ಶುಕ್ರವಾರ, ಮಾರ್ಚ್ 31, 2023
33 °C

ಚಿರನಿದ್ರೆಗೆ ಯಕ್ಷ ಕಲಾವಿದ ಶೀನಪ್ಪ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ (78) ವಯೋಸಹಜ ಕಾಯಿಲೆಯಿಂದ ಮಂಗಳವಾರ ನಿಧನರಾದರು. ಅವರಿಗೆ ಪತ್ನಿ ಗಿರಿಜಾವತಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ಹಲವು ದಿನಗಳಿಂದ ಅವರು ಮಂಗಳೂರಿನ ಮಗನ ಮನೆಯಲ್ಲಿ ನೆಲೆಸಿದ್ದರು. ರಕ್ತಬೀಜಾಸುರ, ಹಿರಣ್ಯಾಕ್ಷ, ಶಿಶುಪಾಲ, ದೇವೇಂದ್ರ, ಕರ್ಣ, ಅರ್ಜುನ, ಮಹಿಷಾಸುರ ಮುಂತಾದ ಪಾತ್ರಗಳಿಗೆ ಅವರು ಪ್ರಸಿದ್ಧರಾಗಿದ್ದರು. ಸೋಮನಾಥೇಶ್ವರ, ವೇಣೂರು, ಕಟೀಲು, ಇರುವೈಲು, ಸೌಕೂರು, ಚೌಡೇಶ್ವರಿ, ಎಡನೀರು ಮೇಳಗಳಲ್ಲಿ ಕಲಾವಿದರಾಗಿದ್ದ ಅವರು, ಸುಮಾರು ಐದೂವರೆ ದಶಕಗಳ ಕಾಲ ಯಕ್ಷಗಾನ ಕ್ಷೇತ್ರಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟವರು.

ಕೊಡಗು ಜಿಲ್ಲೆ ಸಂಪಾಜೆಯ ರಾಮಣ್ಣ ರೈ ಪುತ್ರ ಶೀನಪ್ಪ ರೈ ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದರು. ಚಿಕ್ಕಂದಿನಿಂದ ಕಲಾಸಕ್ತರಾಗಿದ್ದ ಅವರು ತಂದೆಯಿಂದ ಯಕ್ಷಗಾನದ ಪ್ರಾಥಮಿಕ ಶಿಕ್ಷಣ ಪಡೆದರು. ತಂದೆಯಿಂದ ಅರ್ಥಗಾರಿಕೆ, ಕುಂಬಳೆ ಕಣ್ಣನ್ ಅವರಿಂದ ನಾಟ್ಯ, ಬಣ್ಣದ ಕುಟ್ಟಪ್ಪ ಅವರಿಂದ ಬಣ್ಣಗಾರಿಕೆ, ಕೇಶವ ಮಾಸ್ತರರಿಂದ ಭರತನಾಟ್ಯವನ್ನು ಕಲಿತವರು ಶೀನಪ್ಪ ರೈ.

13ನೇ ವಯಸ್ಸಿನಲ್ಲಿ ಕಲ್ಲಾಡಿ ಕೊರಗ ಶೆಟ್ಟರ ಇರಾ ಸೋಮನಾಥೇಶ್ವರ ಕುಂಡಾವು ಮೇಳದಲ್ಲಿ ಕಲಾವಿದರಾಗಿ ತಿರುಗಾಟ ಪ್ರಾರಂಭಿಸಿದರು. ನಂತರ, ವಿವಿಧ ಮೇಳಗಳಲ್ಲಿ ಕಲಾವಿದರಾಗಿ, ಕಟೀಲು ಮೇಳದಲ್ಲಿ ಸುದೀರ್ಘ ಕಲಾ ಸೇವೆ ಸಲ್ಲಿಸಿದ್ದರು.

ಅವರ ಯಕ್ಷ ಕಲಾ ಸೇವೆಗೆ ಯಕ್ಷಗಾನ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಪ್ರಶಸ್ತಿಗಳು ಸಂದಿವೆ.

‘ತೆಂಕುತಿಟ್ಟು ಯಕ್ಷಗಾನದಲ್ಲಿ ಕಿರೀಟ ವೇಷದಲ್ಲಿ ತಮ್ಮದೇ ಆದ ಛಾಪು ಒತ್ತಿದ ಕಲಾವಿದ ಶೀನಪ್ಪ ರೈ. ಅವರ ದೇವೇಂದ್ರ, ಅರ್ಜುನಾದಿ ಪಾತ್ರಗಳು, ಖಳನಾಯಕ ಪಾತ್ರಗಳು ಯಕ್ಷ ಪ್ರೇಮಿಗಳ ಮನದಲ್ಲಿ ಛಾಪು ಒತ್ತಿವೆ. ಯಕ್ಷರಂಗದಲ್ಲಿ ಆಯಾಸವೇ ಇಲ್ಲದ ಕಲಾವಿದ. ತಿರುಗಾಟದಲ್ಲಿ ಒಂದೇ ದಿನ ಎರಡು ಪಾತ್ರ ನಿರ್ವಹಿಸುತ್ತಿದ್ದರು. ಮಹಿಷಾಸುರನ ಪಾತ್ರ ಮಾಡಿ, ರಕ್ತಬೀಜಾಸುರನ ಪಾತ್ರ ನಿರ್ವಹಿಸುತ್ತಿದ್ದರು. ಎರಡೂ ಶ್ರಮದ ಪಾತ್ರಗಳು. ಹಳೆಯ ಪರಂಪರೆಯ ಬಣ್ಣಗಾರಿಕೆ ಶೈಲಿ ಅವರದು. ಅವರ ರಂಗ ನಡೆ ಚಂದ. ಸಹೃದಯಿ, ಸಜ್ಜನ, ಕೃತ್ರಿಮತೆ ಇಲ್ಲದ ವ್ಯಕ್ತಿಯಾಗಿದ್ದರು’ ಎಂದು ಕಟೀಲು ಮೇಳದ ಸಂಚಾಲಕ ಸುಣ್ಣಂಬಳ ವಿಶ್ವೇಶ್ವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು