ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ನಿಯಂತ್ರಣಕ್ಕೆ ತಂತ್ರಜ್ಞಾನ ಮದ್ದು

ಎನ್‌ಎಂಪಿಎ ವಿಚಕ್ಷಣ ಸಪ್ತಾಹ ಸಮಾರೋಪ: ಮರ್ಮಗೋವಾ ಬಂದರು ನಿಗಮದ ಸಿಒಒ ವಿಜಯದತ್ತ ಅಭಿಮತ
Last Updated 8 ನವೆಂಬರ್ 2022, 7:06 IST
ಅಕ್ಷರ ಗಾತ್ರ

ಮಂಗಳೂರು: ಘೋಷಣೆಗಳು ಮತ್ತು ಕಾರ್ಯಕ್ರಮಗಳಿಂದ ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಈ ಪಿಡುಗು ಇಲ್ಲದೇ ಆಗಬೇಕಾದರೆ ಮನಸ್ಥಿತಿ ಬದಲಾಗಬೇಕು ಹಾಗೂ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮರ್ಮಗೋವಾ ಬಂದರು ನಿಗಮದ ಸಿಒಒ ವಿಜಯ ದತ್ತ ಕಾಗಿತಾ ಅಭಿಪ್ರಾಯಪಟ್ಟರು.

ನವಮಂಗಳೂರು ಬಂದರು ನಿಗಮವು ಪಣಂಬೂರಿನ ಬಿಡಿಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಚಕ್ಷಣ ಸಪ್ತಾಹ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ‘ಅಭಿವೃದ್ಧಿ ಹೊಂದಿದ ಎಲ್ಲ ರಾಷ್ಟ್ರಗಳೂ ಭ್ರಷ್ಟಾಚಾರದಿಂದ ಮುಕ್ತವಾಗಿವೆ ಎಂದು ಹೇಳಲಾಗದು. ಭಾರತದಲ್ಲೂ ಭ್ರಷ್ಟಾಚಾರ ನಿಗ್ರಹಕ್ಕೆ ಅನೇಕ ಅಡ್ಡಿಗಳು ಇವೆ. ಆದರೆ ಸಾಂಸ್ಥಿಕ ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಬದಲಾವಣೆ ತರಲು ಸಾಧ್ಯ‘ ಎಂದು ಹೇಳಿದರು.

ವರದಿಯೊಂದರ ಪ್ರಕಾರ ಭಾರತದ ಜಿಡಿಪಿಯ ಶೇಕಡಾ 1.25 ಭಾಗ ಭ್ರಷ್ಟಾಚಾರದಿಂದ ಪೋಲಾಗುತ್ತಿದೆ. ಈ ಮೊತ್ತ ವಾರ್ಷಿಕ 2 ಲಕ್ಷ ಕೋಟಿ ಆಗುತ್ತದೆ. ಜನರ ಶ್ರೇಯಸ್ಸಿಗಾಗಿ ಬಳಕೆಯಾಗಬೇಕಾದ ಈ ಮೊತ್ತ ಉಳ್ಳವರ ಪಾಲಾಗುತ್ತಿದೆ.ಚುನಾವಣಾ ರಾಜಕೀಯ ದೇಶದಲ್ಲಿ ಭ್ರಷ್ಟಾಚಾರಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಈ ಪರಿಸ್ಥಿತಿಗೆ ನಾವೇ ಪರೋಕ್ಷವಾಗಿ ಕಾರಣರಾಗಿದ್ದೇವೆ. ಇದನ್ನು ಇಲ್ಲದಾಗಿಸಲು ಜನರ ಮನಸ್ಥಿತಿ ಬದಲಾಗಬೇಕು. ಕಾಯ್ದೆಯಿಂದ ಎಲ್ಲವನ್ನೂ ಬದಲಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ.ಎಸ್‌.ಹರ್ಷ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತವಿದ್ದು ಇದರಿಂದ ಪ್ರಭಾವಿತರಾಗಿರುವ ವಿದೇಶಿಗರು ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ₹10 ಲಕ್ಷ ಕೋಟಿ ಮೊತ್ತ ಹೂಡಿಕೆಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.

ಆರ್ಥಿಕವಾಗಿ ಭಾರತ ಸಶಕ್ತವಾಗಿದೆ. ಭಾರತದವರು ಇಲ್ಲದ ಯಾವ ಸಾಫ್ಟ್‌ವೇರ್ ಕಂಪನಿಯೂ ಇಲ್ಲ. ಅಂತರರಾಷ್ಟ್ರೀಯ ಮಟ್ಟದ ಹೆಸರಾಂತ ಸಂಸ್ಥೆಗಳಲ್ಲಿ ಭಾರತದ ಪ್ರತಿಭೆಗಳು ಮಿಂಚುತ್ತಿದ್ದಾರೆ. ಸೇವಾ ಕ್ಷೇತ್ರದಲ್ಲಿ ಭಾರತದ ಆಧಿಪತ್ಯವನ್ನು ಅಲ್ಲಗಳೆಯುವಂತಿಲ್ಲ ಎಂದು ಅವರು ಹೇಳಿದರು.

ನವಮಂಗಳೂರು ಬಂದರು ನಿಗಮದ ಅಧ್ಯಕ್ಷ ವೆಂಕಟರಮಣ ಅಕ್ಕರಾಜು, ಉಪಾಧ್ಯಕ್ಷ ಕೆ.ಜಿ.ನಾಥ್‌, ಮುಖ್ಯ ವಿಚಕ್ಷಣಾ ಅಧಿಕಾರಿ ಪದ್ಮನಾಭಾಚಾರ್‌ ಕೆ ಇದ್ದರು.

ಪ್ರಬಂಧ ಮತ್ತು ಘೋಷವಾಕ್ಯ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT