ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಫ್ಯೂ ತೆರವಿಗೆ ಆಗ್ರಹ

ಕಡಬದಲ್ಲಿ ವರ್ತಕರ ಸಂಘದಿಂದ ಪ್ರತಿಭಟನೆ, ಉಪ ತಹಶೀಲ್ದಾರರಿಗೆ ಮನವಿ ಸಲ್ಲಿಕೆ
Last Updated 4 ಸೆಪ್ಟೆಂಬರ್ 2021, 3:58 IST
ಅಕ್ಷರ ಗಾತ್ರ

ಕಡಬ(ಉಪ್ಪಿನಂಗಡಿ): ವಾರಾಂತ್ಯ ಕರ್ಫ್ಯೂ ತೆರವಿಗೆ ಆಗ್ರಹಿಸಿ, ಕಡಬ ಪೇಟೆ ಹಾಗೂ ತಾಲ್ಲೂಕಿನ ವಿವಿಧ ಪ್ರದೇಶಗಳ ವರ್ತಕರು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶುಕ್ರವಾರ ಕಡಬದಲ್ಲಿ ಪ್ರತಿಭಟನೆ ನಡೆಸಿದರು.

ಕಡಬ ತಹಶೀಲ್ದಾರ್ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಕಾರರು, ‘ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಒಂದೂವರೆ ವರ್ಷದಲ್ಲಿ ಬಟ್ಟೆ ಅಂಗಡಿ, ಪಾದರಕ್ಷೆ, ಫ್ಯಾನ್ಸಿ ಅಂಗಡಿಗಳು, ಪ್ರಿಂಟಿಂಗ್ ಪ್ರೆಸ್ ಸೇರಿದಂತೆ ಹಲವಾರು ಉದ್ಯಮಗಳು ನೆಲಕಚ್ಚಿವೆ. ಕಟ್ಟಡ, ಬಾಡಿಗೆ, ಕಾರ್ಮಿಕರ ಸಂಬಳ, ವಿದ್ಯುತ್ ಬಳಕೆ ಇಲ್ಲದಿದ್ದರೂ ನಿಗದಿತ ಶುಲ್ಕ, ಕಸ ವಿಲೇವಾರಿ ತೆರಿಗೆ, ಕುಡಿಯುವ ನೀರಿನ ತೆರಿಗೆ ಇನ್ನಿತರ ಬಿಲ್ ಪಾವತಿಸುವುದು ಸಹ ಕಷ್ಟವಾಗಿದೆ. ಈ ಸಂಕಷ್ಟದ ನಡುವೆ ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ವಿಧಿಸಿರುವುದು ಸರಿಯಲ್ಲ ಎಂದು ಪ್ರತಿಭಟನಕಾರರು ಆಕ್ಷೇಪಿಸಿದರು.
ಸಾಮಾಜಿಕ ಮುಖಂಡ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ,‘ಕೋವಿಡ್ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದಾಗ ನಾವು ಸಹಕರಿಸಿದ್ದೇವೆ. ಆದರೆ, ಈಗ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಅವೈಜ್ಞಾನಿಕವಾಗಿದೆ. ನಮ್ಮ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ವ್ಯವಹಾರ ನಡೆಯುತ್ತಲಿದೆ. ಅದೇ ರೀತಿ ಇಲ್ಲಿ ಅವಕಾಶ ನೀಡದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ’ ಎಂದರು.

ವರ್ತಕ ಮನೋಜ್ ಕೃಷ್ಣ ಬಳ್ಳೇರಿ ಮಾತನಾಡಿ, ‘ಕೋವಿಡ್ ಪ್ರಕರಣ ಹೆಚ್ಚಿರುವ ಮಂಗಳೂರು, ಬೆಂಗಳೂರು ಪ್ರದೇಶಗಳಲ್ಲಿ ವಾರಾಂತ್ಯ ಕರ್ಫ್ಯೂ ಪಾಲನೆಯಾಗುತ್ತಿಲ್ಲ. ಆದರೆ, ಕಡಬಕ್ಕೆ ಪ್ರತ್ಯೇಕ ನಿಯಮ ಪಾಲನೆ ಮಾಡಲು ಹೇಳುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವರ್ತಕರಾದ ವಿವೇಕಾನಂದ ಬೊಳ್ಳಾಜೆ, ಅಬ್ಬಾಸ್ ಕಡಬ, ಅನ್ವರ್, ಸಂತೋಷ್ ಉಳಿಪ್ಪು, ಸತೀಶ್ ನಾಯ್ಕ್ ಮೇಲಿನಮನೆ, ಟಿ.ಎಂ. ಮ್ಯಾಥ್ಯೂ, ಸುಜಿತ್ ಪಿ.ಕೆ, ಚಂದ್ರಶೇಖರ ಕರ್ಕೇರ, ಗೋಪಾಲ್ ಮೇಲಿನಮನೆ, ಮಹಮ್ಮದ್ ಅಶ್ರಫ್, ಮುತ್ತುಕುಮಾರ್, ರತ್ನಾಕರ ಹೆಗ್ಡೆ, ಅಶೋಕ್ ಹೆಗ್ಡೆ, ಇ.ಜೆ. ಮ್ಯಾಥ್ಯೂ, ರಾಕೇಶ್ ಚೌದರಿ, ಅಶೋಕ್ ರೈ ಅಬ್ದುಲ್ ರಶೀದ್, ಉಮ್ಮರ್ ಫಾರೂಕ್, ಕೆ.ಎಮ್. ಹನೀಫ್ ಇದ್ದರು.

ಉಪ ತಹಶೀಲ್ದಾರ್ ಕೆ.ಟಿ. ಮನೋಹರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT