ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಹಾನಿ: ₹ 300 ಕೋಟಿ ಪ್ಯಾಕೇಜ್‌ ನೀಡಿ: ಶಾಸಕ ವೇದವ್ಯಾಸ ಕಾಮತ್‌ ಒತ್ತಾಯ

Published 3 ಆಗಸ್ಟ್ 2024, 13:55 IST
Last Updated 3 ಆಗಸ್ಟ್ 2024, 13:55 IST
ಅಕ್ಷರ ಗಾತ್ರ

ಮಂಗಳೂರು: ಭಾರಿ ಮಳೆಯಿಂದ ಉಂಟಾಗಿರುವ ಹಾನಿ ಸರಿಪಡಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ₹300 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಗುಡ್ಡ ಕುಸಿದು ಜಿಲ್ಲೆಯಲ್ಲಿ ನೂರಾರು ಮನೆಗಳು ನೆಲಸಮವಾಗಿವೆ. ಅನೇಕ ಕಡೆ ರಸ್ತೆಗಳು ಹದಗೆಟ್ಟಿವೆ. ಎತ್ತರ –ತಗ್ಗು ಪ್ರದೇಶದಿಂದ ಕೂಡಿರುವ ನಮ್ಮ ನಗರದಲ್ಲಿ ಅನೇಕ ಮನೆಗಳು ಅಪಾಯಕ್ಕೆ ಸಿಲುಕಿವೆ’ ಎಂದರು.

‘ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮನೆಹಾನಿಗೊಂಡರೆ ಎನ್‌ಡಿಆರ್‌ಎಫ್‌ನಿಂದ  ₹ 1.20 ಲಕ್ಷಕ್ಕೆ ₹ 3.80 ಲಕ್ಷವನ್ನು ಸೇರಿಸಿ ಒಟ್ಟು ₹ 5 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಈಗಿನ ಸರ್ಕಾರ ಎನ್‌ಡಿಆರ್‌ಎಫ್‌ ಪರಿಹಾರವನ್ನೇ ಸರಿಯಾಗಿ ನೀಡುತ್ತಿಲ್ಲ. ಅನಧಿಕೃತವಾಗಿ ವಾಸ ಇದ್ದವರಿಗೆ ಪರಿಹಾರ ನೀಡಬಾರದು ಎಂದು ಷರತ್ತು ಹಾಕಿದೆ’ ಎಂದು ಆರೋಪಿಸಿದರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಜಿಲ್ಲೆಗೆ ಭೇಟಿ ನೀಡಿದಾಗ ನಡೆಸಿದ್ದ ಸಭೆಯ ಕಾರ್ಯಸೂಚಿಯಲ್ಲಿದ್ದ ಒಂದು ಕಾಮಗಾರಿಯಾದರೂ ಅನುಷ್ಠಾನವಾಗಿದ್ದರೆ ತೋರಿಸಲಿ’ ಎಂದು ಸವಾಲು ಹಾಕಿದರು.

‘ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಎಷ್ಟಿವೆ ಎಂಬ ಮಾಹಿತಿಯೇ ಉಸ್ತುವಾರಿ ಸಚಿವರಿಗೆ ಇಲ್ಲ. ಆರೋಗ್ಯ ಇಲಾಖೆಗೆ ಡೆಂಗಿಯ ಸ್ಪಷ್ಟ ಚಿತ್ರಣದ ಅರಿವಿಲ್ಲ’ ಎಂದು ದೂರಿದರು.

ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪಕ್ಷದ ಮುಖಂಡರಾದ ನಿತಿನ್ ಕುಮಾರ್, ರವಿಶಂಕರ ಮಿಜಾರ್, ಸಂಜಯ ಪ್ರಭು, ಪೂರ್ಣಿಮಾ, ರಮೇಶ ಹೆಗ್ಡೆ, ಲಲ್ಲೇಶ್ ಕುಮಾರ್ ಭಾಗವಹಿಸಿದ್ದರು.

‘ತೆರಿಗೆ ಕಟ್ಟುವ ವರ್ತಕರೇನು ಮಾಡಬೇಕು’

‘ಬೀದಿ ಬದಿ ವ್ಯಾಪಾರಿಗಳು ತಳ್ಳು ಗಾಡಿಯಲ್ಲಿ ಮಾತ್ರ ವ್ಯಾಪಾರ ಮಾಡಬಹುದು. ಟೈಗರ್‌ ಕಾರ್ಯಾಚರಣೆಯನ್ನು ಸ್ವಾಗತಿಸಿದವರೂ ಸಾಕಷ್ಟು ಮಂದಿ ಇದ್ದಾರೆ’ ಎಂದು ವೇದವ್ಯಾಸ ಕಾಮತ್ ಸಮರ್ಥಿಸಿಕೊಂಡರು. ‘ಬೀದಿ ಬದಿ ವ್ಯಾಪಾರಕ್ಕೆ ಮಳೆಗಾಲ ಮುಗಿಯುವ ಮುನ್ನವೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುತ್ತೇವೆ’ ಎಂದರು.

‘ಅನುದಾನ ನೀಡದಿದ್ದರೆ ಹೋರಾಟ’

‘ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಹೊರತಾಗಿ ಜಿಲ್ಲೆಗೆ ಬಿಡಿಗಾಸನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಇದನ್ನು ಖಂಡಿಸಿ ಜಿಲ್ಲೆಯ ಶಾಸಕರೆಲ್ಲ ಸೇರಿ ಶೀಘ್ರವೇ ಹೋರಾಟ ನಡೆಸಲಿದ್ದೇವೆ’ ಎಂದು ವೇದವ್ಯಾಸ ಕಾಮತ್‌ ತಿಳಿಸಿದರು. ‘ಜಿಲ್ಲೆಯ ಈಗಿನ ಉಸ್ತುವಾರಿ ಸಚಿವರು ಕೇವಲ ಎರಡು ಕಾಮಗಾರಿಗಳಿಗೆ ಶಂಕು ಸ್ಥಾಪನೆ ನಡೆಸಿದ್ದು ಅವೂ ನಾನು ಮಂಜೂರು ಮಾಡಿಸಿದ್ದವು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT