ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ದೋಣಿ ರಕ್ಷಣೆ

ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ
Published 29 ಸೆಪ್ಟೆಂಬರ್ 2023, 2:35 IST
Last Updated 29 ಸೆಪ್ಟೆಂಬರ್ 2023, 2:35 IST
ಅಕ್ಷರ ಗಾತ್ರ

ಮಂಗಳೂರು: ಎಂಜಿನ್‌ ಹದಗೆಟ್ಟು ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ತಮಿಳುನಾಡಿನ ಮೀನುಗಾರಿಕಾ ದೋಣಿಯನ್ನು ಕರಾವಳಿಯ ರಕ್ಷಣಾ ಪಡೆಯು (ಕರ್ನಾಟಕ) ತೀರಕ್ಕೆ ಎಳೆದು ತಂದಿದೆ. 

ಅರಬ್ಬೀ ಸಮುದ್ರದಲ್ಲಿ ಇಲ್ಲಿನ ತೀರದಿಂದ 36 ನಾಟಿಕಲ್‌ ಮೈಲ್‌ ದೂರದಲ್ಲಿ ‘ತಿರುಚೆಂಡೂರ್ ಮುರುಗನ್‌’ ಎಂಬ ಮೀನುಗಾರಿಕಾ ದೋಣಿ ಸೆ.24ರಂದು ಅಪಾಯಕ್ಕೆ ಸಿಲುಕಿತ್ತು. ಈ ಬಗ್ಗೆ ಮುಂಬೈನ ಸಾಗರ ರಕ್ಷಣೆ ಸಮನ್ವಯ ಕೇಂದ್ರಕ್ಕೆ (ಎಂಆರ್‌ಸಿಸಿ) ಮಾಹಿತಿ ಬಂದಿತ್ತು. ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಕೇಂದ್ರ ಕಚೇರಿಗೆ ಎಂಆರ್‌ಸಿಸಿಯು ಮಂಗಳವಾರ ಮಾಹಿತಿಯನ್ನು ರವಾನಿಸಿತ್ತು.  ಪರಸ್ಥಿತಿಯ ಗಂಭೀರತೆ ಅರಿತ ಕರಾವಳಿ ರಕ್ಷಣಾ ಪಡೆಯು ತಕ್ಷಣವೇ, ದೋಣಿಯನ್ನು ಎಳೆದು ತರುವ ಅಗತ್ಯ ಸಲಕರಣೆಗಳಿಂದ ಸನದ್ಧವಾಗಿದ್ದ ಸಿ–448 ಹಾಗೂ ಸಿ–446 ಇಂಟರ್‌ಸೆಪ್ಟರ್‌ ನೌಕೆಗಳನ್ನು ನೆರವಿಗೆ ಕಳುಹಿಸಿತ್ತು.

‘ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ದೋಣಿಯನ್ನು ತೀರಕ್ಕೆ ಎಳೆದು ತರಲಾಗಿದೆ. ಮೀನುಗಾರಿಕಾ ಇಲಾಖೆ ಹಾಗೂ ಅಪಾಯಕ್ಕೆ ಸಿಲುಕಿದ್ದ ದೋಣಿಯ ಮಾಲೀಕರನ್ನು ಸಂಪರ್ಕಿಸಿ ಮಾಹಿತಿ ಪಡೆದು ಪರಸ್ಪರ ಸಮನ್ವಯ ಸಾಧಿಸುವ ಮೂಲಕ ದೋಣಿಯಲ್ಲಿದ್ದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಸಮುದ್ರವು ಪ್ರಕ್ಷುಬ್ಧಗೊಂಡು ಪ್ರತಿಕೂಲ ವಾತಾವರಣ ನಿರ್ಮಾಣವಾಗಿದ್ದರಿಂದ ದೋಣಿಯನ್ನು ತೀರಕ್ಕೆ ಎಳೆದು ತರಲು ಸಮಸ್ಯೆ ಎದುರಾಗಿತ್ತು. ಸಿ–448 ಹಾಗೂ ಸಿ–446 ಇಂಟರ್‌ಸೆಪ್ಟರ್‌ ನೌಕೆಗಳು ದೋಣಿಯನ್ನು ಎಳೆದುತರುವಲ್ಲಿ ಯಶಸ್ವಿಯಾಗಿವೆ. ಗುರುವಾರ ಮುಂಜಾನೆ 1.50ಕ್ಕೆ ದೋಣಿಯು ನವಮಂಗಳೂರು ಬಂದರನ್ನು ತಲುಪಿದೆ’ ಎಂದು ಕರಾವಳಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕಡಲಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಮೀನುಗಾರರನ್ನು ಬುಧವಾರ ರಕ್ಷಣೆ ಮಾಡಿದ ಕರಾವಳಿ ರಕ್ಷಣಾ ಪಡೆ, ಅಪಾಯಕ್ಕೆ ಸಿಲುಕಿದ್ದ ಮತ್ತೊಂದು ದೋಣಿಯನ್ನೂ ತೀರಕ್ಕೆ ಎಳೆದು ತರುವಲ್ಲಿ ಯಶಸ್ವಿಯಾಗಿದೆ. ಕಡಲಿನಲ್ಲಿ  ತುರ್ತು ಸಂದರ್ಭ ಎದುರಾದಾಗ ತ್ವರಿತವಾಗಿ ಸ್ಪಂದಿಸುವ  ಕರಾವಳಿ ರಕ್ಷಣಾ ಪಡೆಯ ಸಾಮರ್ಥ್ಯಕ್ಕೆ ಇದು ಕನ್ನಡಿ ಹಿಡಿದಿದೆ. ಮೀನುಗಾರರ ಸುರಕ್ಷತೆಗೆ ಎಷ್ಟು ಮಹತ್ವ ನೀಡಲಾಗುತ್ತದೆ ಎಂಬುದಕ್ಕೂ ಇದು ಸಾಕ್ಷಿ’ ಎಂದು ಕರಾವಳಿ ರಕ್ಷಣಾ ಪಡೆಯ ಜಿಲ್ಲಾ ಕಮಾಂಡರ್‌ ಡಿಐಜಿ ಪಿ.ಕೆ.ಮಿಶ್ರಾ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT