ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾಕ್ಕೆ ಬಲ ತುಂಬಿದ ಸ್ತ್ರೀಶಕ್ತಿ: ಶೇ 109ರಷ್ಟು ಸಾಧನೆ

ಉದ್ಯೋಗ ಖಾತರಿ ಯೋಜನೆಯಲ್ಲಿ ಶೇ 109ರಷ್ಟು ಸಾಧನೆ
Last Updated 1 ಏಪ್ರಿಲ್ 2022, 7:14 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಮಹಿಳೆಯರು ಬಲ ತುಂಬಿದ್ದಾರೆ. ವರ್ಷಾಂತ್ಯದಲ್ಲಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಶೇ 109ರಷ್ಟು ಸಾಧನೆಯಾಗಿದೆ.

ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ಹಲವರು ನರೇಗಾವನ್ನು ನೆಚ್ಚಿಕೊಂಡಿದ್ದರಿಂದ ಉದ್ಯೋಗ ಚೀಟಿ ಪಡೆದವರ ಸಂಖ್ಯೆ ಹೆಚ್ಚಾಗುವುದರ ಜತೆಗೆ, ಕಳೆದ ವರ್ಷವೂ ಜಿಲ್ಲೆಯಲ್ಲಿ ಗುರಿ ಮೀರಿ ಸಾಧನೆಯಾಗಿತ್ತು. ಪ್ರಸ್ತುತ ಎಲ್ಲ ಕ್ಷೇತ್ರಗಳು ಸಹಜ ಸ್ಥಿತಿಗೆ ಮರಳಿದ್ದರೂ, 2021–22ರಲ್ಲಿ 11,357 ಜನರು ಹೊಸದಾಗಿ ಉದ್ಯೋಗ ಚೀಟಿ ಪಡೆದು ಕೊಂಡಿದ್ದಾರೆ. ಈವರೆಗೆ ಒಟ್ಟು 1,51,495 ಜಾಬ್ ಕಾರ್ಡ್‌ ವಿತರಣೆ ಯಾಗಿವೆ.

2020–21ರಲ್ಲಿ ಜಿಲ್ಲೆಯಲ್ಲಿ 16 ಲಕ್ಷ ಮಾನವ ದಿನಗಳ ಗುರಿ ನಿಗದಿಯಾಗಿತ್ತು. ಆದರೆ, 16.52 ಲಕ್ಷ ಮಾನವ ದಿನಗಳು ಸೃಜನೆಯಾಗಿದ್ದವು. ಈ ವರ್ಷ ಇದೇ ಗುರಿ ನಿಗದಿಯಾಗಿದ್ದರೂ, 17.15 ಲಕ್ಷ ಮಾನವ ದಿನಗಳು ಸೃಜನೆಯಾಗಿವೆ ಎನ್ನುತ್ತಾರೆ ಅಧಿಕಾರಿಗಳು.

ವೈಯಕ್ತಿಕ ಕಾಮಗಾರಿಗೆ ಬೇಡಿಕೆ: ಜಿಲ್ಲೆಯಲ್ಲಿ ಅಡಿಕೆ ತೋಟ ಅಭಿವೃದ್ಧಿ, ಕುರಿ ಶೆಡ್, ಸೋಕ್ ಪಿಟ್ ನಿರ್ಮಾಣ, ಎರೆಹುಳು ಗೊಬ್ಬರ ತೊಟ್ಟಿ, ತೆರೆದ ಬಾವಿಯಂತಹ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಬೇಡಿಕೆ ಇದೆ. ಸಮುದಾಯ ಕಾಮಗಾರಿಗಳಿಗೆ ಅಷ್ಟಾಗಿ ಬೇಡಿಕೆ ಇರಲಿಲ್ಲ. ಆದರೆ, ಈ ಬಾರಿ ಸಮುದಾಯ ಕಾಮಗಾರಿಗಳು ಹೆಚ್ಚು ನಡೆದಿವೆ. ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಮತ್ತಿತರ ಸರ್ಕಾರಿ ಕಚೇರಿಗಳಲ್ಲಿ 150ಕ್ಕೂ ಹೆಚ್ಚು ಮಳೆನೀರು ಇಂಗುಗುಂಡಿ ನಿರ್ಮಾಣ ಮಾಡಲಾಗಿದೆ ಎಂದು ನರೇಗಾ ಉಸ್ತುವಾರಿ ಅಧಿಕಾರಿಗಳು ಹೇಳುತ್ತಾರೆ.

‘ನರೇಗಾ ಕಾಮಗಾರಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ 42ರಷ್ಟು ಇತ್ತು. ಈಗ ಈ ಪ್ರಮಾಣ ಶೇ 50ಕ್ಕೆ ಏರಿಕೆಯಾಗಿದೆ. ಮಹಿಳಾ ಕಾಯಕೋತ್ಸವ, ಕೆರೆ, ಮೈದಾನ, ನಾಲಾ, ಸ್ವಚ್ಛ ಸಂಕೀರ್ಣದಂತಹ ಸಮುದಾಯ ಕಾಮಗಾರಿ ಕೈಗೆತ್ತಿಕೊಳ್ಳುವ ಜತೆಗೆ, ಸಾರ್ವಜನಿ
ಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಮನೆ–ಮನೆ ಸಮೀಕ್ಷೆ ನಡೆಸಿ, ಉದ್ಯೋಗ ಚೀಟಿ ನೀಡಲಾಗಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್ ಅವರು.

ಕೂಲಿ ಮೊತ್ತ ₹ 309ಕ್ಕೆ ಏರಿಕೆ

ನಗರಕ್ಕೆ ಸಮೀಪ ಇರುವ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕೆಲಸಕ್ಕೆ ಬೇಡಿಕೆ ಕಡಿಮೆ ಇದೆ. ಆದರೆ, ಉಳಿದ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ದಿನಕ್ಕೆ ಒಬ್ಬರಿಗೆ ಸಲಕರಣೆ ವೆಚ್ಚ ಸೇರಿ, ₹ 299 ಕೂಲಿ ದೊರೆಯುತ್ತಿತ್ತು. ಏಪ್ರಿಲ್ 1ರಿಂದ ಸರ್ಕಾರ ಕೂಲಿ ಮೊತ್ತವನ್ನು ₹ 309ಕ್ಕೆ ಏರಿಕೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT