ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ: ಸಚಿವ ಎಸ್.ಅಂಗಾರ

ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಸಚಿವ ಎಸ್.ಅಂಗಾರ
Last Updated 27 ಸೆಪ್ಟೆಂಬರ್ 2021, 13:32 IST
ಅಕ್ಷರ ಗಾತ್ರ

ಮಂಗಳೂರು: ‘ಪರಿಸರ ರಕ್ಷಣೆಯ ಎಚ್ಚರಿಕೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ವಿವಿಧ ಯೋಜನೆ ರೂಪಿಸಲಾಗುವುದು’ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ನಗರದ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಕೃತಿಯು ಸ್ವಯಂ ಆಗಿ ರೂಪಿಸಿಕೊಂಡಿರುವ ಅನೇಕ ವಿಶೇಷ ತಾಣಗಳು ಜಿಲ್ಲೆಯಲ್ಲಿವೆ. ಪ್ರವಾಸಿಗರನ್ನು ಸೆಳೆಯಲು ಪೂರಕವಾಗಿ ಇವು ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಇವುಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ನಿಯಮಗಳನ್ನು ಸರಳೀಕರಿಸಿದರೆ ಹೆಚ್ಚು ಉದ್ಯಮಿಗಳನ್ನು ಸೆಳೆಯಬಹುದು. ಉದ್ಯಮಗಳಿಗೆ ಅವಕಾಶ ದೊರೆತಾಗ ಬಂಡವಾಳ ಹೂಡಿಕೆ ಹೆಚ್ಚಾಗಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಣುತ್ತದೆ’ ಎಂದರು.

ಮೀನುಗಾರಿಕೆ, ಬಂದರು ಅಭಿವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮೀನುಗಾರಿಕೆಯಲ್ಲಿ ಜಟ್ಟಿ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ‘320 ಕಿ.ಮೀ. ಉದ್ದದ ಕರಾವಳಿ ಹೊಂದಿರುವ ಕರ್ನಾಟಕವು ಕೇರಳ ಹಾಗೂ ಗೋವಾ ರಾಜ್ಯಗಳಂತೆ ಪ್ರವಾಸೋದ್ಯಮದಲ್ಲಿ ಬೆಳವಣಿಗೆ ಕಂಡಿಲ್ಲ. ದೂರದೃಷ್ಟಿ ಯೋಜನೆಗಳ ಮೂಲಕ ಪ್ರವಾಸೋದ್ಯಮವನ್ನು ಔನ್ನತ್ಯಕ್ಕೆ ಒಯ್ಯಬೇಕಾಗಿದೆ’ ಎಂದರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸುವ ಎರಡು ನಿಮಿಷಗಳ ವಿಡಿಯೊವನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್,ಮೂಡ ಅಧ್ಯಕ್ಷ ರವಿಶಂಕರ ಮಿಜಾರು ಇದ್ದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕ್ಷೇತ್ರಗಳ ಉದ್ಯಮಿಗಳ ಉಪಸ್ಥಿತಿಯಲ್ಲಿ ಚರ್ಚಾಗೋಷ್ಠಿಗಳು ನಡೆದವು.

‘ಬ್ಲ್ಯೂ ಫ್ಲ್ಯಾಗ್ ಮಾನ್ಯತೆ’

‘ಕೇರಳದ ಬೇಕಲ್, ನೆರೆಯ ಪಡುಬಿದ್ರೆ ಬೀಚ್‌ನಂತೆ ಮಂಗಳೂರಿನ ತಣ್ಣೀರುಬಾವಿ, ಇಡ್ಯ ಬೀಚ್‌ಗಳಿಗೆ ಬ್ಲ್ಯೂ ಫ್ಲ್ಯಾಗ್ ಮಾನ್ಯತೆ ಒದಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಇದರಿಂದ ಕಡಲ ತೀರಗಳು ಹೆಚ್ಚು ಅಭಿವೃದ್ಧಿ ಆಗುವುದರಿಂದ ಅಧಿಕ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT