ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಅನ್ನದ ಭಾಷೆಯಾಗಲಿ

ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹ
Last Updated 12 ಡಿಸೆಂಬರ್ 2018, 14:01 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ತುಳು ನಾಡಿನಲ್ಲಿ ತುಳು ಭಾಷೆಯನ್ನು ಅನ್ನದ ಭಾಷೆಯಾಗಲು ಹೋರಾಡುವ ಅಗತ್ಯವಿದೆ’ ಎಂದು ಸಾಹಿತಿ ಉದಯ್ ಧರ್ಮಸ್ಥಳ ಹೇಳಿದರು.‌

ಬೆಳ್ತಂಗಡಿ ಮಿನಿ ವಿಧಾನಸೌಧದ ಬಳಿ ತುಳುನಾಡ್ ಒಕ್ಕೂಟದ ವತಿಯಿಂದ ಬುಧವಾರ ‘ತುಳು ಭಾಷೆಯನ್ನು ದೇಶದ ಸಂವಿದಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು, ಕರ್ನಾಟಕ ರಾಜ್ಯದಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಆಡಳಿತ ಭಾಷೆಯಲ್ಲಿ ತುಳು ಭಾಷೆಯೂ ಒಂದು ಎಂದು ಪರಿಗಣಿಸಬೇಕು’ ಎಂಬ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

‘1956ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡನೆಯಲ್ಲಿ ತುಳುವಿಗೆ ಅನ್ಯಾಯವಾಗಿದ್ದು ಆದರೆ ಕೆಲವೊಂದು ರಾಷ್ಟ್ರಮಟ್ಟದ ಜನಪ್ರತಿನಿಧಿಗಳು ತುಳು ಭಾಷೆಗೆ ಮಾನ್ಯತೆ ಕೊಡಲು ಪ್ರಯತ್ನಿಸಿದರೂ ಕೆಲವೊಂದು ತಂತ್ರಗಳಿಂದ ತುಳುವಿಗೆ ಪ್ರಾತಿನಿದ್ಯ ಸಿಗುತ್ತಿಲ್ಲ. ತುಳು ಭಾಷೆಯನ್ನು ವಿಶ್ವ ಸಂಸ್ಥೆ, ಸಂಸತ್, ವಿಧಾನಸಭೆಯಲ್ಲಿ, ತಾಲ್ಲೂಕು ಕಚೇರಿಯಲ್ಲಿಯೂ ಬಳಸಬಹುದು ಇದಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಇದನ್ನು ತುಳುವರು ಮಾಡಬೇಕಾಗಿದೆ’ ಎಂದರು.

ಮಾಜಿ ಶಾಸಕ ಕೆ ವಸಂತ ಬಂಗೇರ ಮಾತನಾಡಿ, ‘ತುಳು ಭಾಷೆ ಮತ್ತು ಸಂಸ್ಕøತಿ ಅತ್ಯಂತ ಶ್ರೇಷ್ಠವಾಗಿದ್ದು ತುಳುವರ ಸಾಧನೆ ಇಡೀ ಜಗತ್ಪ್ರಸಿದ್ದವಾಗಿದೆ. ಈ ಭಾಷೆ 8ನೇ ಪರಿಚ್ಛೇದಕ್ಕೆ ಸೇರದಿರುವುದು ದುರಂತವಾಗಿದೆ. ವಿಧಾನಸೌಧದಲ್ಲಿ ತುಳುವಿನಲ್ಲಿ ಪ್ರಮಾಣವಚನ ಮಾಡಿದವ ನಾನೊಬ್ಬ ಮಾತ್ರ. ಸ್ಪೀಕರ್ ‘ಇದು ಯಾವ ಭಾಷೆ’ ಎಂದು ಕೇಳಿದಾಗ ‘ಇದು ತುಳು ಭಾಷೆ’ ಎಂದು ಕೇಳಿದರು. ಅದಕ್ಕೆ ಅವಕಾಶವಿಲ್ಲ ಎಂದು ಅವರು ನಿರಾಕರಿಸಿದರೂ ಇದು ನಮ್ಮ ತುಳುನಾಡಿನ ಜನರ ಭಾವನೆ ನಾನು ಅದರಲ್ಲೇ ಪ್ರಮಾಣವಚನ ಸ್ವೀಕರಿಸುತ್ತೇನೆ ನನ್ನ ಮೇಲೆ ಯಾವುದೇ ಕ್ರಮವನ್ನಾದರೂ ಕೈಗೊಳ್ಳಿ ಎಂದಿದ್ದೇನೆ. ಮುಂದೆಯೂ ತುಳು ಭಾಷೆ ಮಾನ್ಯತೆಗೆ ನಾನು ನಿಮ್ಮೊಂದಿಗಿದ್ದೇನೆ’ ಎಂದರು.

ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ‘ತುಳು ನಾಡಿನಲ್ಲಿ ಜನಿಸಿದ ಅನೇಕರ ಸಾಧನೆಗಳು ಇಡೀ ದೇಶವಿದೇಶಗಳಲ್ಲಿದೆ. ತುಳು ನಾಡಿನ ಆಚಾರವಿಚಾರಗಳು ಕೂಡ ಶ್ರೇಷ್ಠವಾದುದು. ತುಳು ಭಾಷೆಯ ಉಳಿಕೆ ಬೆಳೆಸುವಿಕೆಗೆ ತುಳುನಾಡಿನ ಸಮಸ್ತ ಜನರ ಹೋರಾಟ ಅಗತ್ಯವಿದೆ’ ಎಂದರು.

ತುಳುನಾಡ್ ಕೇಂದ್ರ ಸಮಿತಿಯ ಅಧ್ಯಕ್ಷ ಶೈಲೇಶ್ ಆರ್.ಜೆ ಪ್ರಸ್ತಾಪಿಸಿದರು. ಸಾಹಿತಿ ಉಗ್ಗಪ್ಪ, ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ, ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಎ., ವಕೀಲ ಧನಂಜಯ ರಾವ್, ಆಮಂತ್ರಣ ಪರಿವಾರದ ವಿಜಯಕುಮಾರ್ ಅಳದಂಗಡಿ, ತುಳುನಾಡ್ ಒಕ್ಕೂಟದ ಪದಾಧಿಕಾರಿಗಳಾದ ಪ್ರಶಾಂತ್ ಎಂ., ನವೀನ್, ಗೋಪಾಲ್ ಸಂಜಯನಗರ, ನವೀನ್ ಅಡ್ಕದಬೈಲು, ಬಿ.ಹೆಚ್ ರಾಜು, ಜನಾರ್ದನ ಬಂಗೇರ ಮೂಡಾಯಿಗುತ್ತು, ಜನಾರ್ದನ ಸುಧೆಮುಗೇರು, ವಿನ್ಸೆಂಟ್ ಸವಣಾಲು, ಪ್ರಸಾದ್ ಶೆಟ್ಟಿ ಏಣಿಂಜೆ, ಇನ್ನಿತರರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT