ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕು ದಿಟ್ಟ ಹೆಜ್ಜೆ

ದಕ್ಷಿಣ ಕನ್ನಡ: ಬೀಚ್‌, ಟೆಂಪಲ್‌ ಟೂರಿಸಂಗೆ ಕೋವಿಡ್‌ ಪೆಟ್ಟು; ನೆಲಕಚ್ಚಿದ ಪ್ರವಾಸೋದ್ಯಮ
Last Updated 27 ಸೆಪ್ಟೆಂಬರ್ 2021, 6:02 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಭೂ ಪ್ರದೇಶವು ಅರಬ್ಬಿ ಸಮುದ್ರ ಹಾಗೂ ಪಶ್ಚಿಮ ಘಟ್ಟದ ಬೆಟ್ಟಗಳ ಸಾಲಿನಲ್ಲಿ ಹರಡಿಕೊಂಡಿದೆ. ಕಣ್ಣು ಹಾಯಿಸಿದಷ್ಟು ರಮಣೀಯ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿ ರಾಚುತ್ತವೆ. ಧಾರ್ಮಿಕ ಹಾಗೂ ಬೀಚ್‌ ಟೂರಿಸಂಗೆ ಸಾಕಷ್ಟು ಅವಕಾಶಗಳ ಜಿಲ್ಲೆಯಲ್ಲಿವೆ. ಆದರೆ, ಇಲ್ಲಿಯ ಅನೇಕ ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣದೆ, ಪ್ರವಾಸಿಗರಿಂದ ದೂರ ಉಳಿದಿವೆ. ಇಂಥ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರನ್ನು ಆಕರ್ಷಿಸುವ ಕೆಲಸವಾದರೆ, ಜಿಲ್ಲೆಯ ಆರ್ಥಿಕತೆಗೆ ಇನ್ನಷ್ಟು ಚೈತನ್ಯ ತುಂಬುದರ ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನೂ ಹೆಚ್ಚಿಸಬಹುದಾಗಿದೆ.

ಕೋವಿಡ್‌ನಿಂದಾಗಿ ನೆಲಕಚ್ಚಿದ್ದ ಜಿಲ್ಲೆಯ ಪ್ರವಾಸೋದ್ಯಮ ಈಗ ನಿಧಾನವಾಗಿ ಚೇತರಿಕೆ ಹಾದಿ ಹಿಡಿಯುತ್ತಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇವಸ್ಥಾನ, ಮೂಡುಬಿದಿರೆ ಸಾವಿರಕಂಬ ಬಸದಿ, ಜೈನಮಠ, ಪಿಲಿಕುಳ ನಿಸರ್ಗಧಾಮ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಕೋವಿಡ್‌ ಕಾರಣದಿಂದ ಜನರ ಭೇಟಿ ಕಡಿಮೆಯಾಗಿ, ದೇಗುಲಗಳ ಆದಾಯ ಕಳೆದ ಒಂದೂವರೆ ವರ್ಷದಿಂದ ಕಡಿಮೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 150ಕ್ಕೂ ಅಧಿಕ ಟ್ರಾವೆಲ್‌ ಏಜೆನ್ಸಿಗಳು, 1,500 ಪ್ರವಾಸಿ ಟ್ಯಾಕ್ಸಿಗಳಿದ್ದು, ಎಲ್ಲರ ಆದಾಯಕ್ಕೂ ಕಲ್ಲು ಬಿದ್ದಿತ್ತು. ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ವರ್ಷಗಳ ಹಿಂದೆ 2 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಬಾರಿ ಅದರ ಅರ್ಧದಷ್ಟು ಜನರೂ ಭೇಟಿ ನೀಡಿಲ್ಲ. ಎರಡು ವರ್ಷದಿಂದ ಯಾವುದೇ ಪ್ರವಾಸಿ ಹಡಗುಗಳು ನವ ಮಂಗಳೂರು ಬಂದರಿಗೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು.

‘ಸಸಿಹಿತ್ಲು ಹಾಗೂ ತಣ್ಣೀರುಬಾವಿ ಬೀಚ್‍ನಲ್ಲಿ ಸರ್ಕಾರಿ ಸರ್ಫಿಂಗ್ ಸ್ಕೂಲ್ ಆರಂಭಿಸುವ ಪ್ರಸ್ತಾವ ಇದೆ. ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಈಗಾಗಲೇ ₹ 5 ಕೋಟಿ ಬಿಡುಗಡೆಯಾಗಿದೆ. ಆದರೆ, ಇಲ್ಲಿ ಕಡಲ್ಕೊರೆತವು ಮೂಲ ಸೌಕರ್ಯ ಸೃಷ್ಟಿಗೆ ಅಡ್ಡಿಯಾಗುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಜಂಗಲ್ ಲಾಡ್ಜ್ ಮಾದರಿಯಲ್ಲಿ ಅಲ್ಲಿ ತಾತ್ಕಾಲಿಕ ಸಾಂಪ್ರದಾಯಿಕ ಗುಡಿಸಲುಗಳ ನಿರ್ಮಾಣ, ಚಾವಣಿ ರಹಿತ ರೆಸ್ಟೋರೆಂಟ್‍ ನಿರ್ಮಾಣ ಮಾಡುವ ಯೋಜನೆಯೂ ಜಿಲ್ಲಾಡಳಿತಕ್ಕೆ ಇದೆ’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಬೀಚ್‌ಗಳು ಕಡಲ್ಕೊರತದಿಂದಾಗಿ ತಮ್ಮ ನೈಜ ಸೌಂದರ್ಯಗಳನ್ನು ಕಳೆದುಕೊಳ್ಳುತ್ತಿವೆ. ಕಡಲ್ಕೊರತಕ್ಕೆ ಕಲ್ಲು ಹಾಕುವುದನ್ನು ಮೊದಲ ಸ್ಥಗಿತಗೊಳಿಸಬೇಕು. ಇದನ್ನು ತಡೆಯುವುದಕ್ಕೆ ವೈಜ್ಞಾನಿಕ ತಂತ್ರಜ್ಞಾನ ಬಳಕೆ ಮಾಡಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ ಬೀಚ್‌ ಕ್ರೀಡೆಗಳು ಸ್ಥಗಿತಗೊಂಡಿವೆ. ಬೀಚ್‌ಗಳ ಸೌಂದರ್ಯ ಹೆಚ್ಚಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಆದಾಯ ಹಾಗೂ ಉದ್ಯೋಗದ ಮೂಲ ಹೆಚ್ಚಿಸುವ ಪ್ರವಾಸೋದ್ಯಮಕ್ಕೆ ಮತ್ತಷ್ಟು ವೇಗ ನೀಡಬೇಕು.ಬೀಚ್ ಉತ್ಸವಗಳನ್ನು ಸಂಘಟಿಸುವ ಮೂಲಕ ಪ್ರವಾಸಿಗರಿಗೆ ಹೊಸ ಅನುಭವ ನೀಡಬೇಕು. ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮೂಲಕ ಸ್ವಾವಲಂಬಿ ಬೀಚ್‌ಗಳನ್ನು ರೂಪಿಸಬೇಕು ಎಂದು ಯತೀಶ್ ಬೈಕಂಪಾಡಿ ಹೇಳಿದರು.

‘ಮಂಗಳೂರಿನಿಂದ ಕುಕ್ಕೆ, ಧರ್ಮಸ್ಥಳ ಪ್ರವಾಸಿಗರಿಗಾಗಿಯೇ ಸರ್ಕಾರಿ ಹೈಟೆಕ್‌ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಸ್ಥಳೀಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರನ್ನು ಸೆಳೆಯುವುದುಕ್ಕೆ ಪ್ಯಾಕೇಜ್‌ ಮಾದರಿಯಲ್ಲಿ ಸೌಲಭ್ಯ ಕಲ್ಪಸಬೇಕು. ಸ್ಥಳೀಯ ಬೀಚ್‌ ಹಾಗೂ ಟೆಂಪಲ್‌ಗಳ ಕೈಪಿಡಿ ತಯಾರಿಸುವುದು ಹಾಗೂ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು. ಪ್ರವಾಸಿಗರ ಅನುಕೂಲಕ್ಕೆ ಯಾತ್ರಿನಿವಾಸಗಳನ್ನು ಆರಂಭಿಸಬೇಕು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸ್ಥಳೀಯ ಕಚೇರಿ ಆರಂಭಿಸಬೇಕು’ ಎಂದು ಪ್ರವಾಸಿಗ ರಾಜೇಶ್‌ ಆರ್‌ ಹೇಳಿದರು.

‘ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಷಿಸಲು ಹೆಜ್ಜೆ’

‘ತಣ್ಣೀರುಬಾವಿ, ಪಣಂಬೂರು ಸೇರಿದಂತೆ ಜಿಲ್ಲೆಯ ಬೀಚ್‍ಗಳಲ್ಲಿ ಮೂಲ ಸೌಕರ್ಯದೊಂದಿಗೆ ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ಕ್ರಮ ರೂಪಿಸಲಾಗಿದೆ. ಪ್ರವಾಸಿಗರಿಗೆ ಮಂಗಳೂರಿನ ಒಳಗಡೆ ಇರುವ ಬೀಚ್‍ಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ, ಬೀಚ್‍ಗಳಿಗೆ ಬರುವವರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ ಜತೆಗೆ ಹೋಟೆಲ್‌ ಮಾದರಿ ಊಟೋಪಚಾರ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದರು.

‘ಬೋಟಿಂಗ್‌ಗೆ ಒತ್ತು’

‘ಜಿಲ್ಲೆಯ ನದಿದಂಡೆಗಳು ಮತ್ತು ಕಡಲ ತೀರಗಳಲ್ಲಿ ಪ್ರವಾಸೋದ್ಯಮ ಆಕರ್ಷಣೆಗೆ ಒತ್ತು ನೀಡಲಾಗುತ್ತದೆ. ಕೋವಿಡ್‌ನಿಂದಾಗಿ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ. ವ್ಯಾಪಾರಕ್ಕೆ ಹಿನ್ನಡೆ ಆಗಿದೆ. ಫಲ್ಗುಣಿ, ನೇತ್ರಾವತಿ, ಶಾಂಭವಿ ನದಿಗಳ ತಟದಲ್ಲಿ ಬೋಟಿಂಗ್‌ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುತ್ತದೆ.

ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ತಣ್ಣೀರಬಾವಿ,
ಸುರತ್ಕಲ್‌ ಬೀಚ್‌ಗಳನ್ನು ಬ್ಲೂ ಫ್ಲ್ಯಾಗ್‌ ಅಡಿಯಲ್ಲಿ ಅಭಿವೃದ್ಧಿಗೆ
ಸೇರ್ಪಡೆ ಮಾಡಲಾಗಿದೆ. ಕಡಲ್ಕೊರೆತ ಆಗದಂತೆ
ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೂಡ ಚಿಂತನೆ ನಡೆಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎನ್‌. ಮಾಣಿಕ್ಯ ತಿಳಿಸಿದರು.

ಪಿಲಿಕುಳ ನಿಸರ್ಗಧಾಮ

ಇದು ಪ್ರವಾಸಿಗರ ಜನಪ್ರಿಯ ಪಿಕ್ನಿಕ್ ಸ್ಪಾಟ್‌. ಹುಲಿ, ಚಿರತೆ, ಕರಡಿ ಮತ್ತು ವಿವಿಧ ಜಾತಿಯ ವನ್ಯಜೀವಿ, ಪ್ರಾಣಿಗಳನ್ನು ಕಣ್ಣು ತುಂಬಿಕೊಳ್ಳಬಹುದು. ಬೋಟಾನಿಕಲ್ ಗಾರ್ಡನ್, ಮೃಗಾಲಯ ಮತ್ತು ಗಾಲ್ಫ್‌ ಕೋರ್ಟ್‌ ಇದೆ. ಪಿಲಿಕುಳ ನಿಸರ್ಗಧಾಮವು 82 ಎಕರೆಗಳಷ್ಟು ವಿಸ್ತಾರ ಹೊಂದಿದೆ.

ಪೂನಾದಿಂದ 13 ಮಂದಿ ತಂಡ

ವಿಶ್ವ ಪ್ರವಾಸೋದ್ಯಮ ದಿನದ ಮುನ್ನಾದಿನ ಸಂಜೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪೂನಾದಿಂದ 13 ಜನರ ಪ್ರವಾಸಿಗರ ತಂಡವೊಂದು ಖಾಸಗಿ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದಿದೆ. ತಂಡವನ್ನು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸ್ವಾಗತಿಸಲಾಗಿದೆ.

ಈ ತಂಡ ಸೋಮವಾರ ಮೂಡುಬಿದಿರೆಯ ಸಾವಿರ ಕಂಬದಬಸದಿ, ಕಟೀಲು, ಕುಕ್ಕೆ, ಧರ್ಮಸ್ಥಳ ಹಾಗೂ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ ನೀಡಲಿದೆ ಎಂದು ಯತೀಶ್‌ ಬೈಂಕಪಾಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT