ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಸು ಅಂದರೆ ಗುಡಿಸುತ್ತೇವೆ, ಒರೆಸು ಅಂದರೆ ಒರೆಸುತ್ತೇವೆ: ಬಿಜೆಪಿ ಸಂಸದ ಕಟೀಲ್

Published 12 ಮಾರ್ಚ್ 2024, 9:35 IST
Last Updated 12 ಮಾರ್ಚ್ 2024, 9:35 IST
ಅಕ್ಷರ ಗಾತ್ರ

ಮಂಗಳೂರು: 'ರಾಷ್ಟ್ರೀಯ ನಾಯಕರ ಸೂಚನೆಗೆ ಬದ್ಧರಾಗಿ ಕೆಲಸ ಮಾಡುವವರು ನಾವು. ಗುಡಿಸು ಎಂದರೆ‌ ಗುಡಿಸುತ್ತೇವೆ. ಒರೆಸು ಎಂದರೆ ಒರೆಸುತ್ತೇವೆ' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, 'ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವುದು ನಮ್ಮ ಪಕ್ಷದ ವಿಶೇಷತೆ. ನಮ್ಮ‌ ರಾಷ್ಟ್ರೀಯ ನಾಯಕರು ಕೆಲವು ಯೋಜನೆಗಳನ್ನು ರೂಪಿಸಿದ್ದಾರೆ. ಪಕ್ಷವು ನಿಂತ ನೀರಾಗಬಾರದು. ಹೊಸಬರು ಬರುತ್ತಾ ಇರಬೇಕು. ಚಲಾವಣೆಯಲ್ಲಿ ಇರಬೇಕು. ಪಕ್ಷದ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರಬೇಕು. ಯಾರೇ ಅಭ್ಯರ್ಥಿ ಆದರೂ ನಮ್ಮ ಗುರಿ ಇರುವುದು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವುದು ಹಾಗೂ ಮತ್ತೆ ಬಿಜೆಪಿ ಗೆಲ್ಲುವಂತೆ ಮಾಡುವುದು' ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸ್ಪರ್ಧೆಗೆ ವಿರೋಧ ವ್ಯಕ್ತವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಸಾಮಾಜಿಕ ಜಾಲತಾಣದ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನಾವು ಇದನ್ನೇ‌ ನಂಬಿರುವವರಲ್ಲ.‌ ಸಂಘಟನೆ ಮತ್ತು ಕಾರ್ಯಕರ್ತರ ಆಧಾರದಲ್ಲಿ ಬೆಳೆದವರು. ಪಕ್ಷವು ನನಗೂ ಮೂರು ಸಲ‌ ಅವಕಾಶ ನೀಡಿದೆ. ಈಗ ಪಕ್ಷವು ಏನು ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇನೆ' ಎಂದರು.

'ನಾನು ಪಕ್ಷಕ್ಕೆ ಬಂದಿದ್ದು ಸಾಮಾನ್ಯ ಕಾರ್ಯಕರ್ತನಾಗಿ. ವಿಚಾರಧಾರೆಗಾಗಿ ಕೆಲಸ ಮಾಡುತ್ತಾ ಬಂದವನು ನಾನು. ಪಕ್ಷಕ್ಕೆ ಕೆಲಸ ಮಾಡು ಎಂದರೆ ಅದನ್ನು ಮಾಡುತ್ತೇನೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಆಗು ಆಂದರೆ ಆಗುತ್ತೇನೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸು ಎಂದರೆ ಅದಕ್ಕೂ ಸಿದ್ಧ. ಅವಕಾಶ ಸಿಕ್ಕಾಗ ನನಗೆ ನ್ಯಾಯ ಸಿಕ್ಕಿದೆ, ಅವಕಾಶ ಸಿಗದಿದ್ದಾಗ ಅನ್ಯಾಯ ಆಗಿದೆ ಎನ್ನುವವ ನಾನಲ್ಲ. ಟಿಕೆಟ್ ಕೈತಪ್ಪಿದರೂ ಯಾವುದೇ ಅಸಮಾಧಾನ ನನಗಿಲ್ಲ. ನಾವು ಮಾಡುವುದು ಸಂಘಟನೆ ಕಾರ್ಯ. ಅದಕ್ಕಾಗಿಯೇ ಇರುವವರು ನಾವು ' ಎಂದರು.

'ಪಕ್ಷವು ಎಲ್ಲರನ್ನು ಬೆಳೆಸಿದೆ. ಒಂದು ಸಲ‌ ಲೋಕಸಭೆ ಚುನಾವಣೆಯಲ್ಲಿ ಸೀಟು ಸಿಕ್ಕಿಲ್ಲ, ವಿಧಾನಸಭಾ ಚುನಾವಣೆಯಲ್ಲಿ ಸೀಟು ಸಿಕ್ಕಿಲ್ಲ ಎಂದ ಮಾತ್ರಕ್ಕೆ ಅವರನ್ನು ಪಕ್ಷವು ಕೈಬಿಟ್ಟಿದೆ ಎಂದರ್ಥವಲ್ಲ. ಅವರಿಗೆ ಮುಂದಕ್ಕೂ ಅವಕಾಶಗಳು ಸಿಗುತ್ತವೆ.‌ ಪಕ್ಷದ ಕೆಲಸ ಮಾಡುವುದಕ್ಕೂ ಜನ ಬೇಕಲ್ಲವೇ' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT