ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆಗೆ ಹೊಂದಿಸಲು ‘ಮಾದರಿ ಕೊಂಕಣಿ’

ಭಾಷೆಗೆ ಶಿಷ್ಟ ರೂಪ ನೀಡುವ ಯೋಜನೆಗೆ ವಿಶ್ವ ಕೊಂಕಣಿ ಕೇಂದ್ರದ ಸಾರಥ್ಯ– ನಂದಗೊಪಾಲ ಶೆಣೈ
Published 11 ಫೆಬ್ರುವರಿ 2024, 7:15 IST
Last Updated 11 ಫೆಬ್ರುವರಿ 2024, 7:15 IST
ಅಕ್ಷರ ಗಾತ್ರ

ಮಂಗಳೂರು: ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನ ಅಡಿ ಇಡುತ್ತಿರುವ ಕಾಲಘಟ್ಟದಲ್ಲಿ ಪ್ರಾದೇಶಿಕ ಭಿನ್ನತೆಗಳನ್ನು ಮೀರಿ ಸರ್ವಸಮ್ಮತವಾಗುವಂತಹ  ‘ಮಾದರಿ ಭಾಷೆ’ಯೊಂದನ್ನು ರೂಪಿಸುವ ಕಾರ್ಯಯೋಜನೆಗೆ ವಿಶ್ವ ಕೊಂಕಣಿ ಕೇಂದ್ರ ನೇತೃತ್ವ ವಹಿಸಲಿದೆ.

ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಇಲ್ಲಿ ಏರ್ಪಡಿಸಿರುವ ವಿಶ್ವ ಕೊಂಕಣಿ ಸಮಾರಂಭದಲ್ಲಿ ಶನಿವಾರ ನಡೆದ  ‘ಕೊಂಕಣಿ ಭಾಷಾಭಿವೃದ್ಧಿಗೆ ಕೃತಕ ಬುದ್ಧಿಮತ್ತೆ ಅಳವಡಿಕೆ' ಗೋಷ್ಠಿಯ ಅಂತ್ಯದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅವರು ಈ ವಿಚಾರವನ್ನು ಪ್ರಕಟಿಸಿದರು.

25 ಲಕ್ಷಕ್ಕೂ ಅಧಿಕ ಜನರು ಬಳಸುವ, ಸುಮಾರು 42 ಆಡುಭಾಷೆಗಳನ್ನು ಒಳಗೊಂಡ ಕೊಂಕಣಿಯ ಶೈಲಿ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ. ಕೊಂಕಣಿ ಸಾಹಿತ್ಯ ರಚನೆಗೆ ಬಳಸುವ ಲಿಪಿಗಳೂ ಬೇರೆ ಬೇರೆ. ಇಂತಹ ಸಂದರ್ಭದಲ್ಲಿ ಜಗತ್ತಿನಾದ್ಯಂತ ಬೇರೆ ಬೇರೆ ಪ್ರದೇಶದಲ್ಲಿ ನೆಲೆಸಿರುವ ಎಲ್ಲ ಕೊಂಕಣಿಗರೂ ಒಪ್ಪುವಂತೆ ಭಾಷೆಗೆ ಸಾಂಸ್ಥಿಕ ರೂಪ ನೀಡಬೇಕಿದೆ. ಎಲ್ಲರಿಗೂ ಅರ್ಥವಾಗುವ ಶಿಷ್ಟ ಭಾಷೆಯನ್ನು ರೂಪಿಸುವ ಅನಿವಾರ್ಯ ಇದೆ ಎಂಬ ಸರ್ವಸಮ್ಮತ ಅಭಿಪ್ರಾಯ ಈ ಗೋಷ್ಠಿಯಲ್ಲಿ ವ್ಯಕ್ತವಾಯಿತು.

‘ಬೇರೆ ಬೇರೆ ಪ್ರದೇಶದ ಶೈಲಿಗಳನ್ನು ಕ್ರೋಢೀಕರಿಸಿ, ಅವುಗಳು ಎಲ್ಲರಿಗೂ ಅರ್ಥವಾಗುವಂತೆ ಶಿಷ್ಟ ಮಾದರಿಯನ್ನು ರೂಪಿಸಲು ಸಮಿತಿಯೊಂದನ್ನು ರಚಿಸಬೇಕು. ಇದಕ್ಕಾಗಿ ದತ್ತಾಂಶಗಳನ್ನು ಕಲೆ ಹಾಕುವುದರ ಜೊತೆಗೆ, ಈ ಯೋಜನೆಯ ಭಾರತೀಯ ಭಾಷಾ ಸಂಸ್ಥಾನದ ತಜ್ಞರ ನೆರವನ್ನೂ ಬಳಸಿಕೊಳ್ಳಬೇಕು’ ಎಂದು ಶಿಕ್ಷಣ ತಜ್ಞೆ ಕಿರಣ್‌ ಬುಡ್ಕುಳೆ ಸಲಹೆ ನೀಡಿದರು.

‘ಎಲ್ಲರೂ ಒಪ್ಪಿದರೆ ಈ ಮಹತ್ಕಾರ್ಯದ ನೇತೃತ್ವವನ್ನು ವಿಶ್ವ ಕೊಂಕಣಿ ಕೇಂದ್ರವೇ ವಹಿಸಿಕೊಳ್ಳಲಿದೆ. ತಂತ್ರಜ್ಞಾನದ ಬೆಳವಣಿಗೆ ಬದುಕಿನ ಅಗತ್ಯವೂ ಆಗಿದೆ. ತಂತ್ರಜ್ಞಾನ ಬಳಕೆ ವಿಚಾರದಲ್ಲಿ ಯಾವತ್ತೂ ಕೊಂಕಣಿ ಹಿಂದುಳಿಯ ಬಾರದು. ಶೀಘ್ರವೇ ಈ ಕುರಿತು ಕಾರ್ಯಪ್ರವೃತ್ತರಾಗುತ್ತೇವೆ’ ಎಂದು ನಂದಗೋಪಾಲ ಶೆಣೈ ತಿಳಿಸಿದರು.

‘ಆನ್‌ಲೈನ್‌ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಬಳಕೆಗೆ ಲಭ್ಯ ಇರುವ ದತ್ತಾಂಶವನ್ನು ಆಧರಿಸಿ ಕೃತಕ ಬುದ್ಧಿಮತ್ತೆಕಾರ್ಯನಿರ್ವಹಿಸುತ್ತದೆ. ಕರ್ನಾಟಕ, ಗೋವಾ ಹಾಗೂ ಕೇರಳದಲ್ಲಿ ರಚನೆಯಾದ ಕೊಂಕಣಿ ಸಾಹಿತ್ಯ ಆನ್‌ಲೈನ್‌ನಲ್ಲಿ ಸಾಕಷ್ಟು ಲಭ್ಯವಿದ್ದರೂ ಅವುಗಳ ಶೈಲಿ ಹಾಗೂ ಲಿಪಿ ಬೇರೆ ಬೇರೆಯಾಗಿರುವುದರಿಂದ ಕೃತಕ ಬುದ್ಧಿಮತ್ತೆಗೆ ಅಳವಡಿಸುವುದು ಸವಾಲಿನ ವಿಷಯ’ ಎಂದು ಕೃತಕ ಬುದ್ಧಿಮತ್ತೆ ತಜ್ಞ ಗೌರಿಶ್ ಪ್ರಭು ವಿವರಿಸಿದರು.

ಸಾಹಿತಿಗಳಾದ ದಾಮೋದರ್ ಕಾಮತ್ ಘಣೇಕರ್ ಹಾಗೂ ಸಾಹಿತಿ ಎಚ್‌.ಎಂ.ಪೆರ್ನಾಲ್‌ ಗೋಷ್ಠಿಯಲ್ಲಿ ಭಾಗವಹಿಸಿದರು. ಕೃತಕ ಬುದ್ಧಿಮತ್ತೆ ತಜ್ಞರಾದ ವೆಂಕಟರಮಣ ಕಿಣಿ ಅಮೆರಿಕದಿಂದ ವಿಡಿಯೊ ಕಾನ್ಪರೆನ್ಸ್‌ ಮೂಲಕ ಭಾಗವಹಿಸಿದರು.  ಸಾಹಿತಿಗಳಾದ ಗೋಕುಲ್ ದಾಸ್ ಪ್ರಭು ಹಾಗೂ ಮೆಲ್ವಿನ್ ರಾಡ್ರಿಗಸ್ ಸಲಹೆ ನೀಡಿದರು.

ಎರಡು ದಿನಗಳ ಸಮಾರಂಭವನ್ನು ಎಂಆರ್‌ಪಿಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಯು.ಎಸ್‌.ಸುರೇಂದ್ರ ನಾಯಕ್‌ ಉದ್ಘಾಟಿಸಿದರು.

'ಗೋವಾದ ಹೊರಗೆ ಕೊಂಕಣಿ‘ ಗೋಷ್ಠಿಯನ್ನು ಕಸ್ತೂರಿ ಮೋಹನ್ ಪೈ ಹಾಗೂ 'ಕೊಂಕಣಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ‘ ಗೋಷ್ಠಿಯನ್ನು ಕಿರಣ್‌ ಬುಡ್ಕುಳೆ ನಡೆಸಿಕೊಟ್ಟರು. 

‘ಎಲ್ಲರಿಗೆ ಸಲ್ಲುವ ನಾಟಕ ಬರಲಿ

‘ಗೌಡ ಸರಸ್ವತರ ನಾಟಕ ನೋಡಲು ಕ್ಯಾಥೋಲಿಕ್‌ ಸಮುದಾಯದವರು ಬರುವುದಿಲ್ಲ. ಕ್ಯಾಥೋಲಿಕ್‌ ಸಮುದಾಯದ ನಾಟಕಗಳು ಗೌಡ ಸರಸ್ವತರಿಗೆ ಅಷ್ಟಕ್ಕಷ್ಟೆ. ಇದನ್ನು ಮೀರಿ ಎಲ್ಲರಿಗೂ ಸಲ್ಲುವಂತಹ ನಾಟಕಗಳ ಅಗತ್ಯ ಕೊಂಕಣಿ ಭಾಷೆಗೆ ಅಗತ್ಯವಿದೆ’ ಎಂದು ರಂಗ ಕರ್ಮಿ ಎಲ್.ಕೃಷ್ಞಭಟ್ ಅಭಿಪ್ರಾಯಪಟ್ಟರು.

‘ಕೊಂಕಣಿ ರಂಗಭೂಮಿ ಇಂದು ಮತ್ತು ಮುಂದೆ' ಗೋಷ್ಠಿಯಲ್ಲಿ ಅವರು  ಮಾತನಾಡಿದರು. ರಂಗಕರ್ಮಿ  ಕ್ರಿಸ್ಟೋಫರ್‌ ‘ಕೊಂಕಣಿ ರಂಗಭೂಮಿಯಲ್ಲೂ ಸಾಕಷ್ಟು ವಿಭಿನ್ನ ಪ್ರಯೋಗಗಳಾಗಿವೆ. ಆದರೆ ಮರಾಠಿಗೆ ಹೋಲಿಸಿದರೆ ನಾವು ಇನ್ನೂ ಬಹಳಷ್ಟು ದೂರ ಸಾಗಬೇಕಿದೆ’ ಎಂದರು.

ಸಮನ್ವಯಕಾರರಾಗಿದ್ದ ಜಾನ್‌ ಎಂ.ಪೆರ್ಮನ್ನೂರು ‘ಪ್ರಭುತ್ವಕ್ಕೆ ಸವಾಲೆಸೆಯುಂತಹ ನಾಟಕಗಳು ಹೆಚ್ಚಬೇಕು. ನಾಟಕ ಕೇವಲ ಮನರಂಜನೆಯ ಮಾಧ್ಯಮ ಅಲ್ಲ. ಅದು ಸಮಾಜ ಪರಿವರ್ತನೆಯ ಚಿಂತನೆಗಳಿಗೆ ಕಿಡಿಹಚ್ಚುವಂತಿರಬೇಕು’ ಎಂದು ಪ್ರತಿಪಾದಿಸಿದರು.

ರಂಗಕರ್ಮಿ ಪ್ರಕಾಶ್ ಶೆಣೈ ‘ಬೇರೆ ರಂಗಭೂಮಿಗಳಂತೆಯೇ ಕೊಂಕಣಿ ರಂಗಭೂಮಿಯೂ ಇತ್ತೀಚಿನ ದಿನಗಳಲ್ಲಿ ಸೊರಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡಿ ರಂಗಾಸಕ್ತರನ್ನು ಹುಟ್ಟುಹಾಕುವ ಕೆಲಸ ಆಗಬೇಕು’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT