ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಉದ್ದೇಶಕ್ಕೆ ಪ್ರತಿಭಟನೆ: ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ

Last Updated 15 ಜುಲೈ 2021, 3:45 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ಕಾವಳಮೂಡೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಪ್ರತ್ಯೇಕ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸಲು ಬಂದಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ಮತ್ತು ತಳ್ಳಾಟ ನಡೆಯಿತು.

ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು.ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಮತ್ತು ಮನೆ ತೆರಿಗೆ ಏರಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು.

ಗ್ರಾಮ ಪಂಚಾಯಿತಿ ಕಚೇರಿ ಮತ್ತು ಸಹಕಾರಿ ಸಂಘ ಒಂದೇ ಆವರಣದೊಳಗೆ ಇದೆ. ಇಲ್ಲಿ ಎರಡೂಪಕ್ಷಗಳ ಕಾರ್ಯಕರ್ತರು ಜಮಾಯಿಸಿದ ಕಾರಣ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಯಿತು.

ಬಿಜೆಪಿ ಕಾರ್ಯಕರ್ತರ ಗುಂಪಿನಲ್ಲಿಆರ್‌ಟಿಐ ಕಾರ್ಯಕರ್ತ ಪದ್ಮನಾಭ ಮಯ್ಯ ಕಾಣಿಸಿಕೊಂಡಿದ್ದು ಕಾಂಗ್ರೆಸ್ಕಾರ್ಯಕರ್ತರನ್ನು ಕೆರಳಿಸಿತು. ಇದನ್ನುಪ್ರಶ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು.

ಈ ನಡುವೆ ಪದ್ಮನಾಭ ಮಯ್ಯ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಯಿತು. ಇದಕ್ಕಾಗಿ ಪರಸ್ಪರ ವಾಗ್ವಾದ ನಡೆಯಿತು. ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿದರು.

ಪುಂಜಾಲಕಟ್ಟೆ ಪೊಲೀಸ್ ಠಾಣೆ ಎಸ್‌ಐ ಸೌಮ್ಯಾ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.ಲಾಠಿ ಬೀಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು. ಪದ್ಮನಾಭ ಮಯ್ಯ ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಾದ ಸದಾನಂದ ಶೆಟ್ಟಿ, ಬಿ.ಆರ್.ಅಂಚನ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸಿದರು.

ಕಾವಳಮೂಡೂರು ಸೊಸೈಟಿ ಅಧ್ಯಕ್ಷ ಬಿ. ಪದ್ಮಶೇಖರ್ ಜೈನ್, ಬಿಜೆಪಿ ಯುವಮೋರ್ಚಾ ಘಟಕದ ಕಾರ್ಯದರ್ಶಿ ಸುದರ್ಶನ ಬಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಪ್ರಮುಖರಾದ‌ ರಮಾನಾಥ ರಾಯಿ, ಯಶೋಧರ ಕರ್ಬೆಟ್ಟು, ಸೀತಾರಾಮ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ದೇವಾಡಿಗ, ಉಪಾಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮೋದ್ ಕುಮಾರ್, ಹೇಮಂತ್ ಕುಮಾರ್ ದಯಾನಂದ ಶೆಟ್ಟಿ, ಕೃಷ್ಣ ನಾಯ್ಕ, ಪುರುಷೋತ್ತಮ ಕೊಂಬೇಲ್, ಚಂದ್ರಹಾಸ, ಸತೀಶ್ ಪೂಜಾರಿ, ಸಂತೋಷ್ ಪೂಂಜಾ, ಯಾಕುಬ್ ಸಾಹೇಬ್, ಪುತ್ತುಮೋನು, ಇಸ್ಮಾಯಿಲ್ ಸಿದ್ದಿಕ್, ಶಿವರಾಮ ಶೆಟ್ಟಿ, ಶರಾಫತ್, ಮಸೂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT