ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್: ಬಳಕೆ ಅನಾಮತ್ತು, ಜೀವಕ್ಕೆ ಆಪತ್ತು

l ಕೋವಿಡ್ ಬಳಿಕ ಹೆಚ್ಚಾದ ಬಳಕೆ l ಮನುಷ್ಯರ ಜೊತೆ ಪ್ರಾಣಿ, ಪಕ್ಷಿ, ಜಲಚರಗಳಿಗೂ ಬಂದ ಕಂಟಕ l ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ
Last Updated 4 ಜುಲೈ 2022, 4:23 IST
ಅಕ್ಷರ ಗಾತ್ರ

ಮಂಗಳೂರು: ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಆದರೂ, ಇದರ ಬಳಕೆ ಹೆಚ್ಚಳವು ‘ಬುದ್ಧಿವಂತರ ಜಿಲ್ಲೆ’ಯ ಜನತೆ ಮಾತ್ರವಲ್ಲ, ವಾಯು, ನೆಲ, ಜಲವನ್ನೂ ಬಾಧಿಸುತ್ತಿದೆ. ಸಕಲ ಜೀವವೈವಿಧ್ಯಗಳಿಗೂ ಕಂಟಕವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿನಿತ್ಯ 500 ಟನ್‌ಗೂ ಅಧಿಕ ಕಸ ಸಂಗ್ರಹಗೊಳ್ಳುತ್ತಿದೆ. ಮಂಗಳೂರಿನಲ್ಲೇ 340 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದ್ದು, ಈ ಪೈಕಿ ಶೇ 40ರಷ್ಟು ಒಣ ಕಸ. ಇದರಲ್ಲಿ ಶೇ 10ರಷ್ಟು ಪ್ಲಾಸ್ಟಿಕ್‌.

ಲೆಕ್ಕಕ್ಕೆ ಸಿಗದಷ್ಟು: ‘ನಗರದಲ್ಲಿ ಪ್ರತಿನಿತ್ಯ 15 ಟನ್‌ನಷ್ಟು ಪ್ಲಾಸ್ಟಿಕ್ ಕಸವು ವಿಲೇವಾರಿ ಘಟಕಕ್ಕೆ ಬರುತ್ತಿದೆ. ಮನೆ–ವಾಣಿಜ್ಯ ಸಂಕೀರ್ಣ, ಕೈಗಾರಿಕೆಗಳಿಂದ ಸಂಗ್ರಹಗೊಂಡ ಕಸದಲ್ಲಿನ ಎಲ್ಲ ಪ್ಲಾಸ್ಟಿಕ್‌ ವಿಲೇವಾರಿ ಘಟಕಕ್ಕೆ ಬರುವುದಿಲ್ಲ. ಅಧಿಕ ಮೈಕ್ರಾನ್ ಪ್ಲಾಸ್ಟಿಕ್‌ಗಳನ್ನು ಪೌರಕಾರ್ಮಿಕರು ನೇರವಾಗಿ ಗುಜರಿ ವ್ಯಾಪಾರಿಗಳಿಗೆ ನೀಡುತ್ತಾರೆ. ಹೀಗಾಗಿ ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಒಟ್ಟು ಪ್ಲಾಸ್ಟಿಕ್ ಕಸದ ಪ್ರಮಾಣವು ಬಹಳಷ್ಟಿದೆ’ ಎಂದು ಪಾಲಿಕೆ ಮೂಲಗಳು ದೃಢಪಡಿಸುತ್ತವೆ.

‘ಕೋವಿಡ್ ಲಾಕ್‌ಡೌನ್‌ ಬಳಿಕ ಶೇ 2ರಷ್ಟು ಪ್ಲಾಸ್ಟಿಕ್‌ ಕಸ ಹೆಚ್ಚಾಗಿದ್ದು, ಅಂದಾಜು ಎರಡು ಟನ್‌ ಇರಬಹುದು’ ಎನ್ನುತ್ತಾರೆ ಪಾಲಿಕೆಯ ಪರಿಸರ ಕಾರ್ಯ ನಿರ್ವಾಹಕ ಎಂಜಿನಿಯರ್ ದೀಪ್ತಿ.

ವಾರ್ಷಿಕ ಸುಮಾರು 2,762 ಟನ್‌ ಪ್ಲಾಸ್ಟಿಕ್‌ ಸಮುದ್ರ ಸೇರುತ್ತಿವೆ ಎಂದು ಅಧ್ಯಯನ ವರದಿಯೊಂದು ಉಲ್ಲೇಖಿಸಿದೆ.

‘ಮುಂಗಾರಿನಲ್ಲಿ ನದಿ ಮೂಲಕ ಪ್ಲಾಸ್ಟಿಕ್ ಕಸವು ಸಮುದ್ರದ ಒಡಲಿಗೆ ಸೇರುತ್ತಿದೆ. ಇದನ್ನು ಸಮುದ್ರವು ಸುದೀರ್ಘ ಸಮಯ ಇಟ್ಟುಕೊಳ್ಳುವುದಿಲ್ಲ. ತೀರಕ್ಕೆ ತಂದು ಹಾಕುತ್ತದೆ. ಆಗಾಗ್ಗೆ ಇದನ್ನು ತೆರವು ಮಾಡಲಾಗುತ್ತದೆ’ ಎಂದು ಮುಖಂಡ ಯತೀಶ್ ಬೈಕಂಪಾಡಿ ತಿಳಿಸಿದರು.

ಕಂಟಕ: ‘ಪ್ಲಾಸ್ಟಿಕ್‌ನಿಂದಾಗಿ ಗೋವುಗಳು ಸಾವನ್ನಪ್ಪುವ ಪ್ರಕರಣವೂ ಜಿಲ್ಲೆಯಲ್ಲಿ ಹೆಚ್ಚಿವೆ. ಮರಣೋತ್ತರ ಪರೀಕ್ಷೆ ವೇಳೆ ಅವುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಸಿಗುತ್ತಿದೆ. ಮೀನಿನ ಹೊಟ್ಟೆಯಲ್ಲಿ, ಬಾತುಕೋಳಿ, ಕೊಕ್ಕರೆ ಮತ್ತಿತರ ಪಕ್ಷಿ ಗಂಟಲಲ್ಲಿ ಪ್ಲಾಸ್ಟಿಕ್ ಸಿಕ್ಕಿದ ಹಲವಾರು ಪ್ರಕರಣಗಳಿವೆ’ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ವಸಂತ ಶೆಟ್ಟಿ ವಿವರಿಸಿದರು.

ಅಕ್ರಮ ಸಾಗಣೆ: ‘ಜಿಲ್ಲೆಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನೆ ಸ್ಥಗಿತಗೊಂಡಿದೆ. ನಾಲ್ಕೈದು ಪ್ಲಾಸ್ಟಿಕ್ ಕಾರ್ಖಾನೆಗಳಿದ್ದು, ನಿಷೇಧಿತ ಪ್ಲಾಸ್ಟಿಕ್‌ಗಳ ಉತ್ಪಾದನೆ ಮಾಡದಂತೆ ಎಚ್ಚರ ವಹಿಸಲಾಗುತ್ತಿದೆ. ಆದರೆ, ದೇಶದ ಎಲ್ಲೆಡೆ ಒಂದೇ ರೀತಿಯ ಕಾಯ್ದೆ ಇಲ್ಲದ ಕಾರಣ, ಅಕ್ರಮವಾಗಿ ಮಾರುಕಟ್ಟೆಗೆ ಬರುತ್ತಿವೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೀರ್ತಿ ಕುಮಾರ್.

ಭಕ್ತರು, ಪ್ರವಾಸಿ ಹಾವಳಿ: ಜಿಲ್ಲೆಯ ಪ್ರಮುಖ ತೀರ್ಥ ಕ್ಷೇತ್ರಗಳ ಸಂಪರ್ಕ ರಸ್ತೆಯು ಅರಣ್ಯ ವ್ಯಾಪ್ತಿಯ ಮೂಲಕ ಹಾದು ಬರುತ್ತಿದ್ದು, ಭಕ್ತರು– ಯಾತ್ರಾರ್ಥಿಗಳು ಯಥೇಚ್ಛವಾಗಿ ಪ್ಲಾಸ್ಟಿಕ್ ಎಸೆಯುತ್ತಿದ್ದು, ಅರಣ್ಯ ಹಾಗೂ ವನ್ಯಜೀವಿಗಳಿಗೆ ಹಾನಿಯಾ
ಗುವ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಮಾನ್ಯತೆ ಇಲ್ಲದ ಗುಜರಿ:

‘ಪಾಸ್ಟಿಕ್ ನಿರ್ವಹಣೆಯಲ್ಲಿ ‘ಗುಜರಿ’ ಉದ್ಯಮದ ಪಾತ್ರವೇ ದೊಡ್ಡದು. ಆದರೆ, ಗುಜರಿ ಉದ್ಯಮವನ್ನು ಅಧಿಕೃತಗೊಳಿಸುವ ಯಾವುದೇ ಪರವಾನಗಿ ವ್ಯವಸ್ಥೆಯು ಇನ್ನೂ ಬಂದಿಲ್ಲ. ಹೀಗಾಗಿ, ‘ಗುಜರಿ’ ಉದ್ಯಮವನ್ನು ಅಕ್ರಮವೆಂದೇ ಪರಿಗಣಿಸಲಾಗುತ್ತಿದೆ’ ಎಂಬುದು ಗುಜರಿ ವ್ಯಾಪಾರಸ್ಥರ ದೂರು.

ಕಸ– ವ್ಯಾಜ್ಯ: ‘ಪ್ಲಾಸ್ಟಿಕ್ ಮತ್ತಿತರ ಕಸ ಸಮಸ್ಯೆಯು ನ್ಯಾಯಾಲಯವನ್ನೂ ಬಿಟ್ಟಿಲ್ಲ. ಇದೇ ವಿಚಾರವಾಗಿ ‘ಖಾಸಗಿ ಉಪಟಳ’ ಅಡಿಯಲ್ಲಿ ಈಚೆಗೆ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ’ ಎನ್ನುತ್ತಾರೆ ವಕೀಲರ ಸಂಘದ ಖಜಾಂಚಿ ಶಶಿರಾಜ್ ಕಾವೂರು.

ಮರುಬಳಕೆ: ಜಿಲ್ಲೆಯಲ್ಲಿ ಕಸದ ಮೂಲಕ ಸಂಗ್ರಹಗೊಳ್ಳುವ ಪ್ಲಾಸ್ಟಿಕ್‌ ಪೈಕಿ ಗುಣಮಟ್ಟದ್ದನ್ನು ಹರಳು ಹಾಗೂ ಪೆಲ್ಲೆಟ್‌ಗಳನ್ನಾಗಿ ಪರಿವರ್ತಿಸಿ ಪ್ಲಾಸ್ಟಿಕ್‌ ಕಾರ್ಖಾನೆಗಳಿಗೆ ರವಾನಿಸಲಾಗುತ್ತಿದೆ. ಉಳಿದಂತೆ ಕಡಿಮೆ ಮೈಕ್ರಾನ್‌ ಪ್ಲಾಸ್ಟಿಕ್‌ ಅನ್ನು ಉಂಡೆಯಾಗಿ (ಬೇಲ್‌) ಮಾಡಿ, ಸಿಮೆಂಟ್ ಮತ್ತಿತರ ಕಾರ್ಖಾನೆಗಳಿಗೆ ರವಾನಿಸಲಾಗುತ್ತಿದೆ.

ಇಷ್ಟು ಮಾತ್ರವಲ್ಲ, ಜಿಲ್ಲೆಯಲ್ಲಿ ನಿತ್ಯ ಸಂಗ್ರಹಗೊಳ್ಳುವ 500 ಟನ್‌ಗಳಷ್ಟು ಒಣ ಕಸದಿಂದ11 ಮೆಗಾ ವಾಟ್‌ ವಿದ್ಯುತ್ ಉತ್ಪಾದನೆಯ ಯೋಜನೆಯು ಕೆಪಿಸಿಎಲ್‌ ಮುಂದಿದೆ.

ಪ್ಲಾಸ್ಟಿಕ್‌ ಫಾರ್‌ ಚೇಂಜ್ ಇಂಡಿಯಾ ಫೌಂಡೇಷನ್ ಪ್ಲಾಸ್ಟಿಕ್ ಪುನರ್‌ ಬಳಕೆ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ನೀರಿನ ಬಾಟಲಿಯ ಮರುಬಳಕೆ, ಪ್ಲಾಸ್ಟಿಕ್‌ ಬಳಸಿ ಮನೆ ನಿರ್ಮಾಣ ಇತ್ಯಾದಿ ಕಾರ್ಯವನ್ನು ನಡೆಸುತ್ತಿದೆ. ಅನ್‌ ಹ್ಯಾಬಿಟೆಟ್‌ ಮತ್ತಿತರ ಸಂಸ್ಥೆಗಳು, ರೋಟರಿ, ರೆಡ್‌ಕ್ರಾಸ್, ಲಯನ್ಸ್ ಕೈಜೋಡಿಸಿವೆ. ರಾಮಕೃಷ್ಣ ಮಿಷನ್‌ ಮತ್ತು ಆಶ್ರಮವು ಈ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಕೈಗೊಂಡಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮ, ಪ್ಲಾಸ್ಟಿಕ್‌ ರಹಿತ ದಿನಾಚರಣೆ ಮತ್ತಿತರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ಮೂಲಕವೂ ಹಲವಾರು ಯೋಜನೆಗಳು ಜಾರಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT