ ವಜಾ ಮಾಡಿದ ಹೇಳಿಕೆ ನೀಡಬೇಕಾಯಿತು’ ಎಂದು ಶಾಲೆಯ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.

’ಪ್ರಭಾ ಅವರು ನಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಅನುಭವ ಹೊಂದಿದ್ದಾರೆ. ಅವರ ವಿರುದ್ಧ ಯಾವತ್ತೂ ಯಾವುದೇ ದೂರು ಬಂದಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಶಾಲೆಯ ವಿರುದ್ಧ ಆರೋಪ ಮಾಡಿ ಧ್ವನಿ ಮುದ್ರಿತ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟ ಮಹಿಳೆ ನಿಜಕ್ಕೂ ಶಾಲೆಯ ವಿದ್ಯಾರ್ಥಿಯ ಪೋಷಕಿಯೇ? ಅಲ್ಲವಾದರೆ ಅವರು ಈ ರೀತಿ ಆರೋಪ ಮಾಡಿದ ಉದ್ದೇಶವೇನು? ಅವರು ವಿದ್ಯಾರ್ಥಿಯ ಪೋಷಕಿಯೇ ಆಗಿದ್ದರೆ, ಈ ಘಟನೆ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ಲಿಖಿತ ದೂರನ್ನು ಏಕೆ ನೀಡಿಲ್ಲ’ ಎಂದೂ ಮುಕ್ಯ ಶಿಕ್ಷಕಿ ಪ್ರಶ್ನಿಸಿದ್ದಾರೆ.

‘ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುವ ಶಾಲೆಯ ಹೆಸರನ್ನು ಕೆಡಿಸುವ ಉದ್ದೇಶದಿಂದಲೇ ಷಡ್ಯಂತ್ರ ರೂಪಿಸಲಾಗಿದೆ. ಜಾತ್ಯತೀತ ಮನೋಧರ್ಮವನ್ನು ಹೊಂದಿರುವ ನಾವು ಸದಾ ಎಲ್ಲ ವಿದ್ಯಾರ್ಥಿಗಳನ್ನು ಆದರದಿಂದ ಕಾಣುತ್ತೇವೆ. ಜಾತಿ, ಮತ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ. ನಮ್ಮ ಶಾಲೆಯಲ್ಲಿ ಪ್ರತಿವರ್ಷ ದೀಪಾವಳಿ, ಕ್ರಿಸ್ಮಸ್‌ ಹಾಗೂ ಈದ್‌ ಮಿಲಾದ್‌ ಹಬ್ಬ ಆಚರಿಸಲಾಗುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT