ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಒಗ್ಗೂಡಿಸಿ ಯಾತ್ರೆಗೆ ಮಂಗಳೂರು ಕ್ಷೇತ್ರದಿಂದ 5 ಸಾವಿರ ಮಂದಿ: ಯು.ಟಿ.ಖಾದರ್‌

Last Updated 24 ಸೆಪ್ಟೆಂಬರ್ 2022, 16:22 IST
ಅಕ್ಷರ ಗಾತ್ರ

ಮಂಗಳೂರು: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ ಒಗ್ಗೂಡಿಸಿ’ (ಭಾರತ್‌ ಜೋಡೊ) ಪಾದಯಾತ್ರೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ 5 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಈ ಪಾದಯಾತ್ರೆಗೆ ವ್ಯಕ್ತವಾಗಿರುವ ಜನಬೆಂಬಲ ಕಂಡು ಬಿಜೆಪಿ ವಿಚಲಿತವಾಗಿದೆ. ಹಾಗಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವೆ ಒಗ್ಗಟ್ಟಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ನಡುವೆ ಬಿಕ್ಕಟ್ಟು ಮೂಡಿಸಲು ಅವರಿಂದ ಸಾಧ್ಯವಿಲ್ಲ’ ಎಂದರು.

‘ಗೋವಾ ಹಾಗೂ ಇತರ ಕಡೆಗಳಲ್ಲಿ ಕಾಂಗ್ರೆಸ್‌ ಕೆಲವು ನಾಯಕರು ಪಕ್ಷವನ್ನು ತೊರೆದಿರಬಹುದು. ಆದರೆ, ಪಕ್ಷದ ಸಿದ್ಧಾಂತ ಯಾವತ್ತೂ ಬದಲಾಗಿಲ್ಲ. ಎಲ್ಲ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ತತ್ವದಲ್ಲಿ ಕಾಂಗ್ರೆಸ್‌ ನಂಬಿಕೆ ಇಟ್ಟಿದೆ. ಬಿಜೆಪಿಯವರಂತೆ ಜಾತಿ– ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್‌ ಯಾವತ್ತೂ ಅನುಸರಿಸುವುದಿಲ್ಲ’ ಎಂದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಮಾನ್ಯರ ನಡುವೆ ಅವಿಶ್ವಾಸ ಬೆಳೆಸಿ ಸಮಾಜವನ್ನು ವಿಭಜಿಸುತ್ತಿವೆ. ರಾಹುಲ್‌ ಗಾಂಧಿಯವರು ಜನರ ನಡುವಿನ ಸಂಶಯ, ಅಪನಂಬಿಕೆಗಳನ್ನು ದೂರಮಾಡಿ, ದೇಶದಲ್ಲಿ ನೆಮ್ಮದಿ, ಸೌಹಾರ್ದ ಮೂಡಿಸಲು ಹಾಗೂ ಎಲ್ಲರನ್ನು ಒಗ್ಗೂಡಿಸಲು 3500 ಕಿ.ಮೀ ದೂರದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಯಾವುದೇ ಪಕ್ಷದ ನಾಯಕ ಇಷ್ಟೊಂದು ದೂರವನ್ನು ನಡೆದೇ ಕ್ರಮಿಸುತ್ತಿರುವುದು ಇದೇ ಮೊದಲು. ಯಾತ್ರೆಯು ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಕರ್ನಾಟಕವನ್ನು ಪ್ರವೇಶಿಸಲಿದ್ದು, ಇದರಲ್ಲಿ ಭಾಗವಹಿಸುವ ಆಸಕ್ತಿ ಇರುವವರು ಬ್ಲಾಕ್‌ ಮಟ್ಟದ ಮುಖಂಡರನ್ನು ಸಂಪರ್ಕಿಸಬಹುದು’ ಎಂದರು.

‘ದೇಶದಲ್ಲಿ ಬಡವರು ಮತ್ತಷ್ಟು ಬಡವರಾಗುತ್ತಿದ್ದರೆ, ಶ್ರೀಮಂತರಲ್ಲಿ ಸಂಪತ್ತು ಜಾಸ್ತಿಯಾಗುತ್ತಲೇ ಇದೆ. ವಿದ್ಯಾವಂತರೂ ನಿರುದ್ಯೋಗಿಗಳಾಗುತ್ತಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳು, ಅಡುಗೆ ಎಣ್ಣೆ, ಅಡುಗೆ ಅನಿಲ, ಬಟ್ಟೆ ದಿನಸಿ ಪದಾರ್ಥಗಳ ದರವು ಎರಡೇ ವರ್ಷಗಳಲ್ಲಿ ಶೇ 60ರಷ್ಟು ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಉದ್ಯೋಗಿಗಳ ವೇತನ ಹೆಚ್ಚಳ ಆಗುತ್ತಿಲ್ಲ. ಬದಲು ವೇತನವನ್ನೇ ಕಡಿತಗೊಳಿಸುವ, ಕೆಲಸದಿಂದ ತೆಗೆಯುವ ಬೆಳವಣಿಗೆಗಳಾಗುತ್ತಿವೆ. ವಿದೇಶಗಳಲ್ಲಿ ಉದ್ಯೋಗಕ್ಕೆ ತೆರಳಲು ಅರ್ಜಿ ಹಾಕಿದವರ ಸಂಖ್ಯೆ ದಿಗಿಲು ಮೂಡಿಸುವಂತಿದೆ. ರಾಹುಲ್‌ ಗಾಂಧಿಯವರು ಈ ವಿಚಾರಗಳ ಬಗ್ಗೆಯೂ ಸಾರ್ವಜನಿಕರಲ್ಲಿ ಚರ್ಚಿಸಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

ಎಸ್‌ಡಿಪಿಐ ಹಾಗೂ ಪಿಎಫ್ಐ ಮುಖಂಡರರನ್ನು ಮೇಲೆ ರಾಷ್ಟ್ರೀಯ ತನಿಖಾ ದಳದವರು (ಎನ್‌ಐಎ) ಬಂಧಿಸಿದ ಕುರಿತು ಪ್ರತಿಕ್ರಿಯಿಸಿದ ಖಾದರ್‌, ‘ಸಮಾಜದಲ್ಲಿ ಅಶಾಂತಿ, ಭಯ ಹುಟ್ಟಿಸುವ ಕೆಲಸ ಮಾಡಿದ್ದ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ, ಅಂತಹವರನ್ನು ಕಾನೂನು ರೀತಿಯಲ್ಲಿ ಬಂಧಿಸುವುದಕ್ಕೆ ಅವಕಾಶ ಇದೆ. ಆದರೆ, ಈ ವಿಚಾರದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಬಾರದು’ ಎಂದರು.

ಪಿಎಫ್‌ಐ ಮುಖಂಡರ ಮೇಲಿನ ಪ್ರಕರಣವನ್ನು ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಹಿಂಪಡೆಯಲಾಗಿತ್ತು ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ ಹಾಗೂ ಬಿಜೆಪಿ ಅವಧಿಯಲ್ಲಿ ಯಾರೆಲ್ಲರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂಬ ಬಗ್ಗೆ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಲಿ. ನಿರಾಧಾರ ಆರೋಪ ಮಾಡುವುದು ಸರಿಯಲ್ಲ’ ಎಂದರು.

‘ಪೇಸಿಎಂ ಭಿತ್ತಿಪತ್ರಗಳನ್ನು ಅಂಟಿಸಿದ್ದಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಸರ್ಕಾರ ಇದನ್ನೊಂದು ಅಂತರರಾಷ್ಟ್ರೀಯ ವಿಷಯವನ್ನಾಗಿಸಿದೆ. ಈ ಹಿಂದೆ ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜನಾರ್ದನ ಪೂಜಾರಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯವರು ಏನೇನೆಲ್ಲ ಹಂಚಿಕೊಂಡಿಲ್ಲ. ಅವರಿಗೆ ಕಾನೂನು ಅನ್ವಯವಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಪಕ್ಷದ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಪ್ರಶಾಂತ ರಾಜ್‌, ಸುರೇಶ್ ಭಟ್ನಗರ, ಸತ್ಯವತಿ, ಸುಕುಮಾರ್‌ ಗಟ್ಟಿ, ಬಾವ ತಲಪಾಡಿ, ಗಣೇಶ್ ತುಂಬೆ, ಹಮೀದ್‌, ಅಹಮದ್‌ ಮತ್ತಿತರರು ಇದ್ದರು.

‘ಮಂಗಳೂರು ವಿ.ವಿ ಗುಣಮಟ್ಟ ಕುಸಿತ’

‘ಮಂಗಳೂರು ವಿಶ್ವವಿದ್ಯಾಲಯದ ಗುಣಮಟ್ಟವು ಎ ದರ್ಜೆಯಿಂದ ಬಿ ದರ್ಜೆಗೆ ಕುಸಿದಿದೆ’ ಎಂದುಯು.ಟಿ.ಖಾದರ್‌ ಆರೋಪಿಸಿದರು.

‘ಪರೀಕ್ಷಾ ಫಲಿತಾಂಶಗಳು ನಿಗದಿತ ಸಮಯದಲ್ಲಿ ಪ್ರಕಟವಾಗುತ್ತಿಲ್ಲ. ವಿಶ್ವವಿದ್ಯಾಲಯ ನೀಡುತ್ತಿರುವ ಅಂಕ ಪಟ್ಟಿಗಳು ದೋಷಪೂರಿತವಾಗಿವೆ. ಯಾವುದೋ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯನ್ನು ಇನ್ಯಾವುದೋ ತರಗತಿಯ ಪರೀಕ್ಷೆಗೆ ಬಳಸಲಾಗುತ್ತಿದೆ. ವಿಶ್ವವಿದ್ಯಾಲಯದ ಜಾಗವನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಸಿಂಡಿಕೇಟ್‌ ಸದಸ್ಯರು ಬೆಂಗಳೂರಿನಲ್ಲಿ ಪಂಚಾತಾರಾ ಹೋಟೆಲ್‌ನಲ್ಲಿ ಸಭೆ ನಡೆಸುತ್ತಾರೆ’ ಎಂದು ಅವರು ಟೀಕಿಸಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಬಳಿಕ ಸ್ಥಳೀಯ ಸಂಸ್ಕೃತಿಗೆ ಸಂಬಂಧಿಸಿದ ಪಠ್ಯಕ್ರಮವನ್ನು ರೂಪಿಸಲು ಅವಕಾಶವಿದೆ. ಬೇರೆ ವಿಶ್ವವಿದ್ಯಾಲಯಗಳು ಪಠ್ಯಕ್ರಮ ಬದಲಾಯಿಸಿವೆ. ಆದರೆ ಮಂಗಳೂರು ವಿಶ್ವವಿದ್ಯಾಲಯವು ಇಲ್ಲಿನ ಪರಶುರಾಮ ಸೃಷ್ಟಿ, ನಾರಾಯಣ ಗುರುಗಳು, ಕೋಟಿ–ಚೆನ್ನಯರು, ಗುತ್ತಿನ ಮನೆಗಳ ವೈಭವ, ಕಂಬಳ, ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ, ಮೀನುಗಾರರ ಸಾಹಸ, ಮೊಗವೀರರು– ಹಿಂದೂಗಳನ್ನು ಒಳಗೊಂಡ ರಾಣಿ ಅಬ್ಬಕ್ಕನ ಸೈನ್ಯ ಪೋರ್ಚುಗೀಸರನ್ನು ಸೋಲಿಸಿದ ಕಥನಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಅವಕಾಶ ಇತ್ತು. ಶೈಕ್ಷಣಿಕ ಮಂಡಳಿಯು ಆದಷ್ಟು ಬೇಗ ಎಲ್ಲ ಪ್ರಾಧ್ಯಾಪಕರನ್ನು ವಿಶ್ವಾಸಕ್ಕೆ ಪಡೆದು ಹೊಸ ಪಠ್ಯಕ್ರಮ ರೂಪಿಸಿ ಇಂತಹ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ವಿಶ್ವವಿದ್ಯಾಲಯದ ಕುಲಪತಿಯವರನ್ನು ‌ರಾಜಕೀಯ ಪ್ರಭಾವದಿಂದ ನೇಮಕಗೊಂಡ ಸಿಂಡಿಕೇಟ್‌ ಸದಸ್ಯರು ನಿಯಂತ್ರಿಸುವ ಸ್ಥಿತಿ ಒಳ್ಳೆಯದಲ್ಲ. ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಸಿಂಡಿಕೇಟ್‌ ಸದಸ್ಯರಿಗೆ ಕುಲಪತಿಯವರು ತಿಳಿವಳಿಕೆ ಹೇಳುವಂತಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT