ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ: ತಗ್ಗು ಪ್ರದೇಶ ಜಲಾವೃತ, ರಕ್ಷಣಾ ತಂಡ ಸನ್ನದ್ಧ

ಉಪ್ಪಿನಂಗಡಿ: ತುಂಬಿ ಹರಿಯಲಾರಂಭಿಸಿದ ಕುಮಾರಧಾರಾ, ನೇತ್ರಾವತಿ
Published 28 ಜೂನ್ 2024, 5:32 IST
Last Updated 28 ಜೂನ್ 2024, 5:32 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿ ಹರಿಯುತ್ತಿರುವ ಕುಮಾರಧಾರಾ ಮತ್ತು ನೇತ್ರಾವತಿ ಬುಧವಾರ ಸಂಜೆಯ ಬಳಿಕ ತುಂಬಿ ಹರಿಯಲಾರಂಭಿಸಿವೆ. ನದಿ ಪ್ರವಾಹದ ನೀರು ನದಿ ಪಾತ್ರದಿಂದ ಹೊರ ಬಂದು ತೋಟಗಳಿಗೂ ನುಗ್ಗಿದೆ. ನದಿ ಪಾತ್ರದ ಸಮೀಪದ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಹವಾಮಾನ ಇಲಾಖೆಯ ಪ್ರಕಾರ ಬುಧವಾರ ಉಪ್ಪಿನಂಗಡಿಯಲ್ಲಿ ಈ ವರ್ಷದ ದಾಖಲೆ ಮಳೆ 14 ಸೆಂ.ಮೀ. ಸುರಿದಿದೆ. ಮಂಗಳವಾರ 9 ಸೆ.ಮೀ., ಸೋಮವಾರ 5 ಸೆ.ಮೀ. ಮಳೆ ಆಗಿತ್ತು. ಕುಮಾರಧಾರಾ ಮತ್ತು ನೇತ್ರಾವತಿ ನದಿ ಸ್ನಾನ ಘಟ್ಟದ ಬಳಿ ಶಂಭೂರು ಡ್ಯಾಂನವರು ಅಳವಡಿಸಿರುವ ಅಳತೆ ಮಾಪನದಲ್ಲಿ ದಾಖಲಾಗಿರುವ ಪ್ರಕಾರ ನದಿ ಸಮುದ್ರ ಮಟ್ಟದಿಂದ 27 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಇಲ್ಲಿನ ಅಪಾಯದ ಮಟ್ಟ 31 ಮೀಟರ್ ಆಗಿದೆ. (ಬಸ್ ನಿಲ್ದಾಣದ ಹಿಂಭಾಗದಲ್ಲಿ ಕಂದಾಯ ಇಲಾಖೆಯವರು ಹಾಕಿರುವ ಮಾಪನ ಪ್ರಕಾರ ಇಲ್ಲಿ ಅದೇ ಸಮಯದಲ್ಲಿ 21 ಮೀಟರ್ ದಾಖಲಾಗಿತ್ತು. ಅಪಾಯದ ಮಟ್ಟ 26.5 ಆಗಿದೆ).

ತಗ್ಗು ಪ್ರದೇಶಗಳು ಜಲಾವೃತ: ನೇತ್ರಾವತಿ ನದಿ ಪಾತ್ರದಲ್ಲಿರುವ ಪಂಜಾಲ, ಮಠ, ಹಳೇಗೇಟು, ಕೂಟೇಲು ಪ್ರದೇಶದಲ್ಲಿ ಪ್ರವಾಹದ ನೀರು ನದಿ ಪಾತ್ರದಿಂದ ಹೊರಗೆ ಹರಿಯುತ್ತಿದೆ. ಕೆಮ್ಮಾರ ಕಡೆಯಿಂದ ಬರುವ ತೋಡಿನ ನೀರನ್ನು ಕೂಟೇಲು ಸೇತುವೆ ಬಳಿ ನೇತ್ರಾವತಿ ನದಿ ನೀರು ತಡೆದಿದೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಉಕ್ಕಿ ಹರಿಯುತ್ತಿರುವ ಪ್ರವಾಹದ ನೀರು ಅಡೇಕಲ್, ಕುರ್ಪೇಲು, ನಟ್ಟಿಬೈಲು, ಇನ್ನೊಂದು ಭಾಗದಲ್ಲಿ ನೆಕ್ಕಿಲಾಡಿ, ಪಂಪುಹೌಸ್, ದರ್ಬೆ, ಮೈಂದಡ್ಕದ ತೋಟಗಳಲ್ಲಿ ನೀರು ನಿಂತಿದೆ.

17 ಮೆಟ್ಟಿಲು ಮುಳುಗಡೆ: ಬುಧವಾರ ಮಧ್ಯಾಹ್ನದ ಬಳಿಕ ಎರಡೂ ನದಿಯಲ್ಲಿ ಒಂದೇ ರೀತಿಯಲ್ಲಿ ನೀರು ಏರಿಕೆಯಾಗಿದ್ದು, ಪ್ರವಾಹದ ರೀತಿಯಲ್ಲಿ ಹರಿದು ಬಂದಿತ್ತು. ನೇತ್ರಾವತಿ ನದಿ ಪಾತ್ರದಲ್ಲಿರುವ ಸಹಸ್ರಲಿಂಗೇಶ್ವರ ದೇವಸ್ಥಾನದ ಸ್ನಾನಘಟ್ಟದ 36 ಮೆಟ್ಟಿಲುಗಳ ಪೈಕಿ ಸಂಜೆಯ ಹೊತ್ತಿಗೆ 18 ಮೆಟ್ಟಿಲು ಮುಳುಗಡೆಯಾಗಿತ್ತು. ಆ ಬಳಿಕ ಪ್ರವಾಹ ಕಡಿಮೆ ಆಗುತ್ತಾ ಬಂದು ಗುರುವಾರ ಬೆಳಿಗ್ಗೆ 17 ಮೆಟ್ಟಿಲು ಮುಳುಗಡೆ ಆಗಿತ್ತು. ಆ ಬಳಿಕ ಮಧ್ಯಾಹ್ನ ಹೊತ್ತಿಗೆ ಮತ್ತೆ ನದಿ ನೀರು ಏರಿಕೆಯಾಗಿ 21 ಮೆಟ್ಟಿಲು ಮುಳುಗಡೆಯಾಗಿ 15 ಮೆಟ್ಟಿಲು ಕಾಣುತ್ತಿತ್ತು. ರಾತ್ರಿ 7 ಗಂಟೆಯ ಹೊತ್ತಿಗೆ ನೀರಿನ ಪ್ರವಾಹ ಮತ್ತೆ ಕಡಿಮೆಯಾಗಿದ್ದು, 19 ಮೆಟ್ಟಿಲು ಮುಳುಗಡೆಯಾಗಿ, 17 ಮೆಟ್ಟಿಲು ಕಾಣುವಂತಿತ್ತು.

ರಕ್ಷಣಾ ತಂಡ ಸನ್ನದ್ಧ: ನದಿಯಲ್ಲಿ ನೀರಿನ ಪ್ರವಾಹ ಏರುತ್ತಿದ್ದಂತೆ ತಗ್ಗು ಪ್ರದೇಶಗಳು ಜಲಾವೃತ ಆಗುವ ಸಂದರ್ಭದಲ್ಲಿ ಸಂಭವನೀಯ ಅವಘಡವನ್ನು ತಪ್ಪಿಸಲು ನುರಿತ ಈಜುಗಾರರು, ವಿದ್ಯುತ್ ಟೆಕ್ನಿಷಿಯನ್ ಸೇರಿದಂತೆ 8 ಜನರನ್ನು ಒಳಗೊಂಡ ಗೃಹರಕ್ಷಕ ದಳದ ಪ್ರಾಕೃತಿಕ ವಿಕೋಪ ರಕ್ಷಣಾ ತಂಡ ಸನ್ನದ್ಧವಾಗಿದೆ. ರಬ್ಬರ್ ಬೋಟ್ ಅನ್ನು ನದಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಉಪ್ಪಿನಂಗಡಿಯಲ್ಲಿ ಹರಿಯುವ ನೇತ್ರಾವತಿ ನದಿ ಪಾತ್ರದಿಂದ ಹೊರಗೆ ಹರಿಯುತ್ತಿರುವುದು
ಉಪ್ಪಿನಂಗಡಿಯಲ್ಲಿ ಹರಿಯುವ ನೇತ್ರಾವತಿ ನದಿ ಪಾತ್ರದಿಂದ ಹೊರಗೆ ಹರಿಯುತ್ತಿರುವುದು
ಉಪ್ಪಿನಂಗಡಿಯಲ್ಲಿ ನದಿ ತುಂಬಿ ಹರಿಯುತ್ತಿರುವುದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ತಂಡದವರು ದೋಣಿಯನ್ನು ನದಿಯಲ್ಲಿ ಸನ್ನದ್ಧಗೊಳಿಸಿ ನಿಲ್ಲಿಸಿದರು
ಉಪ್ಪಿನಂಗಡಿಯಲ್ಲಿ ನದಿ ತುಂಬಿ ಹರಿಯುತ್ತಿರುವುದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ತಂಡದವರು ದೋಣಿಯನ್ನು ನದಿಯಲ್ಲಿ ಸನ್ನದ್ಧಗೊಳಿಸಿ ನಿಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT