ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಯಾಗು, ಉದ್ಯೋಗ ನೀಡು: ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಉದ್ಘಾಟನೆ

Last Updated 11 ಮೇ 2022, 16:22 IST
ಅಕ್ಷರ ಗಾತ್ರ

ಮಂಗಳೂರು: ಯುವ ಜನತೆ ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ನೆರವು ನೀಡಲು ಕೈಗಾರಿಕಾ ಇಲಾಖೆಯು ನಗರದಲ್ಲಿ ಮೇ 12ರಂದು ಕಾರ್ಯಾಗಾರ ಆಯೋಜಿಸಿದೆ ಎಂದು ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಟಿಎಂಎ ಪೈ ಇಂಟರ್‌ ನ್ಯಾಷನಲ್‌ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಿರುವ ಕಾರ್ಯಾಗಾರ ಹಾಗೂ ಕೈಗಾರಿಕಾ ಅದಾಲತ್‌ ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ್‌ ನಿರಾಣಿ ಉದ್ಘಾಟಿಸುವರು ಎಂದರು.

ಬೆಂಗಳೂರು, ಕಲಬುರಗಿ, ಬೆಳಗಾವಿ ಹಾಗೂ ಮೈಸೂರಿನಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಸಚಿವರ ನೇತೃತ್ವದಲ್ಲಿ ಈಗ ಮಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ಹಂತದಲ್ಲಿ ಬೆಂಗಳೂರಿನ ಕಂದಾಯ ವಿಭಾಗ 2ರಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.

ಮೇ 12ರ ಕಾರ್ಯಕ್ರಮದಲ್ಲಿ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಉದ್ಯಮ, ಸಾಲ ಸೌಲಭ್ಯ, ಯಾವ ಕ್ಷೇತ್ರದಲ್ಲಿ ಹೂಡಿಕೆಗೆ ಅವಕಾಶ ಇದೆ ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.ಪುತ್ತೂರು ಹಾಗೂ ಉಡುಪಿಯ ವಿದ್ಯಾರ್ಥಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಅದಕ್ಕಾಗಿ ಪ್ರತಿ ಜಿಲ್ಲೆಯ 3-4 ಕೇಂದ್ರಗಳಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದರಲ್ಲಿ 50 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ನಂತರ 40-50 ತಾಸಿನ ಆನ್‌ಲೈನ್‌ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಲಾಗುತ್ತದೆ. ಆಯ್ದ 10 ಸಾವಿರ ಆಸಕ್ತರಿಗೆ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಅಥವಾ ಐಬಿಎಂ, ವಿಪ್ರೋ, ಇನ್ಫೊಸಿಸ್‌ ಕಂಪನಿಯಲ್ಲಿ ಮೂರು ದಿನಗಳ ತರಬೇತಿ ಆಯೋಜಿಸಲಾಗುತ್ತದೆ. ಅಂತಿಮ ಹಂತದವರೆಗೆ ಆಸಕ್ತಿ ಕಾಯ್ದುಕೊಳ್ಳುವ 2,000 ಮಂದಿಗೆ ಮಾರ್ಗದರ್ಶಕರ ಜತೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಪೈಕಿ ಕನಿಷ್ಠ 1,000 ಜನರಾದರೂ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ ದಾಸ್‌ ನಾಯಕ್‌ ಹಾಗೂ ಟೆಕ್ಸಾಕ್‌ ಸಿಇಒ ರಮಾನಂದ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT